ಮೋದಕ ಪ್ರಿಯನಿಗೆ ಮೋದದಿ ನಮಿಸೋಣ...

ಚಂದ್ರಾವತಿ ಬಡ್ಡಡ್ಕ
PTI

"ವಕ್ರ ತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ

ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾಃ"

ಆನೆ ಮೊಗದ, ಮಹಾಕಾಯದ, ಕೋಟಿ ಸೂರ್ಯನಿಗೆ ಸಮವಾದ ಪ್ರಭೆಯುಳ್ಳ ಸರ್ವ ವಿಘ್ನಗಳ ನಿವಾರಕನೆ, ಸರ್ವಕಾರ್ಯವನ್ನು ಶುಭವಾಗಿಸು ದೇವನೆ ಎಂಬುದು ಈ ಶ್ಲೋಕದ ಭಾವಾರ್ಥ. ಯಾವುದೇ ಕಾರ್ಯ ಆರಂಭಿಸುವುದಿದ್ದರೆ ಮೊದಲ ಪೂಜೆ ಗಣಪತಿಗೆ. ಎಲ್ಲ ವಿಘ್ನಗಳ ನಿವಾರಿಸುವ ದೇವನೆ ಎಂದು ಪೂಜಿಸಿ ಕಾರ್ಯ ಆರಂಭಿಸುವುದು ಹಿಂದೂ ಸಂಪ್ರದಾಯ.

ಶಿವಪಾರ್ವತಿಯರ ಮುದ್ದಿನ ಕುಮಾರ ಗಣೇಶನ ಹುಟ್ಟಿದ ದಿನ ವಿನಾಯಕ ಚತುರ್ಥಿ. ವಿಶ್ವಾದ್ಯಂತ ಭಕುತಜನ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಿ ಅತೀವ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಭಾದ್ರಪದ ಮಾಸದ ಶುಕ್ಲಪಕ್ಷದ ನಾಲ್ಕನೆ ದಿವಸವನ್ನು ಗಣೇಶ ಚತುರ್ಥಿಯಾಗಿ ಆಚರಿಸಲಾಗುತ್ತದೆ.

ಗಣಪತಿ ಒಲಿದರೆ ಸರ್ವವಿಘ್ನಗಳು ನಾಶಗೊಂಡು ಸರ್ವಕಾರ್ಯಗಳು ಸಿದ್ಧಿಸುತ್ತವೆ ಎಂದು ಪ್ರತೀತಿ. ಸಿಹಿತಿಂಡಿಗಳ ಪ್ರಿಯನಾದ ಗಣಪತಿಯನ್ನು ಒಲಿಸಿಕೊಳ್ಳಲು ಅಂದು ವಿಶೇಷ ಭಕ್ಷ್ಯಗಳನ್ನು ಮಾಡಿ ದೇವರಿಗೆ ಅರ್ಪಿಸಲಾಗುತ್ತದೆ. ಗಣಪತಿಯ ಹೆಸರೇ ಮೋದಕ ಪ್ರಿಯ. ಚೌತಿಯಂದು ಮೋದಕ, ಕರ್ಜಿ ಕಾಯಿ, ಉಂಡೆ ಚಕ್ಕುಲಿಗಳು ಸೇರಿದಂತೆ ಬಗೆಬಗೆಯ ಸಿಹಿತಿಂಡಿಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಭಕ್ತಿಯಿಂದ ಪೂಜಿಸಲಾಗುತ್ತದೆ.

ಭಾದ್ರಪದ ಶುಕ್ಲದ ಚೌತಿಯದಿನದಂದು ಈ ಎಲ್ಲ ಸಂಭ್ರಮ ಹೌದು. ಆದರೆ ಆ ದಿನದಂದು ಚಂದಿರನನ್ನು ನೋಡಿದರೆ ಯಾವುದಾದರೂ ಅಪವಾದ ಮೆತ್ತಿಕೊಳ್ಳುತ್ತದೆ. ಇದ್ಯಾಕೆ ಹೀಗೆ ಎಂದರೆ ಇದರ ಹಿಂದೆಯೊಂದು ಕತೆಯಿದೆ.

