ದೀಪಾವಳಿ ಸಂಭ್ರಮ, ಆಗದಿರಲಿ ದುಃಖದ ಕಡಲು

ಸೋಮವಾರ, 5 ನವೆಂಬರ್ 2007 (21:58 IST)
ಗುಣವರ್ಧನ ಶೆಟ್ಟಿ
WD
ವರುಷ, ವರುಷವೂ ದೀಪಾವಳಿ ಬರುತ್ತಿದೆ, ಜತೆಯಲ್ಲಿ ತರುತಿದೆ ಸಂತಸ, ಸಂಭ್ರಮ. ಪಟಾಕಿ, ಬಾಣ, ಬಿರುಸುಗಳನ್ನು ಹಾರಿಸಿ ಆಗಸದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಿ ಸಂತೋಷ, ಸಡಗರದಿಂದ ಜನರು ನಲಿಯುತ್ತಾರೆ. ಆದರೆ ದೀಪಾವಳಿ ಬೆಳಕಿನ ಹಬ್ಬದಲ್ಲಿ ಅನೇಕ ಮಕ್ಕಳು ಕಣ್ಣು ಕಳೆದುಕೊಂಡು ಶಾಶ್ವತವಾಗಿ ಕವಿದ ಕತ್ತಲಾಗಿ ದುಃಖದಲ್ಲಿ ಮುಳುಗಿದ ನಿದರ್ಶನಗಳೂ ಇವೆ.

ಶಾಲೆಗಳಲ್ಲಿ ಪಟಾಕಿ ವಿರೋಧಿ ಅಭಿಯಾನದಲ್ಲಿ ಈ ವರ್ಷವೂ ಮಕ್ಕಳು ಪಾಲ್ಗೊಳ್ಳುತ್ತಾರೆ. ಪಟಾಕಿಗಳಿಂದ ಪರಿಸರದ ಮೇಲೆ, ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ, ಕಾಲೇಜುಗಳು ಪ್ರತಿವರ್ಷ ಪಟಾಕಿ ವಿರೋಧಿ ಅಭಿಯಾನ ಹಮ್ಮಿಕೊಳ್ಳುತ್ತವೆ.

ಶಾಲೆಗಳ ಪರಿಸರ ಕ್ಲಬ್‌ಗಳು ದೊಡ್ಡ ಮಟ್ಟದಲ್ಲಿ ಇದರ ಬಗ್ಗೆ ರಾಲಿಗಳನ್ನು ಸಂಘಟಿಸುತ್ತಾರೆ. ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತಾರೆ. ಆದರೆ ಪಟಾಕಿ ಹಬ್ಬದ ದಿನಗಳಲ್ಲಿ ಮಾತ್ರ ಮಕ್ಕಳಿಗೆ ಎಲ್ಲವೂ ಮರೆತುಹೋಗಿರುತ್ತದೆ. ಬಾಲ್ಯಸಹಜವಾದ ಕುತೂಹಲದಿಂದ ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ. ದೀವಳಿಯಲ್ಲಿ ಹೊಸ ಬಟ್ಟೆ, ಸಿಹಿತಿಂಡಿ, ಪೂಜಾ ಸಾಮಗ್ರಿಗಳು, ದೀಪಗಳ ಖರೀದಿ ಭರಾಟೆ ಬಿರುಸಿನಿಂದ ನಡೆಯುತ್ತದೆ.

ಆದರೆ ಶಾಪಿಂಗ್ ಪಟ್ಟಿಯಲ್ಲಿ ಪಟಾಕಿಗಳು ಕೂಡ ಸೇರಿರುತ್ತವೆ. ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯದ ಬಗ್ಗೆ, ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಪತ್ರಿಕೆಗಳಲ್ಲಿ, ರೇಡಿಯೊಗಳಲ್ಲಿ ,ಟೀವಿಗಳಲ್ಲಿ ಜಾಹೀರಾತು ನೀಡುತ್ತವೆ. ಪಟಾಕಿ ವಿರುದ್ಧ ಆಂದೋಳನದ ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿರುವುದಾಗಿ ಜಗಜ್ಜಾಹೀರು ಮಾಡುತ್ತದೆ. ಆದರೆ ಪಟಾಕಿ ತಯಾರಿಕೆಯನ್ನು, ಮಾರಾಟವನ್ನು ಮಾತ್ರ ನಿಷೇಧಿಸುವುದಿಲ್ಲ.

