ಹಳೆಯ ಗೆಳೆಯರ ಮರೆಯಬಹುದೇ.....

WD
'ಹಳೆಯ ಕೆಳೆಯರ ಮರೆಯ ಬಹುದೇ ಕಳೆದ ಹಿಂದಿನ ದಿನಗಳಾ.... ' ಕನ್ನಡದ ಈ ಕವಿಯುಲಿ, ಗೆಳೆತನದ ಹರಹನ್ನು ಅರಿತವರಿಗಷ್ಟೇ ಅನುಭವವಾಗುವ ಸಾಲುಗಳು.

ಇಂದು ಆಚರಿಸುವ 'ಫ್ರೆಂಡ್‌ಶಿಪ್ ಡೇ' ಎಂಬ ಗೆಳೆಯರ ದಿನ ಈ ಭಾವನಾತ್ಮಕ ಸಂಬಂಧದ ವಾಣಿಜ್ಯೀಕರಣವಿರಬಹುದು.

ಆದರೆ ಪರಸ್ಪರ ಪೈಪೋಟಿ, ಕಿತ್ತಾಟ, ಥಳುಕಿನ ಈ ಯುಗಧರ್ಮದಲ್ಲಿ ಗೆಳೆತನದ ನವಿರು-ಭಾವನೆಗಳನ್ನು ಅರ್ಥೈಸುವವರು ಇರಬಹುದೇ...? ಇದ್ದಾರೆ ಲೈಮ್‌ಲೈಟ್‌ನಲ್ಲಿ ಕಾಣಲಾರರು ಅಷ್ಟೇ...

ಗೆಳೆಯರಲ್ಲಿ ಹಲವು ವಿಧ `ಅಂವ ನನ್‌ ಚಡ್ಡೀ ಗೆಳ್ಯಾ' ಅನ್ನುವಲ್ಲಿನ ಅತ್ಮೀಯತೆ, 'ನಾವಿಬ್ರೂ ಕ್ಲಾಸ್ಮೇಟ್ಸ್' ಅನ್ನುವಲ್ಲಿ ಇರಲು ಸಾಧ್ಯವಿಲ್ಲ ಅಥವಾ 'ಅವ ನಮ್ಮೂರವ' ಅನ್ನುವಲ್ಲೂ ಆ ತಾದಾತ್ಮ್ಯ ಇರಲಾರದು.

ಗೆಳೆತನವನ್ನು ವಿಶಾಲವಾಗಿ ನೆರಳು ಹರಡಿದ ವಟವೃಕ್ಷಕ್ಕೆ ಹೋಲಿಸಿದ ಕವಿಭಾವನೆಯೂ ಈ ಸಂದರ್ಭದಲ್ಲಿ ನೆನಪಾಗುತ್ತದೆ. 'ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು...' ಗೆಳೆಯರು ಎಂದರೆ ಪರಸ್ಪರರಿಗೆ ನೆರಳಾಗುವವರು, ಆ ನೆರಳಿಗೆ ಮೈ ಮರೆಸುವ ಹಿತಾನುಭವವಿರುತ್ತದೆ ಎಂಬುದೂ ಈ ಕವಿವಾಣಿಯಲ್ಲಿ ಅಧ್ಯಾಹಾರ. ಇದನ್ನೇ ಆಂಗ್ಲರು ' ಫ್ರೆಂಡ್ ಇನ್ ನೀಡ್ ಈಸ್ ಎ ಫ್ರೆಂಡ್ ಇಂಡೀಡ್' ಅಂದಿರಬಹುದು.

