ಘಮ ಘಮ ಎನ್ನುತಾದ ಮೈಸೂರ ಮಲ್ಲಿಗೆ

ಮೈಸೂರು ಮಲ್ಲಿಗೆಯ ತವರೂರು. ಘಮ್ಮೆನುವ ಸೂಜಿ ಮಲ್ಲಿಗೆ, ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ ಎಲ್ಲೆ ಎಲ್ಲೆಗೆ ಹರಡಿ ಪರಿಮಳ ಬೀರುತ್ತವೆ. ಮೊಗ್ಗಿನ ಮಾಲೆಯ ಮುಡಿದು ದಸರೆಯ ಸವಾರಿ ನೋಡಲೆಂದು ಹೊರಡುವ ಹೆಂಗಳೆಯರು ಮೈಸೂರ ಚಂದಕ್ಕೊಂದು ಗರಿಮೆಯಾದರೆ ಮಲ್ಲಿಗೆಯ ರಾಶಿ ರಾಶಿಯನ್ನು ದಸರೆಯ ಸಂದರ್ಭದಲ್ಲಿ ಬೀದಿ ಬೀದಿಗಳಲ್ಲಿ ಕಾಣಬಹುದು.

ಬಹುಶಃ ಮೈಸೂರ ಮಲ್ಲಿಗೆಯ ಪರಿಮಳಕ್ಕೆ ಸೋತೇ ಪ್ರೇಮ ಕವಿ ಕೆ.ಎಸ್. ನರಸಿಂಹ ಸ್ವಾಮಿ ತಮ್ಮ ಮೈಸೂರು ಮಲ್ಲಿಗೆ ಕವನ ಸಂಕಲನದಲ್ಲಿ "ಹೂವು ಬೇಕೇ ಎಂದು ಮುಂಬಾಗಿಲಿಗೆ ಬಂದು ಕೇಳಿದಳು, ನಗು ನಗುತ ಹೂವಿನವಳು. ಬುಟ್ಟಿಯಲಿ ನೂರಾರು ಮಲ್ಲಿಗೆ ದಂಡೆಗಳು ನಗುವ ಚೆಲ್ಲಿದುವೆನ್ನ ಮುಖವ ಕಂಡು" ಎಂದು ಬರೆದಿದ್ದಾರೆ. ಮೈಸೂರು ಪ್ರವಾಸಿಗರ ಸ್ವರ್ಗವಷ್ಟೇ ಅಲ್ಲ ಮಲ್ಲಿಗೆಯ ಸೋಪಾನ ಎಂಬುದು ಇಂದಿಗೂ ಮನೆ ಮಾತು.

ದಸರೆಯ ಮುಡಿಗೆ ಮಲ್ಲಿಗೆಯೇ ಬೇಕು. ದಸರೆಯ ದಿನಗಳಲ್ಲಿ ದೇಗುಲಗಳು ಮಲ್ಲಿಗೆಯ ಮಾಲೆಗಳಿಂದ, ಮಲ್ಲಿಗೆಯ ದಂಡೆಗಳಿಂದ ವಿಜೃಂಭಿಸುತ್ತವೆ. ಮಲ್ಲಿಗೆ ಇಂದಿಗೂ ಮೈಸೂರು ನಗರದ ಸುತ್ತ ಮುತ್ತ ಯಥೇಚ್ಛವಾಗಿ ಬೆಳೆಯುವ ಹೂವು. ಮುಂಚೆಲ್ಲಾ ಮೈಸೂರ ಅಂಗಣದ ತುಂಬೆಲ್ಲಾ ಮಲ್ಲಿಗೆಯ ತೋಟಗಳಿದ್ದವು, ಬೀರುವ ಕಂಪಿನಿಂದಾಗಿ ಮುದುಡಿದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ಅದಕ್ಕಿತ್ತು ಆದರೆ ಐಟಿ - ಬಿಟಿಗಳ ಕಂಪು, ಪಾರ್ಥೇನಿಯಂಗಳ ಕಮರು ಹರಡುತ್ತಿದ್ದಂತೆ ಮೈಸೂರಿನಲ್ಲಿ ಇಂದು ಅಷ್ಟೇನೂ ಮಲ್ಲಿಗೆಯ ಭರಾಟೆಯಿಲ್ಲ. ಆದರೆ ಅದರ ಕಂಪು ಇನ್ನೂ ಮಾಸಿಲ್ಲ.

ದಸರೆಯ ಈ ದಿನಗಳಲ್ಲಿ ಮಲ್ಲಿಗೆ ಅಲ್ಲಲ್ಲಿ ಕಂಡರೂ ನೈಜ ಮೈಸೂರು ದುಂಡು ಮಲ್ಲಿಗೆ ಕಾಣಸಿಗುವುದು ವಿರಳ. ಆದರೆ ಮಲ್ಲಿಗೆಯ ಬೀಡಾದ ಮೈಸೂರಲ್ಲೀಗ ತಮಿಳು ಮಲ್ಲಿಗೆಯ ಪರಿಮಳ. ಮೈಸೂರು ಮಲ್ಲಿಗೆ ಹೆಚ್ಚಾಗಿ ಕಾಣಸಿಗುವುದು ಎಚ್.ಡಿ.ಕೋಟೆ, ಹುಣಸೂರು, ನಂಜನಗೂಡಿನ ಆಸುಪಾಸಿನಲ್ಲಿ ಮಾತ್ರ.

ಮೈಸೂರನ್ನು ದೇವಿಯ ತವರೂರೆಂದೇ ಕರೆಯುತ್ತಾರೆ. ದೇವಿಯನ್ನು ಸಂತೃಪ್ತಿಗೊಳಿಸಲು ಮಲ್ಲಿಗೆ ಹೂವಿನ ಪೂಜೆ ಮಾಡಬೇಕೆನ್ನುತ್ತದೆ ನಮ್ಮ ಪುರಾಣಗಳು. ಬಹುಶಃ ಅದಕ್ಕೇ ಇರಬೇಕು ಇಲ್ಲಿ ಇಷ್ಟೊಂದು ಮಲ್ಲಿಗೆ ಹೂವಿನ ರಾಶಿಗಳು, ಮಲ್ಲಿಗೆ ದಂಡೆಗಳು! ವಿಸ್ಮಯ ತರುವ ವಿಚಾರವೆಂದರೆ ಮೈಸೂರು ಒಂದರಲ್ಲೇ ಪ್ರತಿ ದಿನ ಸರಾಸರಿ ಎರಡು ಸಾವಿರ ಕೆ.ಜಿ. ಮಲ್ಲಿಗೆ ಹೂವು ಖರ್ಚಾಗುತ್ತದಂತೆ. ಸಾಧಾರಣವಾಗಿ ಮಲ್ಲಿಗೆಯ ಇಳುವರಿ ಇರುವುದೇ ಫೆಬ್ರವರಿಯಿಂದ ಅಕ್ಟೋಬರ್‌ವರೆಗೆ. ದಸರೆ ಬರುವುದೂ ಸಾಧಾರಣವಾಗಿ ಅಕ್ಟೋಬರ್ ತಿಂಗಳಲ್ಲೇ! ಹಾಗಾಗೇ ಮೈಸೂರು ದಸರೆಯಲ್ಲಿ ಮಲ್ಲಿಗೆಯದೇ ಸಡಗರ.

ವೆಬ್ದುನಿಯಾವನ್ನು ಓದಿ