ಹೊಸಋತುಮಾನ ಕನಸು ನನಸು...

ರಜನಿ ಭಟ್
PTI
ಮರೆಯಲಾಗದ ವರ್ಷಕ್ಕೆ ವಂದನೆಗಳೊಂದಿಗೆ
ಹೊಸ ಋತುಮಾನವು ನಿಮ್ಮಲ್ಲಿ ಚೈತನ್ಯ ತುಂಬಿ ಹೃದಯಿಸಲಿ
ಸಂಪದ್ಭರಿತವಾದ ನಿಮ್ಮೆಲ್ಲಾ ಕನಸುಗಳನ್ನು ನನಸಾಗಿಸುವ ಮರೆಯಲಾಗದ ವರ್ಷ ಬರಲೆಂದು ಇದರೊಂದಿಗೆ ಹಾರೈಸುವ ಹೊಸ ವರುಷದ ಶುಭ ಕಾಮನೆಗಳು

ಹೊಸ ವರ್ಷ ಅಂದರೆ ಹೀಗೇನೆ. ಹೊಸ ವರುಷ ಬರುತ್ತದೆ ಅಂದರೆ ಏನೋ ಖುಷಿ, ಸಂಭ್ರಮ. ಬರುವ ಮೊದಲೇ ಅದಕ್ಕಾಗಿ ತಯಾರಿ. ಹೊಸ ವರ್ಷಕ್ಕಾಗಿ ಹೊಸ ಹೊಸ ಆಸೆಗಳು, ಜೀವ ತುಂಬಲಿಟ್ಟಂತಹ ಕನಸುಗಳು ಇನ್ನೇನೋ ಇನ್ನೇನೋ.. ಇದನ್ನೆಲ್ಲವನ್ನು ಕಾರ್ಯರೂಪಕ್ಕೆ ತರಬೇಕೆಂದೇ ಛಲತೊಟ್ಟು ಹೊಸ ವರುಷಕ್ಕಾಗಿ ಹೊಸ ಚೈತನ್ಯದಿಂದ ಕಾಯುವ ಜನರು.

ಪ್ರಸಕ್ತ ವರ್ಷದಲ್ಲಿ ಏನೇನೋ ಘಟನೆಗಳು ನಡೆದಿರಬಹುದು. ನಡೆದಿರುವಂತಹವು ಕಹಿ ಘಟನೆಗಳಾಗಿದ್ದರೆ ಅಂತಹ ಜಾಗದಲ್ಲಿ ಸಿಹಿಯನ್ನು ತುಂಬುವ ಕಾತರ. ಸಂತಸಭರಿತ ಸಮಯಗಳೇ ತುಂಬಿದ್ದರೆ ಅದೇ ಹಾಯಿದೋಣಿಯನ್ನು ಮುನ್ನಡೆಸಬೇಕೆಂಬ ಛಲ. ಹೊಸತನ್ನು ತುಂಬುವ ಹಳೆಯದನ್ನು ಮರೆಯುವ ಒಟ್ಟಾರೆ ಖುಷಿಯಿಂದ ಚೈತನ್ಯ ತುಂಬಿದ ಹೊಸ ಆಶಾಕಿರಣಗಳಿಂದ ಸ್ವಾಗತಿಸುವ ಮನೋಭಾವ ಎಲ್ಲರದ್ದೂ ಆಗಿದೆ.

ಜನವರಿ 1. ಇದು ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಹೊಸ ವರ್ಷ ಅಲ್ಲದೇ ಇರಬಹುದು. ಆದರೆ ಇಡೀ ಜಗತ್ತು ಹೊಸ ವರುಷ ಎಂದು ಬರಮಾಡಿಕೊಳ್ಳುವುದು ಈ ದಿನವನ್ನೇ. ಅದೇ ಸಂಪ್ರದಾಯವು ಭಾರತದಲ್ಲಿ ಚಾಲನೆಯಲ್ಲಿದೆ. ಡಿಸೆಂಬರ್ 31ರ ರಾತ್ರಿ 'ಟಾಟಾ ಬೈ ಬೈ' ಹೇಳುವ ತವಕ. ಮಧ್ಯರಾತ್ರಿ 'ವೆಲ್‌ಕಂ' ಮಾಡುವ ಅವಸರ. ತಮ್ಮ ಅಲೋಚನೆಗಳನ್ನು ಹೊಸ ಹೊಸ ಉಪಾಯಗಳನ್ನು ಕಾರ್ಯರೂಪಕ್ಕೆ ತರುವ ಗಡಿಬಿಡಿ. ಒಟ್ಟಾಗಿ ಇದು ಬದಲಾವಣೆಯ ಹಂತ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕುತೂಹಲದಿಂದ, ತಾಳ್ಮೆಯಿಂದ ಕಾಯುವ ದಿನ.

