ನಾಯಕಿಯರು ಹಿಂದೆ: ಹೊಸಬರು ಮುಂದೆ

ಸಮಯ್ ತಾಮ್ರಕರ್

ಬಾಲಿವುಡ್ ಚಿತ್ರರಂಗದಲ್ಲಿ ನಾಯಕಿಯರತ್ತ 2007ರ ಹಿನ್ನೋಟ ಹರಿಸಿದರೆ, ಸಾಕಷ್ಟು ಹೊಸ ಮುಖಗಳು ಹೊಸ ಅಲೆ ಎಬ್ಬಿಸಿರುವುದು ಕಂಡುಬಂದಿದೆ. ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಬಿಪಾಶಾ ಬಸು, ಐಶ್ವರ್ಯಾ ರೈ ಮುಂತಾದ ಸ್ಥಾಪಿತ ನಾಯಕಿಯರನ್ನು ಹಿಂದಿಕ್ಕಿ ಕತ್ರಿನಾ ಕೈಫ್, ವಿದ್ಯಾ ಬಾಲನ್, ದೀಪಿಕಾ ಪಡುಕೋಣೆ ಮತ್ತು ಲಾರಾ ದತ್ತ ಅವರಂತಹ ಹೊಸ ಮುಖಗಳು ಹಿಟ್ ಚಿತ್ರಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕಿಯರ ಸ್ಥಿತಿಗತಿಯತ್ತ ಅವಲೋಕನ ಇಲ್ಲಿದೆ:

ಕತ್ರಿನಾ ಕೈಫ್ (ನಮಸ್ತೇ ಲಂಡನ್, ಪಾರ್ಟ್‌ನರ್, ಅಪ್ನೇ, ವೆಲ್‌ಕಂ)
IFM
ಕತ್ರಿನಾಳ ಇಡೀ ಚಿತ್ರರಂಗದ ಕೆರಿಯರ್ ಗಮನಿಸಿದರೆ, ಈ ವರ್ಷ ಎಲ್ಲ ಚಿತ್ರಗಳು ಹಿಟ್ ಆಗಿಬಿಟ್ಟವು. ಸಲ್ಮಾನ್ ಖಾನ್‌ನ ಪ್ರಿಯತಮೆ ಎಂಬ ಗುಸುಗುಸು ಹೊಂದಿರುವ ಕತ್ರಿನಾ, ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗವರು ಸ್ವಯಂ ನಿರ್ಧಾರ ತೆಗೆದುಕೊಳ್ಳತೊಡಗಿದ್ದಾರೆ. ನಿರ್ಮಾಪಕರು ಆಕೆಯನ್ನು ಗಂಭೀರವಾಗಿ ಪರಿಗಣಿಸಲಾರಂಭಿಸಿದ್ದಾರೆ. ಕತ್ರಿನಾ ಕೂಡ ತಮ್ಮ ಅಭಿನಯದಲ್ಲಿ ಸಾಕಷ್ಟು ನಿಖರತೆ ಸಾಧಿಸತೊಡಗಿದ್ದಾರೆ. "ವೆಲ್‌ಕಂ" ಆಕೆಯ ಹಿಟ್ ಚಿತ್ರವಾಗಿ ಚಿರಕಾಲ ನೆನಪಿನಲ್ಲಿ ಉಳಿಯುವಂಥದ್ದು.

ವಿದ್ಯಾ ಬಾಲನ್ (ಸಲಾಂ ಎ ಇಶ್ಕ್, ಗುರು, ಏಕಲವ್ಯ, ಹೇ ಬೇಬಿ, ಭೂಲ್ ಭುಲೈಯಾ)
IFM
ಮೂರು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ವಿದ್ಯಾ ಬಾಲನ್ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. "ಹೇ ಬೇಬಿ" ಚಿತ್ರದಲ್ಲಿ ಮಾಡರ್ನ್ ಲುಕ್ ಮೂಲಕ ಗ್ಲಾಮರಸ್ ನಟಿಯಾಗುವ ಪ್ರಯತ್ನವನ್ನೂ ಮಾಡಿದರು. ವಿದ್ಯಾ ಅಭಿನಯದಲ್ಲೂ ಸೈ ಅನಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಅವರಿಗೆ ಮಣಿರತ್ನಂ, ನಿಖಿಲ್ ಆಡ್ವಾಣಿ, ವಿಧು ವಿನೋದ್ ಚೋಪ್ರಾ ಮತ್ತು ಪ್ರಿಯದರ್ಶನ್ ಅವರಂತಹ ನಿರ್ದೇಶಕರು ಅವಕಾಶ ನೀಡಿದರು. 2008ರಲ್ಲೂ ಉತ್ತಮ ಪ್ರದರ್ಶನ ನೀಡುವ ಸಿದ್ಧತೆಯಲ್ಲಿದ್ದಾರೆ ವಿದ್ಯಾ.