ನಿಷೇಧಿಸಿದರೆ ಪಟಾಕಿ ಉದ್ಯಮಿಗಳಿಂದ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆಯುತ್ತದೆ. ಸಾವಿರಾರು ನೌಕರರು ಬೀದಿಪಾಲಾಗುತ್ತಾರೆಂದು ಕೂಗೆಬ್ಬಿಸುತ್ತವೆ. ಆದರೆ ಅಪಾಯಕಾರಿ ಉದ್ಯಮದಲ್ಲಿ ಮಕ್ಕಳು ದುಡಿಯುತ್ತಿದ್ದರೂ ಸರ್ಕಾರ ಕುರುಡುಗಣ್ಣಾಗಿ ವರ್ತಿಸುತ್ತದೆ. ಸರ್ಕಾರಕ್ಕೂ ಆದಾಯ ಕೈತಪ್ಪಿಹೋಗುತ್ತದೆಂಬ ಭಯ. ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬಂತೆ ಸರ್ಕಾರ ಪಟಾಕಿ ಉದ್ಯಮಗಳನ್ನು ಒಂದು ಕಡೆ ಪೋಷಿಸುತ್ತಾ, ಇನ್ನೊಂದು ಕಡೆ ಪಟಾಕಿ ದುಷ್ಪರಿಣಾಮಗಳ ಬಗ್ಗೆ ಭಾಷಣ ಉದುರಿಸುತ್ತಿರುತ್ತದೆ.

ಪ್ರತಿ ವರ್ಷ ದೀಪಾವಳಿಯಲ್ಲಿ ಮಕ್ಕಳಿಗೆ ಮಾತ್ರ ಪಟಾಕಿ ಹೊಡೆಯದಿದ್ದರೆ ಸಮಾಧಾನವೇ ಇಲ್ಲ. ಶಾಲೆಗಳಲ್ಲಿ ಪಟಾಕಿ ವಿರುದ್ಧ ಮಾಡಿದ ಪ್ರತಿಜ್ಞೆ, ಪಟಾಕಿ ವಿರುದ್ಧ ಬರೆದ ಲೇಖನಗಳು, ಅಭಿಯಾನಗಳು ಎಲ್ಲವೂ ಹಬ್ಬದ ದಿನ ಬಂದ ಗಳಿಗೆಯೇ ಮರೆತುಹೋಗಿರುತ್ತದೆ. ಪೋಷಕರಿಗೂ ಮಕ್ಕಳನ್ನು ಸಂತಸದಲ್ಲಿಡಲು ಪಟಾಕಿ ತರಲೇಬೇಕೆಂಬ ಪ್ರಜ್ಞೆ ಆವರಿಸುತ್ತದೆ.

ಅಕ್ಕ, ಪಕ್ಕದ ಮನೆಗಳಲ್ಲಿ ಪಟಾಕಿ ಸದ್ದು ಕೇಳಿದಾಗ ಪರಿಸರಪ್ರಜ್ಞೆ, ಶಬ್ದಮಾಲಿನ್ಯ, ದುಷ್ಪರಿಣಾಮ ಎಲ್ಲವೂ ಬದಿಗೆಸರಿಯುತ್ತದೆ. ಕೂಡಲೇ ಪಟಾಕಿ ಖರೀದಿಗೆ ಓಡುತ್ತಾರೆ. ಪಟಾಕಿ ಕಂಡ ಕೂಡಲೇ ಮಕ್ಕಳ ಮುಖಗಳು ಅರಳುತ್ತವೆ. ಮಕ್ಕಳ ಹರುಷ ಕಂಡು ಪೋಷಕರಲ್ಲಿ ಸಂತೃಪ್ತಭಾವನೆ ಮೂಡುತ್ತದೆ.

ಸುಯ್ಯನೇ ಆಕಾಶಕ್ಕೆ ಹಾರುವ ರಾಕೆಟ್, ಡಮ್ಮೆಂದು ಹೊಡೆದು ಬಣ್ಣದ ಚಿತ್ತಾರಗಳನ್ನು ಮೂಡಿಸುವ ಪಟಾಕಿಗಳು, ಸಣ್ಣ ಮಕ್ಕಳು ರೋಲ್ ಪಟಾಕಿಗಳನ್ನು ಪಿಸ್ತೂಲಿನಲ್ಲಿ ಹೊಡೆದಾಗಲೇ ಅವಕ್ಕೆ ಖುಷಿ, ಸಂತಸ ಎಲ್ಲವೂ ಮೂಡಿರುತ್ತದೆ.

ಮದ್ಯಪಾನ ನಿಷೇಧ ಮಾಡಿದರೆ ಕೆಲವು ರಾಜ್ಯಗಳಿಗೆ ಬೊಕ್ಕಸದಲ್ಲಿ ಹಣವಿಲ್ಲದೇ ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಬಹುದು. ಸರ್ಕಾರಗಳು ಆದಾಯಕ್ಕೆ ಸಿಗರೇಟ್ ಮತ್ತು ಮದ್ಯವನ್ನು ನೆಚ್ಚಿಕೊಂಡಿರುವುದು ಸಿಗರೇಟ್ ಮತ್ತು ಮದ್ಯದ ದೊರೆಗಳಿಗೆ ಶ್ರೀರಕ್ಷೆಯಾಗಿ ಪರಿಣಮಿಸಿದೆ. ಪಟಾಕಿ ಉದ್ಯಮವೂ ಈಗ ಅದೇ ರೀತಿಯ ಸ್ವರೂಪವನ್ನು ಪಡೆದಿದೆ.