ಗಣಪತಿ ದೇವ ಅದೊಂದು ಹುಟ್ಟುಹಬ್ಬದ ದಿನ ಮನೆಮನೆಗೆ ತೆರಳಿ ಎಲ್ಲರು ಕೊಟ್ಟ ಸಿಹಿತಿಂಡಿಗಳನ್ನು ತಿಂದು ತನ್ನ ಡೊಳ್ಳೊಟ್ಟೆಯನ್ನು ಉಬ್ಬಿಸಿ ತನ್ನ ವಾಹನ ಇಲಿಯ ಮೇಲೆ ಸವಾರಿ ಮಾಡುತ್ತಿದ್ದನಂತೆ. ದಾರಿಯಲ್ಲಿ ಒಂದು ಹಾವು ಹರಿದುಹೋಗುತ್ತಿತ್ತು. ಹಾವನ್ನು ಕಂಡು ಬೆದರಿದ ಇಲಿ ಎಡವಿದಾಗ ಕೆಳಗೆ ಬಿದ್ದ ಗಣಪನ ಹೊಟ್ಟೆಬಿರಿಯಿತು. ದಂತ ಮುರಿಯಿತು. ತಿಂದದ್ದೆಲ್ಲ ಹೊರಗೆ ಬಂತು. ಮೇಲೆದ್ದ ಗಣಪ ಹೊಟ್ಟೆಯಿಂದ ಬಿದ್ದದ್ದನ್ನೆಲ್ಲ ತಿರುಗಿ ಹೊಟ್ಟೆಗೆ ಸೇರಿಸಿ ಮತ್ತೆ ಚೆಲ್ಲದಂತೆ ಅದೇ ಹಾವನ್ನು ಹಿಡಿದು ಹೊಟ್ಟೆಗೆ ಕಟ್ಟಿ ಮತ್ತೆ ಸವಾರಿ ಹೊರಟನಂತೆ. ಗಣಪನ ಅವಸ್ಥೆ ಕಂಡು ಬಾನಿನಲ್ಲಿದ್ದ ಚಂದ್ರ ನಕ್ಕ. ಗಣಪನಿಗೆ ಚಂದ್ರನ ಹಾಸ್ಯ ಅಪಹಾಸ್ಯದಂತೆ ಭಾಸವಾಯಿತಲ್ಲದೆ ಸಿಟ್ಟಿಗೆದ್ದು ಶಾಪವನ್ನೇ ಕೊಟ್ಟುಬಿಟ್ಟ. ಇನ್ನು ಮುಂದೆ ನಿನ್ನನ್ನು ಯಾರೂ ಯಾವಾಗಲೂ ನೋಡದಿರಲಿ, ನೋಡಿದರೆ ಅವರಿಗೆ ಅಪವಾದ ಬರಲಿ ಎಂಬ ಕಠಿಣ ಶಾಪವದು.

PTI
ಇಷ್ಟರಲ್ಲಿ ಚಂದ್ರನ ಹಾಸ್ಯಪ್ರಜ್ಞೆ ಇಳಿದು ಶಾಪದ ಬಿಸಿ ತಟ್ಟಿತು. ಶಾಪವನ್ನು ಹಿಂತೆಗೆದುಕೊಳ್ಳುವಂತೆ ಪರಿಪರಿಯಾಗಿ ಬೇಡಿಕೊಂಡ. ಅಷ್ಟರಲ್ಲಿ ಗಣಪನೂ ಕೊಂಚ ತಣ್ಣಗಾಗಿದ್ದ. ತನ್ನ ಶಾಪವನ್ನು ಸ್ವಲ್ಪ ಮೆದುವಾಗಿಸಿ "ಯಾರೂ ಯಾವಾಗಲೂ ನೋಡದಿರಲಿ"ಯನ್ನು ಸ್ವಲ್ಪ ತಿದ್ದುಪಡಿ ಮಾಡಿ ಭಾದ್ರಪದ ಶುಕ್ಲಚೌತಿಯಂದು ಯಾರೂ ನಿನ್ನನ್ನು ನೋಡಬಾರದು, ಯಾರಾದರೂ ನಿನ್ನ ನೋಡಿದರೆ ಅವರಿಗೆ ಶಾಪ ತಟ್ಟುತ್ತದೆ. ಮಾತ್ರವಲ್ಲ ಇತರ ತಿಂಗಳುಗಳ ಕೃಷ್ಣಪಕ್ಷದ ಚತುರ್ಥಿಯಂದು ನಿನ್ನನ್ನು ನೋಡಿದ ನಂತರವೇ ಎಲ್ಲರೂ ಊಟಮಾಡಲಿ ಎಂದ. ಇದೇ ಸಂಕಷ್ಟ ಚತುರ್ಥಿಯಂದು ವ್ರತಹಿಡಿದವರು ಚಂದ್ರದರ್ಶನವಾದ ಬಳಿಕವೇ ಊಟಮಾಡಬೇಕು ಎಂಬುದರ ಹಿನ್ನೆಲೆ. ಹಾಗಾಗಿ ಚೌತಿಯ ದಿನದಂದು ಬಾನಿನಲ್ಲಿರುವ ಚಂದ್ರಮನನ್ನು ನೋಡಬಾರದು. ನೋಡಿದರೆ ಅನಾವಶ್ಯಕ ಸುಳ್ಳು ಅಪವಾದ ಬರುತ್ತದೆ ಎಂಬ ನಂಬುಗೆ ಇದೆ.