ದೀಪಿಕಾ ಪಡುಕೋಣೆ (ಓಂ ಶಾಂತಿ ಓಂ)
IFM
ಈಗಷ್ಟೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ ದೀಪಿಕಾ, ಹಲವು ನಾಯಕಿಯರ ನಿದ್ದೆ ಕೆಡಿಸಿದ್ದಾರೆ. ಈ ಮಟ್ಟ ತಲುಪಲು ಬೇರೆ ನಾಯಕಿಯರಿಗೆ ಹಲವು ವರ್ಷಗಳೇ ಬೇಕಾದರೆ, ಈಕೆ ಒಂದೇ ಚಿತ್ರದಲ್ಲಿ ಈ ಅಲೆ ಸೃಷ್ಟಿಸಿದ್ದಾರೆ. ಬಾಲಿವುಡ್‌ನ ಎಲ್ಲಾ ಬ್ಯಾನರ್‌ಗಳು ಮತ್ತು ನಾಯಕ ನಟರು ದೀಪಿಕಾ ಜತೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಯುವ ನಟಿಯರ ಸಾಲಿನಲ್ಲಿ ದೀಪಿಕಾ, ನಂ.1 ಸ್ಥಾನದ ಪ್ರಬಲ ಪ್ರತಿಸ್ಪರ್ಧಿಯಲ್ಲೊಬ್ಪರು.

ರಾಣಿ ಮುಖರ್ಜಿ (ತಾ ರಾ ರಂ ಪಂ, ಲಾಗಾ ಚುನರೀ ಮೇ ದಾಗ್, ಸಾಂವರಿಯಾ)
IFM
ಅಭಿನಯದ ಮಹಾರಾಣಿ ಎಂದೇ ಕರೆಸಿಕೊಳ್ಳುತ್ತಿದ್ದ ರಾಣಿ ಈಗ ಕೇವಲ ಲೆಕ್ಕಾಚಾರದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಸಫಲತೆ ಎಂಬುದು ಆಕೆಗೆ ದೂರವೇ ಉಳಿಯಿತು. ಲಾಗಾ ಚುನರೀ ಮೇ ದಾಗ್ ಎಂಬುದು ಪೂರ್ಣವಾಗಿ ರಾಣಿಯ ಚಿತ್ರವೇ ಆಗಿತ್ತಾದರೂ, ಬಾಕ್ಸಾಫೀಸಿನಲ್ಲಿ ಸೋತಿತು. ತಾರಾರಂಪಂ ಮತ್ತು ಸಾಂವರಿಯಾ ಚಿತ್ರಗಳಲ್ಲಿ ರಾಣಿ ಅಭಿನಯ ಉತ್ತಮವಾಗಿತ್ತಾದರೂ, ಚಿತ್ರದ ಗುಣಮಟ್ಟವು ರಾಣಿಯ ಮೇಲೆ ಕಾರ್ಮೋಡವಾಯಿತು. ಬಹುಶಃ ರಾಣಿ ಈಗ ಮದುವೆ ಯೋಚನೆಯಲ್ಲಿರುವಂತಿದೆ.

ಪ್ರೀತಿ ಜಿಂಟಾ (ಝೂಮ್ ಬರಾಬರ್ ಝೂಂ)
IFM
ಪ್ರೀತಿಗೆ ಕೂಡ ಈಗ ಅಭಿನಯಕ್ಕಿಂತಲೂ ನೆಸ್ ವಾಡಿಯಾ ಪ್ರಿಯರಾಗುತ್ತಿದ್ದಾರೆ. ಈ ವರ್ಷ ಕೇವಲ ಒಂದು ಚಿತ್ರದಲ್ಲಿ ಅವರು ಕಾಣಿಸಿಕೊಂಡರಾದರೂ, ಅದು ಕೂಡ ಫ್ಲಾಪ್ ಆಯಿತು. ರಾಣಿಯಂತೆಯೇ ಪ್ರೀತಿ ಕೂಡ 2008ರಲ್ಲಿ ವಿವಾಹಬಂಧನದಲ್ಲಿ ಸಿಲುಕುವತ್ತ ಗಂಭೀರ ಚಿಂತನೆಯಲ್ಲಿರುವಂತೆ ತೋರುತ್ತಿದೆ.