ಚಿಕ್ಕ ಮಕ್ಕಳನ್ನೇ ಕೇಳಿ. ಹೊಸ ವರುಷಕ್ಕೆ ಚೆನ್ನಾಗಿ ಓದಬೇಕು. ಪಿಕ್‌ನಿಕ್ ಹೋಗಬೇಕು, ಹೊಸ ಅಂಗಿ ಹಾಕಬೇಕು.... ಇನ್ನೇನೋ ಇನ್ನೇನೋ ಕನಸುಗಳು. ಅದೇ ಮಧ್ಯವಯಸ್ಕರಲ್ಲಿ ಕೇಳಿದರೆ ವ್ಯವಹಾರ ವೃದ್ಧಿಸಬೇಕು, ಮನೆ ಕಟ್ಟಬೇಕು ಹೀಗೆ ಬೇರೊಂದು ರೀತಿಯ ಬಯಕೆಗಳು. ಹಿರಿಯರಲ್ಲಿ ಕೇಳಿದರೆ ಯಾತ್ರೆಗಳಿಗೆ ಹೋಗುವ, ದೇವರ ದರ್ಶನಗೈಯುವ, ಆಸ್ತಿಪಾಸ್ತಿಗಳನ್ನು ಹಂಚಿಬಿಟ್ಟು ವಿಶ್ರಾಂತಿ ಜೀವನದೆಡೆಗೆ ಸಾಗುವ ಕನಸು. ಹೀಗೆ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಕನಸುಗಳು ಹೊಸವರುಷಕ್ಕಾಗಿಯೇ ಕಾದಿರಿಸಲ್ಪಟ್ಟಿರುತ್ತವೆ. ಮಗು ಅಪ್ಪನಲ್ಲಿ ಏನಾದರೊಂದು ಕೇಳಿದಾಗ ಮಗುವಿಗೆ ಸಿಗುವ ಉತ್ತರ 'ತಾಳು ಮರಿ ಹೊಸವರ್ಷ ಬರಲಿ' ಎಂದಾಗಿರುತ್ತದೆ. ಇದೇ ತರಹ ಹೊಸ ವರ್ಷ ಬರಲಿ ಎಂದು ಅದೆಷ್ಟೋ ಆಶ್ವಾಸನೆಗಳನ್ನು, ಭರವಸೆಗಳನ್ನು ಪ್ರತಿಯೊಬ್ಬರೂ ಒಬ್ಬರಲ್ಲಾ ಒಬ್ಬರಿಗೆ ಕೊಟ್ಟೇ ಕೊಟ್ಟಿರುತ್ತಾರೆ. ಸ್ವಲ್ಪ ಜನರಿಗೆ ಹೊಸ ವರುಷದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಛಲ. ಇನ್ನು ಕೆಲವರಿಗೆ ಹೊಸ ವರ್ಷದಲ್ಲಿ ಮಾನಸಿಕ ಶಾಂತಿ ನೆಮ್ಮದಿಯನ್ನು ಪಡೆಯಬೇಕೆಂಬ ಅತೀವ ಬಯಕೆ. ಮತ್ತೆಷ್ಟೋ ಜನರಿಗೆ ಕೈಹಿಡಿದ ಕೆಲಸವನ್ನು ಪೂರ್ಣಗೊಳಿಸಬೇಕೆಂಬ ದೃಢನಿರ್ಧಾರ.