ಚೌತಿಯ ದಿನದಂದು ಅವರವರ ಶಕ್ತ್ಯಾನುಸಾರ ಮನೆಗಳಲ್ಲಿ ಮಣ್ಣಿನ ಗಣಪನನ್ನು ಕೂರಿಸಿ, ಶೃಂಗರಿಸಿ ಪೂಜೆ ಮಾಡುತ್ತಾರೆ. ಒಂದುದಿನ, ಮೂರು ದಿನ ಅಥವಾ ಬೆಸ ಸಂಖ್ಯೆಯ ದಿನಗಳ ಕಾಲ ಪೂಜೆ ಮಾಡಿ ಬಳಿಕ ಗಣಪನ ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ. ಆದರೆ ಕೆಲವೆಡೆ ಒಂದು ಮಂಡಲ (48 ದಿನ) ಕಾಲ ಗಣಪನನ್ನು ಇರಿಸಿ ವಿಸರ್ಜನೆ ಮಾಡಲಾಗುತ್ತದೆ. ಮನೆಮನೆಯಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಕೂರಿಸಿ ಪೂಜೆ ಮಾಡುವುದು ಮಾತ್ರವಲ್ಲದೆ, ಸಾರ್ವಜನಿಕ ಗಣೇಶೋತ್ಸವಗಳು ತುಂಬ ಪ್ರಸಿದ್ಧ. ಎಲ್ಲೆಡೆ ಗಣೇಶೋತ್ಸವ ಸಂಘಟನೆಗಳಿದ್ದು ವಂತಿಗೆ ಸಂಗ್ರಹಿಸುವ ಇವುಗಳು ಸಾರ್ವಜನಿಕವಾಗಿ ಗಣೇಶನ ಮೂರ್ತಿಯನ್ನು ಕುಳ್ಳಿರಿಸುತ್ತಾರೆ. ಭಕ್ತರು ತಾಮುಂದು, ನಾಮುಂದು ಎಂಬಂತೆ ಗಣೇಶ ಚತುರ್ಥಿಯನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಊರಿಗೆ ಊರೇ ಬಂದು ದೇವರ ದರ್ಶನಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿ ಸಂತುಷ್ಟ ಮನದಿಂದ ಮನೆಗೆ ತೆರಳುತ್ತಾರೆ.

ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆಯನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಹುಟ್ಟುಹಾಕಿದರು. ಜನತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಅರಿವನ್ನು ಮೂಡಿಸಲು ಮತ್ತು ಸಂಘಟಿಸಲು ಅವರು ಧಾರ್ಮಿಕ ಕಾರ್ಯಕ್ರಮವನ್ನು ಬಳಸಿಕೊಂಡಿದ್ದರು. ಅದೇ ಸಂಪ್ರದಾಯ ಮುಂದುವರಿದು ಇಂದು ಅಲ್ಲಲ್ಲಿ ಗಣೇಶೋತ್ಸವಗಳು ನಡೆಯುತ್ತಿವೆ. ಈ ಉತ್ಸವಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆಯಾಗುತ್ತಿದ್ದು, ಪ್ರತಿಭಾ ಪ್ರದರ್ಶನಕ್ಕೂ ಎಡೆನೀಡುತ್ತಿದೆ.

ಹಬ್ಬದ ಸಾಲುಗಳಲ್ಲಿ ಬರುವ ಮೊದಲ ಹಬ್ಬ ಎಂದೂ ಜನಜನಿತವಾಗಿರುವ ಪ್ರಥಮ ಪೂಜಿತ ವಿನಾಯಕನ ಚತುರ್ಥಿಯು ಭಕ್ತಿ ಭಾವೈಕ್ಯದ ಪ್ರತೀಕ. ಎಲ್ಲಾ ಮತೀಯರೂ ಈ ಹಬ್ಬದಲ್ಲಿ ಪಾಲ್ಗೊಂಡು ಏಕತೆಯನ್ನು ಪ್ರದರ್ಶಿಸುವ ಅದೆಷ್ಟೋ ಉದಾಹರಣೆಗಳಿವೆ. ಆದರೆ ಮೆರವಣಿಗೆಯಂತಹ ಸಂದರ್ಭಗಳಲ್ಲಿ ಕೆಲವೆಡೆ ಕೆಲವೇ ಕೆಲವು ಕಿಡಿಗೇಡಿಗಳಿಂದಾಗಿ ನಡೆಯುವ ಅಹಿತಕಾರಿ ಘಟನೆಗಳು ಮಾತ್ರ ಖೇದಕರ.