ಹೊಸ ವರುಷ,ಪ್ರತಿ ನಿಮಿಷ, ತರಲಿ ಹರುಷ

ಬಿ.ಗುಣವರ್ಧನ ಶೆಟ್ಟಿ
WD

ಹೊಸ ವರುಷ, ಪ್ರತಿ ನಿಮಿಷ, ತರಲಿ ಹರುಷ, ಇರಲಿ ಸರಸ, ಬೇಡ ವಿರಸ ಎಂಬ ಶುಭಕಾಮನೆಯೊಂದಿಗೆ ಹೊಸ ವರ್ಷಕ್ಕೆ ಕಾಲಿಡೋಣ. ಈಗ ಕಾಡುವ ಒಂದು ಪ್ರಶ್ನೆಯೇನೆಂದರೆ ನಮ್ಮ ಕೈಗೂಡದ ಆಸೆಗಳ ಪೂರೈಕೆಗೆ ಹೊಸ ವರ್ಷಕ್ಕೆ ಕಾಯಬೇಕೇ? ಇನ್ನು ನಾವು ಹೊಸ ವರ್ಷವನ್ನು ಅಷ್ಟೊಂದು ಸಂಭ್ರಮದಿಂದ, ಸಡಗರದಿಂದ ಆಚರಿಸಲು ಕಾರಣವಾದರೂ ಏನು?

ಏಕೆಂದರೆ ಈ ಹೊಸ ವರ್ಷದ ಆಚರಣೆ ಸಂಪ್ರದಾಯವು ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿದೆ. ವಿವಿಧ ಪಂಗಡದ ಜನರ ಸಂಪ್ರದಾಯಗಳು ಮತ್ತು ಸಂಸ್ಕೃತಿ ಅದಾಗಿದೆ. ವಿವಿಧ ಜನರ ಶೈಲಿ ಮತ್ತು ಪದ್ಧತಿಗಳಲ್ಲಿ ಸ್ವಲ್ಪ ಭಿನ್ನತೆಯಿದ್ದರೂ, ಹೊಸ ವರ್ಷದ ಆಚರಣೆ ಬಂತೆಂದರೆ ಸಾಕು ಎಲ್ಲರದ್ದೂ ಒಂದೇ ರೂಪ, ಒಂದೇ ಗುರಿ. ಪ್ರತಿ ವರ್ಷದ ಜನವರಿ ಒಂದರಂದು ಹೊಸ ವರ್ಷದ ಆಚರಣೆ ಶುರುವಾಗುತ್ತದೆ.

ಹೊಸ ವರ್ಷವನ್ನು ಹೊಸ ಜೀವನದೊಂದಿಗೆ ಆರಂಭಿಸಲು ಜನತೆ ಬಯಸುತ್ತದೆ. ಅದು ಮಾನವನ ಸಹಜ ಸ್ವಭಾವ. ಜನರು ಹೊಸತಿನ ಬಗ್ಗೆ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ. ಈ ಪರಿಕಲ್ಪನೆಯು ನ್ಯೂ ಇಯರ್‌ಗೆ ಅನ್ವಯವಾಗುತ್ತದೆ. ಹಳೆಯ ವರ್ಷದಲ್ಲಿ ಮಾಡಲಾಗದ್ದನ್ನು ಈ ವರ್ಷ ಮಾಡಿ ತೋರಿಸುವುದಾಗಿ ಕೆಲವರು ಹೊಸ ವರ್ಷಕ್ಕೆ ಪ್ರತಿಜ್ಞೆ ಮಾಡುತ್ತಾರೆ.

ಆದರೆ ಬರೀ ಪ್ರತಿಜ್ಞೆಯಲ್ಲೇ ಕಾಲಕಳೆದು ಅದು ಹೊಸ ವರ್ಷಕ್ಕೆ ನೆರವೇರದಿದ್ದಾಗ ಛೇ, ಈ ವರ್ಷ ಅದೃಷ್ಟ ಸರಿಯಿಲ್ಲ. ಬರುವ ವರ್ಷ ನಮ್ಮ ಅದೃಷ್ಟ ಪರೀಕ್ಷೆ ಮಾಡೋಣ ಎಂದು ಬರುವ ವರ್ಷಕ್ಕೆ ಮುಂದೂಡುತ್ತೇವೆ. ಆದರೆ ಯಾವುದೇ ಕೆಲಸಕ್ಕೆ ಬೇಕಾದ ಅರ್ಹತೆ, ಕೌಶಲ್ಯ ಪಡೆಯದೆ ವರ್ಷ, ವರ್ಷವೂ ಮುಂದೂಡುತ್ತಾ ಹೋಗುವಷ್ಟರಲ್ಲಿ ವೃದ್ಧಾಪ್ಯಕ್ಕೆ ಕಾಲಿರಿಸಿರುತ್ತೇವೆ. ಹಿಂದಿನ ವರ್ಷವು ಅಷ್ಟೇನೂ ಭರವಸೆದಾಯಕವಾಗಿಲ್ಲದಿದ್ದರೆ ನೀವು ಹೊಸ ಜೀವನಕ್ಕೆ ಕಾಲಿರಿಸಲು ಹೊಸ ವರ್ಷವು ಒಂದು ಎಕ್ಸ್‌ಕ್ಯೂಸ್ ಎನ್ನಬಹುದು. ನಿಮ್ಮ ಹಿಂದಿನ ವರ್ಷವು ಚೆನ್ನಾಗಿದ್ದರೆ, ಈ ವರ್ಷವು ಇನ್ನೂ ಹೆಚ್ಚು ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ಆಶಿಸುತ್ತೀರಿ.

ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ,ಅನುಬಂಧವನ್ನು ಬಿತ್ತಲು ಸ್ನೇಹಿತರಿಗೆ ಮತ್ತು ಕುಟುಂಬಗಳಿಗೆ ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಇದೊಂದು ಶುಭಗಳಿಗೆ.

ಹೊಸ ವರುಷವದೇನೋ ಸಂಭ್ರಮ, ಅದೇನೋ ಸಡಗರ,
ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿ, ಹೊಸ ಜೀವನದ ಪಯಣಕ್ಕೆ
ಅದೇನೋ ಕಾತುರ, ಅದೇನೋ ಆತುರ,
ಹಾದಿಯಲ್ಲಿ ಮುಳ್ಳುಕಲ್ಲುಗಳಿರಬಹುದು, ಎಚ್ಚರ,
ಎದುರಿಸಿ ಮುನ್ನಡೆದಾಗಲೇ ಸುಖಸಾಗರ.