ಬಲೀಂದ್ರ ಬಲೀಂದ್ರ ಕೂ...

ರಶ್ಮಿ ಪೈ

ದೀಪಾವಳಿಯಲ್ಲಿ ಅಮಾವಾಸ್ಯೆ ಕಳೆದು ಬರುವ ದಿನವೇ ಬಲಿಪಾಡ್ಯಮಿ. ಇದನ್ನು ಮುಖ್ಯವಾಗಿ ಕೃಷಿಕರು ಭಕ್ತಿ ಸಂಭ್ರಮದಿಂದ ಆಚರಿಸುತ್ತಾರೆ.

ತಮ್ಮ ಸಂಪತ್ತು ಸಮೃದ್ಧಿಗಾಗಿ, ಭೂಲೋಕಾಧಿಪತಿಯಾದ ಬಲೀಂದ್ರ ಅಥವಾ ಬಲಿ ಚಕ್ರವರ್ತಿಯ ಕೃಪೆಗೆ ಪಾತ್ರರಾಗಲು ಆಚರಿಸುವ ಹಬ್ಬವಿದು. ಪುರಾಣವು ಹೇಳುವಂತೆ ಬಲಿ ಚಕ್ರವರ್ತಿಯನ್ನು ಭಗವಾನ್ ಮಹಾವಿಷ್ಣುವು ಸತ್ವ ಪರೀಕ್ಷೆಗೊಳಪಡಿಸಿದಾಗ, ಅಂದರೆ ತಾನಾಳುತ್ತಿರುವ ಭೂ ಪ್ರದೇಶದಿಂದ ಕೇವಲ ಮೂರು ಅಡಿ ಭೂಮಿಯನ್ನು ದಾನವಾಗಿ ನೀಡಬೇಕೆಂದು ವಾಮನ ರೂಪದಲ್ಲಿ ಬಂದ ಮಹಾವಿಷ್ಣುವು ಕೇಳಿದಾಗ, ಸತ್ಯಸಂಧನೂ, ಧಾರ್ಮಿಕನೂ ಆದ ಬಲಿಚಕ್ರವರ್ತಿಯು ಒಪ್ಪಿಕೊಂಡನು.

ಅದರಂತೆ ವಾಮನನು ತನ್ನ ಒಂದು ಪಾದದಿಂದ ಇಡೀ ಭೂಲೋಕವನ್ನೂ ಇನ್ನೊಂದರಿಂದ ಆಕಾಶವನ್ನೂ ಅಳೆದನು. ತನ್ನ ಮೂರನೇ ಪಾದವನ್ನು ಎಲ್ಲಿಡಲಿ? ಎಂದು ಕೇಳಿದಾಗ ಬಲಿಚಕ್ರವರ್ತಿಯು ವಿನಯದಿಂದ ತನ್ನ ಶಿರವನ್ನು ತಗ್ಗಿಸಿ ಮೂರನೇ ಪಾದವನ್ನು ತನ್ನ ತಲೆ ಮೇಲಿರಿಸುವಂತೆ ಕೇಳಿಕೊಂಡನು. ಕೂಡಲೇ ಪಾಮನನು ಬಲಿಯನ್ನು ಪಾತಾಳಕ್ಕೆ ತಳ್ಳಿದನು. ಹೀಗೆ ಪ್ರಜಾಸ್ನೇಹಿಯೂ ಸತ್ಯಸಂಧನೂ ಆದ ಬಲಿಯು ತನ್ನ ಪ್ರಜೆಗಳ ಸುಖ ದುಃಖವನ್ನು ವಿಚಾರಿಸಲು ವರುಷಕ್ಕೊಂದು ಬಾರಿ ಪಾತಾಳದಿಂದ ಭೂಲೋಕಕ್ಕೆ ಭೇಟಿ ನೀಡುವ ದಿನವೇ ಬಲಿಪಾಡ್ಯಮಿ. ಈ ದಿನದಂದು ಬಲೀಂದ್ರನನ್ನು ಸ್ಥಾಪಿಸುವುದೇ ಪ್ರಧಾನವಾದುದು.

ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು ಮತ್ತು ಅವಲಕ್ಕಿ ಮೊದಲಾದುವುಗಳನ್ನಿರಿಸಿ ಬಲೀಂದ್ರನನ್ನು ಸ್ಥಾಪಿಸುತ್ತಾರೆ. ಕೃಷಿಕರು ತಮ್ಮ ಗದ್ದೆಗಳಲ್ಲಿ ಬಲೀಂದ್ರನನ್ನು ಸ್ಥಾಪಿಸಿದ ನಂತರ 'ಪೊಲಿ' ಅಂದರೆ ಸುಖ ಸಮೃದ್ಧಿಗಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಆ ಪ್ರಾರ್ಥನೆಯು ಇಂತಿದೆ. " ಓ ಬಲೀಂದ್ರ, ಮೂಜಿ ದಿನ ಬಲಿ ದೆತೊಂದು ಪೊಲಿ ಕೊರ್ಲ ಕೂ..." ಅಂದರೆ "ಓ ಬಲೀಂದ್ರ,ತಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ ಸಮೃದ್ಧಿಯನ್ನು ಕರುಣಿಸು "ಎಂದಾಗಿದೆ. ಗದ್ದೆ ಮತ್ತು ಮನೆ ಪರಿಸರದಲ್ಲಿ 'ತುಡರ್' ಅರ್ಥಾತ್ ಹತ್ತಿ ಬಟ್ಟೆಯನ್ನು ಉದ್ದವಾದ ಕೋಲಿನ ತುದಿಗೆ ಸುತ್ತಿ ಅದನ್ನು ಎಣ್ಣೆಯಲ್ಲಿ ಮುಳುಗಿಸಿ ಉರಿಸಲಾಗುತ್ತದೆ.

ಇಂತಹ ಹಲವು 'ತುಡರ್'ಗಳನ್ನು ಬಾಳೆದಂಡಿನಲ್ಲಿ ಸಿಕ್ಕಿಸಿ ಗದ್ದೆಯಲ್ಲಿ ನೆಡಲಾಗುತ್ತದೆ ಮತ್ತು ಅಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಬಲೀಂದ್ರ ಪೂಜೆಯಂದು ಮನೆ ಮಂದಿಯೆಲ್ಲಾ ಹೊಸ ಬಟ್ಟೆ ಬರೆಗಳನ್ನು ಧರಿಸಿ, ಅವಲಕ್ಕಿ ಬೆಲ್ಲವನ್ನು ಸೇವಿಸಿ ಸಂತೋಷದಿಂದ ಪಟಾಕಿಗಳನ್ನು ಸಿಡಿಸಿ ಆಚರಿಸುತ್ತಾರೆ. ಓಣಂ ಹಬ್ಬದ ಐತಿಹ್ಯವಿರುವ ಬಲಿಯು ವರುಷಕ್ಕೊಮ್ಮೆ ಕೇರಳನಾಡಿಗೆ ಮಾವೇಲಿಯಾಗಿಯೂ, ಗಡಿನಾಡು ಕಾಸರಗೋಡಿಗೆ ಬಲೀಂದ್ರನಾಗಿಯೂ ಭೇಟಿ ನೀಡುವುದರಿಂದ ಕಾಸರಗೋಡಿನವರಿಗೆ ವರುಷಕ್ಕೆರಡು ಬಾರಿ ಬಲಿಯ ದರ್ಶನ ಸಾಧ್ಯವಾಗುತ್ತದೆ.

ವೆಬ್ದುನಿಯಾವನ್ನು ಓದಿ