ದೀಪಾವಳಿಯ ಶುಭ ಮುಹೂರ್ತ

ದಕ್ಷಿಣ ಭಾರತದಲ್ಲಿ ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ದೀಪಾವಳಿಯನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ಬಾರಿ ನವೆಂಬರ್ 8ರಂದು ನರಕ ಚತುರ್ದಶಿ, 9ರಂದು ದೀಪಾವಳಿ ಹಾಗೂ 10ರಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ.

ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನ ಮಾಡುವ ಸಂಪ್ರದಾಯವಿದೆ. ಅಂದು ಸ್ನಾನ ಮಾಡಿ, ಮೃತ್ಯು ದೇವತೆಯಾದ ಯಮರಾಜನಿಗೆ ತರ್ಪಣ ನೀಡಿ, ಒಂದು ದೀಪವನ್ನು ಹಚ್ಚುವುದು ವಾಡಿಕೆ.

ಮರುದಿನ ಅಮಾವಾಸ್ಯೆ. ವರ್ಷದ ಅತ್ಯಂತ ಕತ್ತಲೆಯ ದಿನ ಎಂದು ಪರಿಗಣಿಸಲಾಗಿದೆ. ಅಂದು ಲಕ್ಷ್ಮೀ ಪೂಜೆ ನೆರವೇರಿಸಲಾಗುತ್ತದೆ. ಪ್ರದೋಷ ಕಾಲ ಪ್ರಶಸ್ತ. ಅಂದರೆ ಸೂರ್ಯಾಸ್ತದ ಬಳಿಕ ಒಂದೂವರೆ ಗಂಟೆ ಸಮಯದಲ್ಲಿ ಲಕ್ಷ್ಮೀ ಪೂಜೆ ಅತ್ಯಂತ ಶುಭ.

ಮೂರನೇ ದಿನ ಬಲಿ ಪಾಡ್ಯಮಿ. ಕಾರ್ತಿಕ ಶುಕ್ಲ ಪಾಡ್ಯಮಿಯಾದ ಅಂದು ಮಹಾವಿಷ್ಣುವು ವಾಮನಾವತಾರವೆತ್ತಿ ಬಲಿಯನ್ನು ಪಾತಾಳಕ್ಕೆ ತುಳಿದ ಎನ್ನಲಾಗುತ್ತಿದೆ. ಇದೇ ದಿನ ತ್ರೇತಾ ಯುಗದಲ್ಲಿ ಶ್ರೀರಾಮ ಪಟ್ಟಾಭಿಷೇಕವಾಯಿತು ಎನ್ನಲಾಗುತ್ತದೆ. ದ್ವಾಪರ ಯುಗದಲ್ಲಿ ಪಾಂಡವರು ಅಜ್ಞಾತವಾಸದಿಂದ ಕೌರವರ ಕಣ್ಣಿಗೆ ಬಿದ್ದದ್ದು ಇದೇ ದಿನ ಎಂಬ ಪ್ರತೀತಿ ಇದೆ.

ಉತ್ತರ ಭಾರತದಲ್ಲಿ ಈ ಮೂರೂ ದಿನಗಳ ಮೊದಲು ಒಂದು ದಿನ ಧನ್ ತೇರಸ್ ಆಗಿಯೂ, ಈ ಮೂರು ದಿನಗಳು ಕಳೆದು ಬರುವ ದಿನವನ್ನು ಯಮ ದ್ವಿತೀಯವನ್ನು ಭಾಯಿ ದೂಜ್ ಆಗಿಯೂ ಆಚರಿಸುತ್ತಾರೆ. ಅಂದರೆ ಅವರಿಗೆ ಐದು ದಿನಗಳ ಹಬ್ಬವಿದು.

ವೆಬ್ದುನಿಯಾವನ್ನು ಓದಿ