ಜಗನ್ಮೋಹಿನಿ ರೂಪದಲ್ಲಿ ಕಂಗೊಳಿಸಿದ ಶ್ರೀನಿವಾಸ

WD
ಬ್ರಹ್ಮಾಂಡನಾಯಕ ಶ್ರೀನಿವಾಸನ ಬ್ರಹ್ಮೋತ್ಸವದ ಐದನೇ ದಿನವಾದ ಬುಧವಾರ (ಸೆ.19) ಬೆಳಿಗ್ಗೆ ಕ್ಷೀರಸಾಗರ ಮಥನ ಕಾಲದಲ್ಲಿ ಉದ್ಭವಿಸಿದ ಜಗನ್ಮೋಹಿನಿಯ ಸಂಕೇತವಾಗಿ ಮೋಹಿನಿ ಅವತಾರೋತ್ಸವವು ವೈಭವದಿಂದ ಜರುಗಿತು.

ಸಮುದ್ರಮಥನ ವೇಳೆ ದೊರೆತ ಅಮೃತಕ್ಕಾಗಿ ದೈತ್ಯರು ಮತ್ತು ದೇವತೆಗಳು ನನಗೆ ಮೊದಲು, ತನಗೆ ಮೊದಲು ಎಂದು ಜಗಳಕ್ಕಿಳಿದಾಗ, ಮೋಹಿನಿ ಅವತಾರ ತಾಳಿ, ದಾನವರನ್ನು ಮರುಳುಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದ ಮಹಾವಿಷ್ಣುವಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಉತ್ಸವ.

ಮೋಹಿನಿ ರೂಪದಲ್ಲಿ ಸಾಲಂಕೃತ ದೇವರನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ಒಯ್ದಾಗ ನೆರೆದಿದ್ದ ಭಕ್ತಜನರು ಗೋವಿಂದ ನಾಮಸ್ಮರಣೆ ಮಾಡುತ್ತಾ ಶ್ರೀನಿವಾಸನ ವೈಭವವನ್ನು ಮನಸಾ ಕೊಂಡಾಡಿದರು.

ಸಂಜೆ ಉಯ್ಯಾಲೆ ಸೇವೆ ಆದ ಬಳಿಕ, ಪರಿವಾರ ದೇವರುಗಳೊಂದಿಗೆ ವೆಂಕಟೇಶ್ವರನನ್ನು ಗರುಡ ವಾಹನದಲ್ಲಿ ಕುಳ್ಳಿರಿಸಿ ವಿಶ್ವವಿಖ್ಯಾತ ಗರುಡವಾಹನ ಉತ್ಸವ ಜರುಗಲಿದೆ.

ಪುರಾಣದ ಪ್ರಕಾರ, ಪಕ್ಷಿರಾಜ ಗರುಡನು ವೇದಗಳ ಪ್ರತಿರೂಪ. ಮಹಾವಿಷ್ಣುವು ವೇದಗಳ ಒಡೆಯ. ಆದುದರಿಂದಾಗಿ ದೇವರು ತನ್ನನ್ನು ಗರುಡನ ಮೇಲೆ ಕಾಣುತ್ತಾನೆ. ವೈಷ್ಣವ ಪುರಾಣಗಳಲ್ಲಿ ಹೇಳುವಂತೆ, ಗರುಡನನ್ನು ಪೆರಿಯತಿರುವದಿ (ಮೊದಲ ಭಕ್ತಾಗ್ರೇಸರ) ಎಂದೂ ಉಲ್ಲೇಖಿಸಲಾಗಿದೆ.

ಆದುದರಿಂದಾಗಿಯೇ ಶ್ರೀವೆಂಕಟೇಶ್ವರನು ಬ್ರಹ್ಮೋತ್ಸವದ ಅತ್ಯಂತ ಪ್ರಮುಖ ದಿನದಂದು ಗರುಡನನ್ನು ತನ್ನ ವಾಹನವಾಗಿ ಆರಿಸಿಕೊಳ್ಳುತ್ತಾನೆ. ಎಲ್ಲಾ ವಾಹನ ಉತ್ಸವಗಳಲ್ಲಿ ಗರುಡ ವಾಹನೋತ್ಸವವು ಅತ್ಯಂತ ಜನಾಕರ್ಷಣೀಯವಾದುದು ಮತ್ತು ಮಹತ್ತರವೂ ಆದುದು. ಈ ದಿನ ಭಕ್ತಾದಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಿರುತ್ತದೆ.

ವೆಬ್ದುನಿಯಾವನ್ನು ಓದಿ