ಅಂದರೆ ಗೆಳೆತನದಲ್ಲಿ ಸ್ವಾರ್ಥ ಇರಬಹುದೇ ? ಈ ಮೇಲಿನ ಕಾವ್ಯಸಾಲುಗಳು ಅದನ್ನೇ ಹೇಳುತ್ತವೆಯಲ್ಲವೇ? ಇದ್ದರೂ ಇರಬಹುದು.ಅದಕ್ಕಾಗಿಯೇ 'ನಲ್ಲ ನಲ್ಲೆಯರೊಲವು, ಬಂಧು ಬಳಗದ ಬಲವು, ತನ್ನಿಚ್ಛೆ ಪೂರೈಸುವವರ ಛಲವು... ಎಳ್ಳಿನೇಳನಿತಾದರೂ ಸ್ವಾರ್ಥ ಹೊಂದಿಹವು..' ಎಂಬ ಕವಿವಾಣಿ ಉತ್ತರವಾಗಿ ಬಳಸಿಕೊಳ್ಳಬಹುದು ಎಂದನಿಸುತ್ತದೆ.

ಗೆಳೆತನದ ಕುರಿತಾಗಿ ಹೇಳುವಾಗ ಕಥೆಯೊಂದು ನೆನಪಾಗುತ್ತದೆ: ಬಹಳ ಹಿಂದಿನ ಕಾಲ. ರಾಜ್ಯವೊಂದಿತ್ತು. ಅಲ್ಲಿನ ರಾಜ ವೃದ್ಧನಾಗಿದ್ದ, ಈ ಸಂದರ್ಭದಲ್ಲಿ ಆತ ತನ್ನ ಇಬ್ಬರು ಮಕ್ಕಳನ್ನು ಕರೆದು- 'ಮಕ್ಕಳೇ ನನ್ನದೇನು ಇನ್ನು ಹೆಚ್ಚು ದಿನವಿಲ್ಲ. ನಿಮ್ಮಲ್ಲೊಬ್ಬರಿಗೆ ರಾಜ್ಯಾಧಿಕಾರದ ಪಟ್ಟಕಟ್ಟಬೇಕಿದೆ. ಅದಕ್ಕಾಗಿ ಒಂದು ಪರೀಕ್ಷೆ ಮಾಡಬೇಕೆಂದಿರುವೆ. ನೀವಿಬ್ಬರೂ ದೇಶಸಂಚಾರ ಮಾಡಿ ಸಂಪತ್ತು, ಶಕ್ತಿ ಸಂಚಯಿಸಿ ಬನ್ನಿ' ಎಂದು ತಿಳಿಸಿದ.

ಯುವಕರಿಬ್ಬರೂ ಒಂದೊಂದು ದಿಕ್ಕಿಗೆ ಸಂಚಾರ ಹೊರಟರು. ಕೆಲಕಾಲದ ಬಳಿಕ ಮರಳಿ ಬಂದರು. ಅವರಲ್ಲೊಬ್ಬ ಧನಧಾನ್ಯ, ಆಯುಧಗಳನ್ನು ಸಂಗ್ರಹಿಸಿ ತಂದಿದ್ದ- 'ಅಪ್ಪಾ ನೋಡು ಇನ್ನೇನು ನಾನೇ ರಾಜ, ಎಂತಹ ಶಕ್ತಿ ಸಂಚಯ ಮಾಡಿದ್ದೇನೆ' ಎಂದು ತನ್ನ ಹಕ್ಕಿಗಾಗಿ ವಾದಿಸಿದ.

ಇನ್ನೊಬ್ಬ ಬರಿಕೈಯಲ್ಲಿ ಬಂದು ತಂದೆಯ ಮುಂದೆ ನಿಂತ. ಬರಿಗೈಯಲ್ಲಿ ಬಂದು ನಿಂತ ಆತನನ್ನು ಮೊದಲನೆಯಾತ ತಿರಸ್ಕಾರದಿಂದ ನೋಡಿ, ವ್ಯಂಗ್ಯದ ನಗು ನಕ್ಕ. ಆಗ ತಂದೆಯೇ ಮಾತು ಆರಂಭಿಸಿದ- 'ಮಗನೇ ಹೇಗಿತ್ತು ದೇಶಸಂಚಾರ, ನೀನು ಯಾವ ರೀತಿ ಶಕ್ತಿಸಂಗ್ರಹಿಸಿದೆ?'. ಆಗ ಆತ ಉತ್ತರಿಸಿದ- ' ಅಪ್ಪಾ.. ಭೌತಿಕವಾಗಿ ನಾನೇನನ್ನೂ ಸಂಗ್ರಹಿಸಿಲ್ಲ... ಆದರೆ ಹೋದಲ್ಲೆಲ್ಲಾ ನನಗಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧರಾದ ಗೆಳೆಯರನ್ನು ಹೊಂದಿದ್ದೇನೆ... ಅಷ್ಟೇ' ಎಂದು ಅಪ್ಪನ ಮುಖ ನೋಡಿದ.

