ಧನಲಕ್ಷ್ಮೀ ಪೂಜೆ

WD
ರಶ್ಮಿ ಪೈ


ಯಾ ದೇವಿ ಸರ್ವ ಭೂತೇಷು ಲಕ್ಷ್ಮೀ ರೂಪೇನ ಸಂಸ್ಥಿತ
ನಮಸ್ತಸ್ಸೈ ನಮಸ್ತಸ್ಸೈ ನಮಸ್ತಸ್ಸೈ ನಮೋ ನಮಃ

ಧನಲಕ್ಷ್ಮೀಪೂಜೆ ಅಥವಾ ಲಕ್ಷ್ಮೀ ಪೂಜೆಯನ್ನು ದೀಪಾವಳಿ ಹಬ್ಬ ಸಂದರ್ಭ ಆಚರಿಸಲಾಗುತ್ತದೆ. ಈ ದಿನ ಧನಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿದರೆ ಸಂಪತ್ತು ಸಮೃದ್ದಿಯಾಗುವುದು ಎಂಬ ನಂಬಿಕೆ. ಅಮಾವಾಸ್ಯೆಯಂದು ಸೂರ್ಯನು ತುಲಾರಾಶಿಗೆ ಪ್ರವೇಶಿಸುವುದರಿಂದಾಗಿ ಈ ದಿನವು ಹೆಚ್ಚು ಮಹತ್ವವನ್ನು ಪಡೆದಿದ್ದು, ಅಂದು ಮನೆಯಲ್ಲಿ ಸೂರ್ಯಾಸ್ತದ ನಂತರ ಲಕ್ಷ್ಮೀ ಪೂಜೆಯನ್ನು ಕೈಗೊಳ್ಳುವುದರ ಮೂಲಕ ಸಂಪತ್ತು ಸಮೃದ್ಧಿಯನ್ನು ಕರುಣಿಸಲು ಪ್ರಾರ್ಥನೆ ನಡೆಸಲಾಗುತ್ತದೆ. ಇದು ಧನ ಅಥವಾ ವ್ಯಾಪಾರಕ್ಕೆ ಸಂಬಂಧವಿರಿಸಿಕೊಂಡಿರುವುದರಿಂದ 'ಅಂಗಡಿ ಪೂಜೆ'ಯೆಂದು ಕರೆಯಲ್ಪಡುತ್ತದೆ. ಅಂದು ವ್ಯಾಪಾರಿಗಳು ತಮ್ಮ ಲೆಕ್ಕಾಚಾರದ ಪುಸ್ತಕಗಳನ್ನು ದೇವಿಯ ಮುಂದಿರಿಸಿ ಪ್ರಾರ್ಥಿಸುವುದು ಸಂಪ್ರದಾಯ.

ಲಕ್ಷ್ಮೀಪೂಜೆಯ ಐತಿಹ್ಯದ ಪ್ರಕಾರ ಸಂಪತ್ತು, ಸಮೃದ್ಧಿಯ ಅಧಿದೇವತೆಯಾದ ಧನಲಕ್ಷ್ಮಿಯನ್ನು ಪೂಜಿಸಿ ಸಂತಸಗೊಳಿಸುವುದರಿಂದ ಸಕಲ ಸುಖ ಸಂಪತ್ತುಗಳು ಲಭಿಸುವುದು ಎಂಬುದು ನಂಬಿಕೆ. ಲಕ್ಷ್ಮೀದೇವಿಯು ಶುಚಿತ್ವಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತಾಳೆ ಮತ್ತು ಹೆಚ್ಚು ಶುಚಿಯಿರುವ ಮನೆಗೆ ಅವಳು ಸಂದರ್ಶನ ನೀಡುತ್ತಾಳೆ ಎಂಬ ಕಾರಣಕ್ಕಾಗಿ ಹೆಂಗೆಳೆಯರು ಅಂದು ಮನೆಯನ್ನು ಹೆಚ್ಚು ಸ್ವಚ್ಛವಾಗಿಯೂ, ಅಲಂಕರಿಸಿ ಲಕ್ಷ್ಮೀದೇವಿಯನ್ನು ತಮ್ಮಲ್ಲಿಗೆ ಆಹ್ವಾನಿಸಲು ಸಜ್ಜಾಗುತ್ತಾರೆ. ಅಂದು ಪೊರಕೆಗೆ ಅರಶಿನ, ಕುಂಕುಮವನ್ನಿರಿಸಿ ಪೂಜಿಸುವ ಸಂಪ್ರದಾಯವು ಕಂಡುಬರುತ್ತದೆ. ಸಂಜೆಯ ವೇಳೆ ಸುತ್ತಲೂ ದೀಪಗಳನ್ನುರಿಸಿ ದೇವಿಯನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗುತ್ತದೆ.