ಹೊಸ ವರ್ಷ ಬರುವ ಮೊದಲು ಕನಸುಗಳನ್ನು ಹೊತ್ತೊಯ್ಯುವುದು, ಆಸೆಗಳನ್ನು ಬೆಳೆಸುವುದು ಇನ್ನೇನೋ ನಿರ್ಧಾರಗಳನ್ನು ಕೈಗೊಳ್ಳುವುದು ಸಹಜ. ಯಾರಾದರೂ ಈ ತರದ ಆಸೆಯನ್ನಾಗಲೀ, ಕನಸುಗಳನ್ನಾಗಲೀ, ನಿರ್ಧಾರವನ್ನಾಗಲೀ ಹೊಂದಿಲ್ಲವೆಂದರೆ ಅವರನ್ನು ಮೂರ್ಖರೆಂದೇ ಹೇಳಬಹುದು. ಈ ತರಹದ ನಿರ್ಧಾರಗಳನ್ನು ತೆಗೆದುಕೊಳ್ಳುವುದೇನೋ ಹೌದು. ಆದರೆ ಹೊಸವರ್ಷ ಬಂದ ನಂತರ ನಮ್ಮ ಕನಸುಗಳನ್ನು ಸಾಕಾರರೂಪಗೊಳಿಸುವ ನಿಟ್ಟಿನಲ್ಲಿ ನಾವು ಎಷ್ಟರಮಟ್ಟಿಗೆ ಕಾರ್ಯೋನ್ಮುಖರಾಗಿದ್ದೇವೆ ಎನ್ನುವುದು ಬಹುಮುಖ್ಯವಾದ ಅಂಶ. ಅನೇಕ ಮಂದಿ ಹೊಸ ವರ್ಷದಲ್ಲಿ ಹೊಸ ಚೈತನ್ಯ ತುಂಬಿ ತಮ್ಮ ಸಾಧನೆಯನ್ನು ಆರಂಭಿಸುತ್ತಾರೆ. ಮತ್ತೆಷ್ಟೋ ಜನರು ತಮ್ಮ ಸಾಧನೆಗಾಗಿ ಛಲತೊಟ್ಟು ಬೆವರು ಸುರಿಸಿ ಯಶಸ್ಸು ಗಳಿಸಿದ್ದಾರೆ.

ನನ್ನಲ್ಲೂ ಇದೇ ರೀತಿಯ ಕನಸುಗಳು, ಆಸೆ ಆಕಾಂಕ್ಷೆಗಳು ಪ್ರತಿಸಲವೂ ಇತ್ತು. ಬಾಲ್ಯದಲ್ಲಿ ಎಲ್ಲರಂತೆ ಕನಸು ಕಾಣುವುದಷ್ಟೆ. ಹೊಸ ವರುಷ ಬಂದ ನಂತರವೂ ಕನಸುಗಳನ್ನೇ ಕಂಡಿದ್ದು. ಅದನ್ನು ನನಸುಗೊಳಿಸುವ ಮಾತು ತುಂಬಾ ತುಂಬಾ ದೂರವಾಗಿತ್ತು. ನಂತರ ಕಿಶೋರಾವಸ್ಥೆಯಲ್ಲಿ ಸ್ವಲ್ಪ ಮಟ್ಟಿಗೆ ಬುದ್ಧಿಯೂ ಬೆಳೆದಿತ್ತು. ಸುತ್ತಲಿನ ಪರಿಸರದಿಂದಾಗಿಯೋ ಅಥವಾ ಗುರುಹಿರಿಯರ, ಪ್ರಭಾವದಿಂದಾಗಿಯೋ ಏನೋ ಕಾದಿಟ್ಟ ಕನಸುಗಳನ್ನು, ಮುಚ್ಚಿಟ್ಟ ಬಯಕೆಗಳನ್ನು ಅರ್ಧಶತದಷ್ಟು ಪೂರ್ಣಗೊಳಿಸಿದ್ದೆ. ಮುಂದಕ್ಕೆ ಬೆಳೆದಂತೆಲ್ಲಾ ನನ್ನ ಸಹಪಾಠಿಗಳ, ಸಹೋದರಿಯರ ಬೆಳವಣಿಗೆಗಳನ್ನು ಕಂಡು ಹೃದಯದಲ್ಲಿ ಇಟ್ಟಂತಹ ಬಯಕೆಗಳನ್ನು ನೂರಕ್ಕೆ ನೂರು ಅಲ್ಲದಿದ್ದರೂ ಆದಷ್ಟು ಸಂಪೂರ್ಣಗೊಳಿಸಲು ಯಶಸ್ವಿಯಾಗಿದ್ದೆ.