ಸಾವಿನರಮನೆಗೆ ತೆರಳಲು ಸಿದ್ಧನಾಗಿದ್ದ ಆ ವೃದ್ಧನ ಮುಖದಲ್ಲೂ ಆಗ ಹೊಸನಿರೀಕ್ಷೆಯ ಹೊಳಹು ಕಂಡಿತು. 'ಭೇಷ್... ನೀನೇ ಸರಿ. ಯಾವ ಶಸ್ತ್ರಾಸ್ತ್ರಕ್ಕಿಂತಲೂ ಸ್ನೇಹ, ಗೆಳೆತನ, ವಿಶ್ವಾಸಗಳು ಹೆಚ್ಚು ಶಕ್ತಿಯುತವಾದವುಗಳು. ಇದನ್ನು ಎಲ್ಲೆಡೆ ಹೊಂದಿದ ನಿನ್ನ ಕೈಯಲ್ಲಿ ಈ ರಾಜ್ಯ ಸುರಕ್ಷಿತ' ಎಂದು ತಿಳಿಸಿದನು. ಆತನನ್ನೇ ರಾಜನನ್ನಾಗಿ ಘೋಷಿಸಿದನು. ಗೆಳೆತನಕ್ಕೆ ಅಷ್ಟೊಂದು ಶಕ್ತಿ ಇದೆ. ಎಲ್ಲೆಲ್ಲೂ ಗೆಳೆಯರನ್ನು ಸಂಪಾದಿಸುವುದು ಸಕಲ ಐಶ್ವರ್ಯ ಆಯುಧಗಳಳ ಸಂಗ್ರಹಕ್ಕಿಂತ ಮಿಗಿಲಾದುದು.

ಆಂಗ್ಲ ಗಾದೆಯೊಂದು ಹೀಗೆ ಹೇಳುತ್ತದೆ- 'ನಿನ್ನ ಗೆಳೆಯನ ಹೆಸರು ಹೇಳು.... ನಿನ್ನ ಗುಣವನ್ನು ನಾನು ಹೇಳುತ್ತೇನೆ' ಎಂಬುದಾಗಿ. ನಮ್ಮ ಗೆಳೆಯರು ಎಂತಹವರು ಎಂಬುದು ಮಹತ್ವದ ಆಯ್ಕೆಯ ವಿಷಯ. ಮಹಾತ್ಮಾ ಗಾಂಧಿಯವರು 'ವಿವಾಹ , ವಿನೋದ(ಗೆಳೆತನ), ವಿವಾದ ಇತ್ಯಾದಿಗಳು ಸಮಾನ(ಮನಸ್ಕರು)ರಲ್ಲಿ ಮಾತ್ರ ನಡೆಯಬೇಕು' ಎಂದಿರುವುದು ಇದನ್ನೇ ಆಗಿರಬಹುದು. ಗೆಳೆಯರಾಗಿರುವವರ ಗುಣ ಹಾಗೂ ಮನೋಧರ್ಮಗಳು ಸಮಾನವಾಗಿರುವುದನ್ನು ಈ ಹೇಳಿಕೆ ಸೂಚಿಸುತ್ತದೆ.