ಐಶ್ವರ್ಯಾ ರೈ (ಗುರು, ಪ್ರೊವೋಕ್ಡ್)
IFM
ಚಿತ್ರಕ್ಕಿಂತಲೂ ಐಶ್ವರ್ಯಾ ಅವರು ಮದುವೆ, ಕರ್‌ವಾ ಚೌಥ್ ಮತ್ತು ಧಾರ್ಮಿಕ ಸ್ಥಳಗಳಲ್ಲೇ ಹೆಚ್ಚು ಪ್ರಸಿದ್ಧಿ ಗಳಿಸಿದರು ಮತ್ತು ಚರ್ಚೆಯ ವಸ್ತುವೂ ಆದರು. ಬಾಲಿವುಡ್‌ನ ಬಹುತೇಕ ಚಾಪ್ ಹೀರೋಗಳ ಜತೆ ಅವರು ನಟಿಸಿಯಾಗಿದೆ. ಈ ವರ್ಷ ಬಾಲಿವುಡ್‌ನ ನಂ.1 ಕುಟುಂಬಕ್ಕೆ ಪಾದಾರ್ಪಣೆ ಮಾಡಿರುವುದರಿಂದ ಆಕೆಗೆ ಚಿತ್ರಗಳಿಗಿಂತಲೂ ಪರಿವಾರವೇ ಮಹತ್ವವಾಗಿತ್ತು. "ಗುರು" ಹಿಟ್ ಚಿತ್ರ ನೀಡಿರುವ ಅವರು "ಪ್ರೊವೋಕ್ಡ್"ನಲ್ಲೂ ಚರ್ಚೆಗೆ ಬಂದರು.

ಲಾರಾ ದತ್ತಾ (ಝೂಮ್ ಬರಾಬರ್ ಝೂಮ್)
IFM
"ಝೂಮ್ ಬರಾಬರ್ ಝೂಮ್"ನಂತಹಾ ಫ್ಲಾಪ್ ಚಿತ್ರದಿಂದ ಲಾಭವಾಗಿದ್ದು ಕೇವಲ ಒಬ್ಬರಿಗೆ. ಅವರೇ ಲಾರಾ ದತ್ತಾ. "ಪಾರ್ಟ್‌ನರ್" ಚಿತ್ರವು ಅವರ ನಟನೆಗೆ ಮಸುಕಿನ ಛಾಯೆ ನೀಡಿತಾದರೂ, ಅವಕಾಶ ದೊರೆತರೆ ಕಾಮಿಡಿ ಪಾತ್ರಗಳನ್ನೂ ಮಾಡಬಲ್ಲೆ ಎಂಬುದನ್ನು ಸಾಬೀತುಪಡಿಸಿದರು.

ಶಿಲ್ಪಾ ಶೆಟ್ಟಿ (ಮೆಟ್ರೋ, ಅಪ್ನೇ)
IFM
2007 ಶಿಲ್ಪಾ ಅವರ ಜೀವನದ ಅತ್ಯಂತ ಶ್ರೇಷ್ಠ ವರ್ಷವಾಯಿತು. "ಬಿಗ್ ಬ್ರದರ್" ಶೋದಲ್ಲಿ ವಿಜೇತರಾದ ಬಳಿಕ ಆಕೆ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡರು. ಚಿತ್ರಗಳಿಗಿಂತಲೂ ಅವರ ಮ್ಯೂಸಿಕಲ್ ಶೋ "ಮಿಸ್ ಬಾಲಿವುಡ್" ಭರ್ಜರಿ ಯಶಸ್ಸು ಗಳಿಸಿತು. ಈ ವರ್ಷ "ಮೆಟ್ರೋ" ಚಿತ್ರದಲ್ಲಿನ ನಟನೆಗೆ ಅವರು ಪ್ರಶಂಸೆ ಗಳಿಸಿಕೊಂಡರು. ಅಪ್ನೇಯಲ್ಲಿ ಅವರು ಡಿಯೋಲ್ ಪರಿವಾರದ ಜತೆಗಿನ ಸಂಬಂಧದ ಪ್ರಯೋಜನ ಪಡೆದುಕೊಂಡರು.

ಕರೀನಾ ಕಪೂರ್ (ಜಬ್ ವೀ ಮೆಟ್)
IFM
ಕರೀನಾ ಅವರು ಈ ವರ್ಷ ಶಾಹಿದ್ ಕೈ ಬಿಟ್ಟು ಸೈಫ್ ಕೈ ಹಿಡಿದುಕೊಂಡರು. ಪಾಪ, ಶಾಹಿದ್ ಕೈಕೈ ಹಿಸುಕಿಕೊಂಡರು. ತಮ್ಮದೇ ರೀತಿಯಲ್ಲಿ ಜೀವನವನ್ನು ನೋಡುತ್ತಿರುವ ಕರೀನಾ, ತಮ್ಮ ಪ್ರೇಮ ಕಹಾನಿಗಳಿಗಾಗಿ ಇಡೀ ವರ್ಷ ಚರ್ಚೆಯಲ್ಲಿರಬೇಕಾಯಿತು. "ಜಬ್ ವೀ ಮೆಟ್" ಯಶಸ್ಸು ಕೂಡ ಆಕೆಗೆ ಹೆಸರು ತಂದಿತು.

