ಗರುಡ ವಾಹನದಲ್ಲಿ ಶ್ರೀನಿವಾಸ ವೈಭವ

WD
ತಿರುಮಲ ಶ್ರೀವಾರಿ ಬ್ರಹ್ಮೋತ್ಸವದ ಅತ್ಯಂತ ಪ್ರಮುಖ ಮತ್ತು ಐದನೇ ದಿನವಾದ ಬುಧವಾರ ರಾತ್ರಿ ವಿಶ್ವವಿಖ್ಯಾತ ಗರುಡ ವಾಹನೋತ್ಸವವು ಭಕ್ತ ಜನಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

ತನ್ನ ಭಕ್ತಾಗ್ರೇಸರನ ಭುಜದ ಮೇಲೆ ರಾರಾಜಿಸುತ್ತಿದ್ದ ಬ್ರಹ್ಮಾಂಡನಾಯಕನನ್ನು ನೋಡಲು ಹೆಂಗಸು, ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಭಕ್ತರು ರಥಬೀದಿಯಲ್ಲಿ ಕಾತುರದಿಂದ ಕಾಯುತ್ತಿದ್ದರು.

ಸಂಪೂರ್ಣ ಏಳು ಬೆಟ್ಟಗಳು ಗೋವಿಂದ ನಾಮಸ್ಮರಣೆಯಿಂದ ತುಂಬಿ ಹೋಗಿದ್ದವು. ಶ್ರೀವಾರಿ ವೆಂಕಟೇಶ್ವರ ದೇವರನ್ನು ಲಕ್ಷ್ಮೀಹಾರ, ಮಕರ ಕಂಠಿ, ಸಹಸ್ರನಾಮ ಹಾರ ಮತ್ತು ಇತರ ಅತ್ಯಮೂಲ್ಯ ಆಭರಣಗಳಿಂದ ಅಲಂಕರಿಸಲಾಗಿತ್ತು.

ಚಿನ್ನದ ಗರುಡನ ಮೇಲೆ ಕುಳಿತ ಶ್ರೀನಿವಾಸನು ರಥಬೀದಿಯಲ್ಲಿ ಸುತ್ತು ಬರುತ್ತಿರುವಂತೆ ನೆರೆದಿದ್ದ ಭಕ್ತರು ಭಕ್ತಿಸಂಭ್ರಮದಿಂದ ಪುನೀತಭಾವ ತಳೆದರು.

ಅದೃಶ್ಯರೂಪದಲ್ಲಿ ಸೃಷ್ಟಿಕರ್ತ ಬ್ರಹ್ಮನು ಕುಳಿತಿದ್ದ ಬ್ರಹ್ಮರಥವನ್ನು ಮಕ್ಕಳು ಸೇರಿದಂತೆ ಭಕ್ತಾದಿಗಳು ಭಕ್ತಿಯಿಂದ ಎಳೆದರು. ಸುಂದರವಾಗಿ ಅಲಂಕರಿಸಲಾಗಿದ್ದ ಆನೆ, ಕುದುರೆಗಳು ಕಣ್ಮನ ಸೆಳೆಯುತ್ತಿದ್ದವು. ವೇದ ಮಂತ್ರೋಚ್ಛಾರಣೆ, ಮಂಗಳವಾದ್ಯಗಳು, ಪಂಚವಾದ್ಯವು ಮೊಳಗುತ್ತಿರುವಂತೆ, ದೇಶದೆಲ್ಲೆಡೆಯಿಂದ ಆಗಮಿಸಿದ ಭಜನಾ ವೃಂದಗಳು ಕೂಡ ಭಗವಂತನನ್ನು ಭಜಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡವು.

ಮುಖ್ಯ ಅರ್ಚಕ ಎ.ವಿ.ರಮಣ ದೀಕ್ಷಿತರು ಇತರ ಅರ್ಚಕರೊಂದಿಗೆ ಸೇರಿ ಶ್ರೀದೇವರಿಗೆ ಆರತಿ ಬೆಳಗಿದರು.

ಮಹಾವಿಷ್ಣುವು ತನ್ನ ಭಕ್ತಾಗ್ರೇಸರನಾಗಿರುವ ಪಕ್ಷಿರಾಜ ಗರುಡನನ್ನು ಬ್ರಹ್ಮೋತ್ಸವದ ಅತ್ಯಂತ ಪ್ರಮುಖ ದಿನದಂದು ತನ್ನ ವಾಹನವಾಗಿ ಆರಿಸಿಕೊಳ್ಳುತ್ತಾನೆ. ಗರುಡ ವಾಹನೋತ್ಸವ ಪ್ರಯುಕ್ತ ತಿರುಮಲದಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಾಗಿತ್ತು.

ವೆಬ್ದುನಿಯಾವನ್ನು ಓದಿ