ದೋಸ್ತಿ ಅಥವಾ ಗೆಳೆತನ ವಯೋಮಾನಕ್ಕೆ ಹೊಂದಿಕೊಂಡು ವಿಧಾನದಲ್ಲಿ ಬದಲಾಗುತ್ತದೆ. ಮಕ್ಕಳಾಗಿರುವಾಗ ಅನ್ಯೋನ್ಯವಾಗಿದ್ದು- ಹಣ್ಣು-ಮರಗಳಿಗೆ ಕಲ್ಲೆಸೆದು ಹಣ್ಣುದುರಿಸಿ... ಏಟುತಿಂದು... ಅಥವಾ ಹೊಳೆಕೆರೆಗಳಲ್ಲಿ ತೇಲಾಡಿ ಮಳೆ ಚಳಿಯಲ್ಲಿ ತೋಯಿಸಿಕೊಂಡು ಮನೆಮಂದಿಯಿಂದ ಗದರಿಸಿಕೊಂಡ ದಿನಗಳಾದರೆ... ಅದೆಷ್ಟು ನವಿರಾದ ಸವಿನೆನಪುಗಳು....

ಇವರೇ ಗೃಹಸ್ಥರಾಗಿ ಕುಟುಂಬ ಭಾರ ಹೆಗಲೇರಿದಾಗ ಗೆಳೆತನವನ್ನು ಬೇರೆ ರೀತಿಯಲ್ಲಿ ಸವಿಯುತ್ತಾರೆ, ಆದರೆ ಅದು ಬಾಲ್ಯದಂತಲ್ಲ. ಬದುಕಿನ ಕರ್ತವ್ಯಗಳ ನಡುವೆ ಅಂತರವಿದ್ದರೂ ಮಾನಸಿಕ ಸಾಮೀಪ್ಯ ಅವರಲ್ಲಿರುತ್ತದೆ.

ವೃದ್ಧಾಪ್ಯವೂ ಇವರಿಗೆ ಹಿತಕರ. ಬಾಲ್ಯದಲ್ಲಿ ಒಂದಿಗಿದ್ದು, ಜೀವನದ ಧಾವಂತದಲ್ಲೆಲ್ಲೊ ಬೇರಾಗಿ ಇಳಿಹರೆಯದಲ್ಲಿ ಮತ್ತೆ ಸೇರಿದ ಗೆಳೆಯರು- ಬದುಕಿನ ಸಂಜೆಯಲ್ಲಿ ಜೀವನಾನುಭವದ ಕಟ್ಟೆಯಲ್ಲಿ ಕುಳಿತು ಘಟನೆಗಳ ಹುರಿಕಾಳನ್ನು ಸವಿಯುವುದೂ - ಒಂದು ರೀತಿಯಲ್ಲಿ ಗೆಳೆತನದ ವಿಸ್ತೃತ ಆಯಾಮ- 'ಗೆಳೆಯರಿಬ್ಬರು ತೋಪುಮರದಲಿ ಕೆಡವಿ ತಿಂದೆವು ಹಣ್ಗಳ..... ಕೂಡಿದೆವು ಮತ್ತೀಗ ಗೆಳೆಯ... ನೀಡು ಅಮರುವ ಕೈಗಳ'- ಎಂಬ ಕವಿವಾಣಿ ಬಾಲ್ಯ ಹಾಗೂ ವೃದ್ಧಾಪ್ಯದವರೆಗೂ ವ್ಯಕ್ತಿಗಳನ್ನು ಬೆಸೆದ ಸ್ನೇಹಸೂತ್ರದ ಅರಿವನ್ನು ನೀಡುತ್ತದೆ.

ಗೆಳೆಯರು- ಗೆಳೆತನ ಎನ್ನುವುದು ಕಣ್ಣಿಗೆ ತೋರುವ ವಿಷಯವಲ್ಲ, ಅದು ಹೃದಯ ತಟ್ಟುವ ಅನುಭವ. ಅದಕ್ಕಾಗಿಯೇ ಬಲ್ಲವರು ಹೇಳುತ್ತಾರೆ ಗೆಳೆತನಕ್ಕಿಂತ ಮಿಗಿಲಾದ ಗಳಿಕೆ ಇಲ್ಲ. ಇದು ಅನುಭವಿಸಿದವರಿಗಷ್ಟೇ ಅರಿವಾಗುವ ಸತ್ಯ.

ವೆಬ್ದುನಿಯಾವನ್ನು ಓದಿ