ರಾಸಾಯನಿಕ ಸಂಯೋಗ

ಅತ್ಯಂತ ಮಾಲಿನ್ಯಯುಕ್ತವಾದ ಪಟಾಕಿಗಳ ರಾಸಾಯನಿಕ ಸಂಯೋಗದ ಬಗ್ಗೆ ಸ್ವಲ್ಪ ತಿಳಿದಿದ್ದರೆ ಒಳ್ಳೆಯದು. ಟಾಕ್ಸಿಕ್ಸ್ ಲಿಂಕ್ ಎಂಬ ಸಂಘಟನೆ ಮತಾಪು ಮತ್ತು ಹೂವಿನ ಕುಂಡ ಅಥವಾ ಫ್ಲವರ್ ಪಾಟ್‌ಗಳ ಕೆಲವು ಮಾದರಿಗಳನ್ನು ಸಂಗ್ರಹಿಸಿ ಮುಂಬೈನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿತು.

ಪಟಾಕಿಗಳಲ್ಲಿ ಅತ್ಯಂತ ಅಪಾಯಕಾರಿ ಭಾರವಸ್ತುಗಳಾದ ಕ್ಯಾಡ್ಮಿಯಂ ಮತ್ತು ಸೀಸದ ಜತೆ ಕಾಪರ್, ಮ್ಯಾಂಗನೀಸ್, ಜಿಂಕ್, ಸೋಡಿಯಂ, ಮೆಗ್ನೀಸಿಯಂ, ಪೊಟ್ಯಾಸಿಯಂ ಉಪಸ್ಥಿತಿ ಪರೀಕ್ಷೆಯಲ್ಲಿ ಪತ್ತೆಯಾಯಿತು. ನೈಟ್ರೇಟ್, ನೈಟ್ರೈಟ್, ಫಾಸ್ಫೇಟ್ ಮತ್ತು ಸಲ್ಫೇಟ್ ಮುಂತಾದ ಅಸಿಡಿಕ್ ರಾಡಿಕಲ್‌ಗಳು ಪತ್ತೆಯಾದವು.

ಆರೋಗ್ಯದ ಮೇಲೆ ದುಷ್ಪರಿಣಾಮಗಳು

ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಗಾಳಿಯಲ್ಲಿ ಧೂಳು,ಕಣಗಳ ಪ್ರಮಾಣ ಹೆಚ್ಚುತ್ತದೆ. ಇದು ಕಣ್ಣು, ಗಂಟಲು ಮತ್ತು ಉಸಿರಾಟದ ಸಮಸ್ಯೆಗಳಿಗೆ ಎಡೆಮಾಡುತ್ತದೆ. ತಕ್ಷಣದ ಪರಿಣಾಮ ನಮಗೆ ಗೊತ್ತಾಗದಿದ್ದರೂ ಬಳಿಕ ಗಂಭೀರ ಆರೋಗ್ಯದ ಅಪಾಯಗಳಿಗೆ ಒಡ್ಡಬಹುದು.

ಹೃದಯ, ಶ್ವಾಸಕೋಶ ಮತ್ತು ನರಮಂಡಲದ ಸಮಸ್ಯೆಗಳಿರುವವರಿಗೆ ಪರಿಣಾಮ ಹೆಚ್ಚು, ಸಲ್ಪರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ. ಕ್ರಮೇಣ ಆಸ್ತಮಾ ಕೂಡ ಕಾಣಿಸಿಕೊಳ್ಳಬಹುದು. ಶಬ್ದ ಮಾಲಿನ್ಯದಿಂದ ಶ್ರವಣಶಕ್ತಿ ಕುಂಠಿತಗೊಳ್ಳಬಹುದು,. ಅಧಿಕ ರಕ್ತದ ಒತ್ತಡ, ಹೃದಯಾಘಾತ ಮತ್ತು ನಿದ್ರಾಹೀನತೆ ಉಂಟಾಗುತ್ತದೆ, ಶಬ್ದಮಾಲಿನ್ಯದಿಂದ ಮಕ್ಕಳು, ಗರ್ಭಿಣಿಯರು ಮತ್ತು ಉಸಿರಾಟದ ತೊಂದರೆಯಿಂದ ಬಳಲುವವರಿಗೆ ತೊಂದರೆ ಹೆಚ್ಚು,

ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಅಲರ್ಜಿಕ್ ಬ್ರಾಂಕಿಟೀಸ್, ಬ್ರಾಂಕಿಯಲ್ ಆಸ್ತಮಾ ,ನ್ಯೂಮೋನಿಯಾ, ಶೀತ ಮುಂತಾದ ಕಾಯಿಲೆಗಳಿಂದ ನರಳುವ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಪಟಾಕಿಯು ಬಾಲ್ಯದ ಬ್ರಾಂಕಿಯಲ್ ಆಸ್ತಮಾ ಕಾಯಿಲೆಗೆ ಪ್ರಚೋದಿಸುವ ಅಂಶಗಳಲ್ಲಿ ಒಂದಾಗಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ನಾನಾ ಅಂಶಗಳು ಪಟಾಕಿಗಳಲ್ಲಿ ಮಿಳಿತವಾಗಿರುವುದರಿಂದ ಮಕ್ಕಳು ಪಟಾಕಿಗಳಿಂದ ದೂರವೇ ಉಳಿಯುವುದು ಕ್ಷೇಮಕರ.