ಕನಸುಗಳನ್ನು ಕಾಣಲೇಬೇಕು. ಕನಸು ಕಂಡರೆ ಮಾತ್ರ ಅದನ್ನು ಸಾಕಾರಗೊಳಿಸಬಹುದು. ಆಸೆಗಳನ್ನು ಇಟ್ಟುಕೊಳ್ಳಲೇಬೇಕು. ಆದರೆ ಅತಿಆಸೆ ಇರಬಾರದು. ಯಾರು ಕನಸುಗಳನ್ನು ಹೊಂದಿರುತ್ತಾರೋ, ಆಸೆಗಳನ್ನು ಇಟ್ಟುಕೊಂಡಿರುತ್ತಾರೋ, ದೃಢನಿರ್ಧಾರಗಳನ್ನು ಬೆಳೆಸಿರುತ್ತಾರೋ ಅವರು ಮಾತ್ರ ಜೀವನದಲ್ಲಿ ಮುನ್ನಡೆಯಲು ಸಾಧ್ಯ. ಹೊತ್ತೆಲ್ಲಾ ಕನಸುಗಳನ್ನು ಸಂಪೂರ್ಣಗೊಳಿಸಬೇಕೆಂದಿಲ್ಲ. ಸಂಪೂರ್ಣಗೊಳಿಸಬೇಕೆಂಬ ಭಾರವನ್ನು ಹೊರಬಾರದು. ಆದರೆ ಯಶಸ್ವಿಗೊಳಿಸಬೇಕೆಂಬ ಸಾಧನೆ ಬೇಕು. ಒಂದುವೇಳೆ ಸೋಲು ಬಂದಲ್ಲಿ ಅದನ್ನು ಎದುರಿಸುವ ಧೈರ್ಯ ಬೇಕು. ಯಾಕೆಂದರೆ ಸೋಲೇ ಗೆಲುವಿನ ಸೋಪಾನ. ಆ ಸೋಲನ್ನು ಮುಂದಿನ ವರ್ಷಕ್ಕಾಗಿ ಕಾದಿಡಬಹುದು.

ಹಾಗಾಗಿ ಎಲ್ಲರಿಗೂ ನನ್ನ ಸಲಹೆಯೇನೆಂದರೆ ಹೊಸ ವರುಷಕ್ಕೆ ಹೊಸ ನಿರ್ಧಾರ ತೆಗೆದುಕೊಳ್ಳಿ. ಹೊಸ ಚೈತನ್ಯ ತುಂಬಿಕೊಳ್ಳಿ. ಹೊಸ ಆಸೆಗಳನ್ನು ಬೆಳೆಸಿಕೊಳ್ಳಿ. ಆದರೆ ಇನ್ನೂ ಕನಸು ಕಾಣದವರು, ಹೊಸ ನಿರ್ಧಾರ ತೆಗೆದುಕೊಳ್ಳದವರು ಬೇಸರಿಸಬೇಡಿ. ಇನ್ನೂ ಕಾಲ ಮಿಂಚಿಲ್ಲ. ಭಾರತೀಯ ಸಂಪ್ರದಾಯದಂತೆ ಯುಗದ ಆದಿ ಹೊಸ ಶುಭ ಯುಗಾದಿ ಬಂದೇ ಬರುತ್ತದೆ. ಆದಿನಕ್ಕಾಗಿ ಕನಸುಗಳನ್ನು ಕಾಣಿ. ಮಗದೊಮ್ಮೆ ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.

ಓಹ್! ಅಂದಹಾಗೆ ಹೊಸವರ್ಷಕ್ಕೆ ನನ್ನ ಆಸೆಗಳು, ನಿರ್ಧಾರಗಳನ್ನು ಕನಸುಗಳನ್ನು ತಿಳಿಯುವ ಕುತೂಹಲವೇ? ಹೇಳುತ್ತೇನೆ. ಆದರೆ ಅದಕ್ಕೂ ಮೊದಲು,

"ಹೇಳದೆಯೇ ಮಾಡುವವನು
ರೂಢಿಯೊಳುತ್ತಮನು
ಹೇಳಿ ಮಾಡುವವನು ಮಧ್ಯಮನು
ಹೇಳಿಯೂ ಮಾಡದವನು ಅಧಮನು"

ನಾನು ಉತ್ತಮಳಾಗ್ಬೇಕಲ್ವಾ, ಮುಂದಿನ ಡಿಸೆಂಬರ್‌ಗೆ ಹೇಳ್ತೀನಿ ಆಯ್ತಾ, ಕಾಯ್ತೀರಾ ಪ್ಲೀಸ್.. ನೀವು ಕೂಡಾ ನನ್ನಂತೆಯೇ ಯಾರಿಗೂ ಹೇಳ್ಬೇಡಿ. ಯಾವತ್ತೂ 'ದಿ ಬೆಸ್ಟ್' ಆಗಿರೋಣ ಅಲ್ವಾ.