ಜಂಬೂ ಸವಾರಿಗೆ ಸಜ್ಜಾಗುತ್ತಿದೆ ಮೈಸೂರು

NRB
ಭಾನುವಾರ ಕರ್ನಾಟಕದ ನಾಡ ಹಬ್ಬ ದಸರಾ ಉತ್ಸವಾಚರಣೆಯ ಕಟ್ಟ ಕಡೆಯ ಭಾಗವೂ, ವಿಶ್ವ ವಿಖ್ಯಾತ ಕಾರ್ಯಕ್ರಮವೂ ಆದ ಚಾಮುಂಡೇಶ್ವರಿ ದೇವಿಯ "ಜಂಬೂ ಸವಾರಿ"ಗೆ ಮೈಸೂರಿಗೆ ಮೈಸೂರೇ ಸಜ್ಜುಗೊಂಡಿದೆ.

ಗಜರಾಜ ಬಲರಾಮನು 750 ಕಿಲೋ ತೂಕದ ಚಿನ್ನದ ಅಂಬಾರಿಯಲ್ಲಿ ವಿಜಯದಶಮಿ ದಿನವಾದ ಭಾನುವಾರ ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತು ಗಜಗಾಂಭೀರ್ಯದಿಂದ ಸಾಗುತ್ತಿದ್ದರೆ ದ್ವಾದಶ ಆನೆಗಳ ಪಡೆಯು ಬಲರಾಮನಿಗೆ ಸಾಥಿ ನೀಡಲಿವೆ. ಈ ಅಂದವನ್ನು ನೋಡುವುದೇ ಕಣ್ಣಿಗೆ ಹಬ್ಬ. ಇದಕ್ಕಾಗಿಯೇ ದೇಶ-ವಿದೇಶದಿಂದ ಜನ ಮೈಸೂರಿಗೆ ಆಗಮಿಸುತ್ತಿದ್ದಾರೆ.

ಬಲರಾಮನ ಬೆನ್ನ ಹಿಂದೆ 12 ಆನೆಗಳ ಪಡೆ ಸಾಗುವ ನಿರೀಕ್ಷೆ ಇದೆ. ಅವುಗಳಲ್ಲಿ ಗಜೇಂದ್ರ, ಅರ್ಜುನ, ಅಭಿಮನ್ಯು, ವರಲಕ್ಷ್ಮಿ ಪ್ರಮುಖವಾದುವು. ವಿಜಯದಶಮಿಯಂದು ಭಾನುವಾರ ಬೆಳಿಗ್ಗೆ ರಾಜ್ಯಪಾಲರಾದ ರಾಮೇಶ್ವರ ಠಾಕೂರ್ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ಕೊಡುತ್ತಾರೆ. ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ಜಂಬೂ ಸವಾರಿ ಸಾಗುತ್ತದೆ. ಎಂದಿನಂತೆ ಸಾಯಂಕಾಲ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು, ಟಾರ್ಚ್ ಲೈಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಬಾರಿ ಅರಮನೆ ಹೊರಗಿನ ಮೈದಾನದಲ್ಲಿ ಸುಮಾರು 12,000 ಮಂದಿ ಕೂತು ಜಂಬೂ ಸವಾರಿ ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಬಾರಿ ಆಗಿರುವ ನೂಕು ನುಗ್ಗುಲು ಈ ಬಾರಿ ಪುನರಾವರ್ತನೆಯಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಹೊರಗಡೆ ರಾಜ್ಯಗಳಿಂದಲೂ ಪೋಲೀಸರನ್ನು ಕರೆತರಲಾಗಿದೆ ಎಂದೂ ಸಹ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