ಬೀದಿಗೆ ಬಂದ ಮಹಿಳಾ ದೌರ್ಜನ್ಯ

PTI
ಸ್ವಾತಂತ್ರ್ಯ ಬಂದು 60 ವಸಂತಗಳನ್ನು ದಾಟಿದ ಬಳಿಕ ದೇಶಕ್ಕೊಬ್ಬ ಮಹಿಳಾ ರಾಷ್ಟ್ರಪತಿಯ ಸುಯೋಗ, ನ್ಯಾಯಕ್ಕಾಗಿ ಮಹಿಳೆಯೊಬ್ಬಳು ಬೀದಿ ಬೀದಿಯಲ್ಲಿ ಅರೆನಗ್ನಳಾಗಿ ನಡೆಯಬೇಕಾದ ಪ್ರಸಂಗ ಮತ್ತು ಮಹಿಳೆಯರು ತಮ್ಮ ಹಕ್ಕಿಗಾಗಿ, ಶಾಸನಸಭೆಗಳಲ್ಲಿ ಮೀಸಲಾತಿಗಾಗಿ, ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕುರಿತ ಈಡೇರದ ಆಶ್ವಾಸನೆಗಳು... 2007ರಲ್ಲಿ ಇಡೀ ಮಹಿಳಾ ಸಮುದಾಯವನ್ನು ಕಾಡಿದ ಸಂಗತಿ.

ಪತಿ ಮತ್ತು ಮಾವನ ಮನೆಯವರ ದೌರ್ಜನ್ಯದ ವಿರುದ್ಧ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಕಾರಣಕ್ಕೆ ಗುಜರಾತಿನ ರಾಜ್‌ಕೋಟಿನ ಬೀದಿಗಳಲ್ಲಿ ಪೂಜಾ ಎಂಬ 22ರ ಹರೆಯದ ಯುವತಿ ಅರೆನಗ್ನಳಾಗಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಮೊರೆಯಿಟ್ಟಳು.

ಈ ಆಘಾತಕಾರಿ ಘಟನೆಯು ಸ್ಥಳೀಯ ಅಧಿಕಾರಿಗಳನ್ನು ಬಡಿದೆಚ್ಚರಿಸಿತು ಮತ್ತು ಕೊನೆಗೆ ಸರಕಾರವೂ ಆಕೆಗಾದ ಅನ್ಯಾಯವನ್ನು ಗಮನಿಸಿತು.

ಈ ನಡುವೆ, ಇಂಗ್ಲೆಂಡಿನಲ್ಲಿ ಬಾಲಿವುಡ್ ಪತಾಕೆ ಹಾರಿಸಹೊರಟ ಶಿಲ್ಪಾ ಶೆಟ್ಟಿ, ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಪ್ರತಿಸ್ಪರ್ಧಿ ಜೇಡ್ ಗೂಡಿ ಏಷ್ಯಾದ ನಾಯಿ ಎಂದು ಶಿಲ್ಪಾರನ್ನು ಹೀಯಾಳಿಸಿದ್ದು, ಜನಾಂಗೀಯ ದೌರ್ಜನ್ಯ ಎಂಬ ವಿಷಯವಾಗಿ, ಅಂತಾರಾಷ್ಟ್ರೀಯ ಗಮನ ಸೆಳೆಯಿತು. ಇದೇ ಸ್ಪರ್ಧೆಯಲ್ಲಿ ಶಿಲ್ಪಾ ಶೆಟ್ಟಿ ವಿಜೇತರೂ ಆದರು.

ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಪ್ರಸ್ತಾಪ ಎಂದಿನಂತೆ ಈ ವರ್ಷವೂ ಮೂಲೆಗುಂಪಾಯಿತು. ಈ ವಿಷಯದಲ್ಲಿ ಯಾವತ್ತೂ ಮೂಡದ ಒಮ್ಮತ, ಈ ವರ್ಷವೂ ಮರೀಚಿಕೆಯಾಗಿಯೇ ಉಳಿಯಿತು.

ಇತ್ತೀಚೆಗಷ್ಟೇ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನಾರಂಭದಲ್ಲಿ ಮಹಿಳಾ ಸಂಘಟನೆಗಳು ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಮತ್ತು ರಾಜಕೀಯ ಪಕ್ಷಗಳಿಂದ ಎದುರಾಗುವ ಯಾವುದೇ ಭಿನ್ನಾಭಿಪ್ರಾಯಗಳನ್ನು ಸದನದಲ್ಲಿ ಬಗೆಹರಿಸಿಕೊಳ್ಳಲೇಬೇಕು ಎಂದು ಒತ್ತಾಯಿಸಿದ್ದವು.

ಆದರೆ ಸರಕಾರವು, ಪ್ರಸ್ತಾಪಿತ ಶಾಸನದ ಕುರಿತು ಒಮ್ಮತಾಭಿಪ್ರಾಯ ಮೂಡಿಸಲು ಪ್ರಯತ್ನಿಸಿ, ಅದನ್ನು ಸಂಸತ್ತಿನೆದುರು ಇರಿಸುವುದಾಗಿ ಹೇಳಿ ಕೈತೊಳೆದುಕೊಂಡಿತು.

ವೆಬ್ದುನಿಯಾವನ್ನು ಓದಿ