ಲಕ್ಷ್ಮೀಪೂಜೆಯಂದು ಐದು ದೇವತೆಗಳಿಗೆ ಒಟ್ಟಿಗೆ ಪೂಜೆ ಸಲ್ಲಿಸಲಾಗುತ್ತದೆ. ಸರ್ವ ವಿಘ್ನನಿವಾರಕನಾದ ಗಣೇಶನಿಗೆ ಮೊದಲು ಪೂಜೆ ಸಲ್ಲಿಸಿದ ನಂತರವೇ ಇನ್ನುಳಿದ ದೇವರಿಗೆ ಪೂಜೆ ಸಲ್ಲಿಸಲಾಗುವುದು. ಪ್ರಧಾನವಾಗಿ ಇಲ್ಲಿ ಲಕ್ಷ್ಮೀದೇವಿಯ ಮೂರು ಅವತಾರಗಳನ್ನು ಪೂಜಿಸಲಾಗುತ್ತದೆ. ಅವುಗಳೆಂದರೆ, ಸಂಪತ್ತು ಸಮೃದ್ಧಿಯ ದೇವತೆಯಾದ ಮಹಾಲಕ್ಷ್ಮಿ, ವಿದ್ಯಾಧಿದೇವತೆಯಾದ ಸರಸ್ವತಿ, ಮತ್ತು ದುಷ್ಟ ಸಂಹಾರಿಣಿಯಾದ ಮಹಾಕಾಳಿ. ಇವರೊಂದಿಗೆ ಧನಾಧಿಪತಿಯಾದ ಕುಬೇರನನ್ನು ಪೂಜಿಸಿ ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಉತ್ತರ ಭಾರತದ ಸಂಪ್ರದಾಯ ಪ್ರಕಾರ ದೇವಿ ಪಾರ್ವತಿಯು ತನ್ನ ಪತಿ ಪರಮಶಿವನೊಂದಿಗೆ ದೀಪಾವಳಿಯ ದಿನದಂದು ಜೂಜಾಟವಾಡಿದ್ದು, ಇದರ ಪ್ರತೀತಿಯೆಂಬಂತೆ ಜನರು ರಾತ್ರಿಯಿಡೀ ಜೂಜಾಟದಲ್ಲಿ ತೊಡಗುತ್ತಿದ್ದು, ಇದರಿಂದಾಗಿ ಮುಂಬರುವ ವರ್ಷ ಸಂಪತ್ತು ವರ್ಧಿಸುವುದು ಎಂಬ ನಂಬಿಕೆಯನ್ನಿರಿಸಿಕೊಂಡಿದ್ದಾರೆ.

ಲಕ್ಷ್ಮೀಪೂಜೆಯ ವಿಧಿ ವಿಧಾನಗಳು:

ಮೊದಲನೆಯದಾಗಿ ಪೂಜಾಗೃಹವನ್ನು ಶುಚಿಗೊಳಿಸಿ ಗಣೇಶ ಮತ್ತು ಲಕ್ಷ್ಮಿಯ ಮೂರ್ತಿಗಳನ್ನು ನೀರಿನಿಂದಲೂ ತದನಂತರ ಪಂಚಾಮೃತದಿಂದಲೂ ಅಭಿಷೇಕ ನಡೆಸಿ ಶುದ್ಧಗೊಳಿಸಲಾಗುತ್ತದೆ. ಅನಂತರ ಐದು ತುಪ್ಪದ ದೀಪಗಳನ್ನು ಉರಿಸಲಾಗುತ್ತದೆ. ಹಾಲು, ಮೊಸರು, ತುಪ್ಪ, ಸಕ್ಕರೆ ಮತ್ತು ಜೇನು ಇವುಗಳನ್ನು ಸೇರಿಸಿ ಪಂಚಾಮೃತವನ್ನು ಮಾಡಿ ಮೂರ್ತಿಯ ಮುಂದಿರಿಸಲಾಗುತ್ತದೆ. ಹಣ್ಣು ಹಂಪಲು, ಸಿಹಿತಿಂಡಿಗಳನ್ನು ಪ್ರಸಾದವಾಗಿ ಇರಿಸಿಕೊಳ್ಳಬಹುದು.

ಹೂವುಗಳನ್ನು ಅರ್ಪಿಸುವುದರ ಜೊತೆಗೆ ಕುಂಕುಮ,ಅರಶಿನವನ್ನು ಅರ್ಪಿಸಿ, ಅಗರಬತ್ತಿಯನ್ನು ಉರಿಸಿ ತುಪ್ಪದ ದೀಪಗಳನ್ನು ಹಚ್ಚಲಾಗುತ್ತದೆ. ನಂತರ ಫಲಾರ್ಪಣೆ ಮಾಡಿ, ಸಿಹಿತಿಂಡಿ, ದಕ್ಷಿಣೆ ಮತ್ತು ಕೊನೆಯದಾಗಿ ವೀಳ್ಯದೆಲೆ ಮತ್ತು ಲವಂಗವನ್ನು ಅರ್ಪಿಸಲಾಗುತ್ತದೆ. ಪ್ರಧಾನವಾಗಿ ಲಕ್ಷ್ಮಿಯ ಪಾದಕ್ಕೆ ಕಮಲದಳವನ್ನು ಅರ್ಪಿಸಿ, ಬೆಳ್ಳಿಯ ನಾಣ್ಯವನ್ನು ದೇವರ ಮುಂದಿರಿಸಿ ಲಕ್ಷ್ಮೀ ಆರತಿಯನ್ನು ಬೆಳಗಲಾಗುತ್ತದೆ. ಹೀಗೆ ಪ್ರಸಾದ ವಿತರಣೆಯಾದ ನಂತರ ಮನೆಯ ಸುತ್ತಲೂ ದೀಪಗಳನ್ನು ಹಚ್ಚಿ ಸಂಭ್ರಮದಿಂದ ಪಟಾಕಿಗಳನ್ನು ಸಿಡಿಸಿ ದೀಪಾವಳಿಯನ್ನು ಆಚರಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