ಪ್ರಿಯಾಂಕಾ ಚೋಪ್ರಾ (ಸಲಾಂ ಎ ಇಶ್ಕ್, ಬಿಗ್ ಬ್ರದರ್)
IFM
ಪ್ರಿಯಾಂಕ ಅವರಿಂದ ಮೊದಲ ಬಾರಿಗೆ ಸಹಿ ಹಾಕಲಾದ ಚಿತ್ರ "ಬಿಗ್ ಬ್ರದರ್" ಈ ವರ್ಷ ಸಿನಿಮಾ ಮಂದಿರಗಳಿಗೆ ತಲುಪಿತು. ಅವರ ಎರಡೂ ಚಿತ್ರಗಳೂ ಯಶಸ್ಸು ಕಾಣಲಿಲ್ಲ. ಆದರೆ ಪ್ರಿಯಾಂಕಾ ಅವರನ್ನಂತೂ ಇದಕ್ಕೆ ದೂರಲಾಗದು. ನಿರ್ದೇಶಕರ ವಿಶ್ವಾಸ ಆಕೆಯ ಮೇಲಿದೆ. ಮುಂಬರುವ ದಿನಗಳಲ್ಲಿ ಆಕೆಯ ಇನ್ನಷ್ಟು ಉತ್ತಮ ಚಿತ್ರಗಳು ನೋಡಲು ಸಿಗಲಿವೆ. ಆಕೆ ಅಭಿನಯದ ಮೇಲೆ ಇನ್ನಷ್ಟು ಗಮನ ಹರಿಸಬೇಕಾಗಿದೆ.

ಬಿಪಾಶಾ ಬಸು (ನಹ್ಲೇ ಪೇ ದೆಹ್ಲಾ, ಗೋಲ್)
IFM
ತಮ್ಮ ಬಾಯ್ ಫ್ರೆಂಡ್ ಜಾನ್‌ರಂತೆಯೇ ಈ ವರ್ಷ ಬಿಪಾಶಾಗೂ ಯಾವುದೇ ಯಶಸ್ಸು ದೊರೆಯಲಿಲ್ಲ. ಬಿಪಾಶಾ ತಮ್ಮ ವೃತ್ತಿ ಜೀವನದ ಕೆಟ್ಟ ದಿನಗಳಲ್ಲಿದ್ದಾರೆ. ಅವರ ಬಳಿ ಉತ್ತಮ ಚಿತ್ರಗಳ ಅಭಾವವಿದೆ. ಜಾನ್-ಬಿಪಾಶಾ ಬ್ರೇಕಪ್ ಸುದ್ದಿಯೂ ಈ ವರ್ಷ ಆಗಾಗ್ಗೆ ಕಾಣಿಸಿಕೊಂಡು, ಆ ಮೇಲೆ ಎಲ್ಲವೂ ಸರಿಯಾದವು. ಜಾನ್-ವಿದ್ಯಾ ಕುರಿತ ಸುದ್ದಿಗಳಿಂದ ಹತಾಶರಾಗಿದ್ದ ಬಿಪಾಶಾ ಸೈಫ್‌ನಲ್ಲಿ ತಮ್ಮ ಗೆಳೆಯನನ್ನು ಕಂಡಿರಬಹುದು. ಈ ತಂತ್ರ ಫಲಿಸಿತು ಮತ್ತು ಜಾನ್ ಬಿಪಾಶಾ ಬಳಿ ಮತ್ತೆ ಓಡಿಬರಬೇಕಾಯಿತು.

ಸುಷ್ಮಿತಾ ಸೇನ್ (ರಾಮ್ ಗೋಪಾಲ್ ವರ್ಮಾ ಕೀ ಆಗ್)
IFM
ತಮ್ಮ ಜೀವನ ಶೈಲಿಗಾಗಿಯೇ ಚರ್ಚೆಯಲ್ಲಿರುವ ಸುಷ್ಮಿತಾಳನ್ನು ಬಾಲಿವುಡ್ ಗಂಭೀರವಾಗಿ ಪರಿಗಣಿಸದಿರುವುದು ಆಕೆಯ ದುರದೃಷ್ಟ. ರಾಮೂ ಕೀ ಆಗ್ ಎಂಬುದು ಈ ವರ್ಷ ತೆರೆಕಂಡ ಆಕೆಯ ಏಕೈಕ ಚಿತ್ರ. "ದೂಲ್ಹಾ ಮಿಲ್ ಗಯಾ" ಚಿತ್ರದಲ್ಲಿ ನಟಿಸುತ್ತಿರುವ ಸುಷ್ಮಿತಾ ಶೀಘ್ರವೇ "ದೂಲ್ಹಾ" (ವರ)ನನ್ನು ಹುಡುಕುತ್ತಾಳೆಯೇ ಕಾದುನೋಡಬೇಕು.