ಭಾರತಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ

PTI
2007 ಭಾರತದ ಪಾಲಿಗೆ ಬಹುಮೂಲ್ಯ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂಥಹುದು. ಸ್ವಾತಂತ್ರ್ಯ ದೊರೆತ 60 ವರ್ಷಗಳ ಬಳಿಕ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ರಾಷ್ಟ್ರಪತಿ ಗಾದಿಗೇರಿದರು. ಆದರೆ ಈ ನಮ್ಮ ಸಂಸತ್ಸದಸ್ಯರು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ಮತ್ತೆ ಅಪಸ್ವರ ತೆಗೆದು, ಈ ವರ್ಷವೂ ಅದನ್ನು ಕನಸಾಗಿಯೇ ಉಳಿಸಿಕೊಂಡರು.

2007ರ ಜುಲೈ 25ರಂದು ಪ್ರತಿಭಾ ಪಾಟೀಲ್ ಅವರು ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಅಧಿಕಾರಕ್ಕೇರಿದಾಗ ದೇಶದ ಮಹಿಳಾ ಸಮುದಾಯ ಖುಷಿಪಟ್ಟಿತು. ಮಹಾರಾಷ್ಟ್ರದ ಜಲಗಾಂವ್‌ನವರಾದ ಪಾಟೀಲ್ ಈ ಹಿಂದೆಯೇ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದವರು. ರಾಜಸ್ಥಾನದ ಮೊದಲ ಮಹಿಳಾ ರಾಜ್ಯಪಾಲರಾಗಿಯೂ ಗೌರವಕ್ಕೆ ಪಾತ್ರರಾಗಿದ್ದ ಪ್ರತಿಭಾ ಪಾಟೀಲ್, ರಾಷ್ಟ್ರಪತಿ ಹುದ್ದೆಗೇರುವ ಹಂತದಲ್ಲಿ ತಮ್ಮ ಪ್ರತಿಸ್ಪರ್ಧಿ ಭೈರೋನ್ ಸಿಂಗ್ ಶೇಖಾವತ್ ಅವರನ್ನು ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.

ಪ್ರವರ್ಧಮಾನ ಸೋನಿಯಾ: ಇಚ್ಛೆಯಿಲ್ಲದಿದ್ದರೂ ಕಾಂಗ್ರೆಸಿನ ಒತ್ತಾಯಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ್ದ ಸೋನಿಯಾ ಗಾಂಧಿ, 2007ರ ಟೈಮ್ ಮ್ಯಾಗಜಿನ್‌ನಲ್ಲಿ ಜಗತ್ತಿನ 100 ಪ್ರಭಾವಶಾಲಿ ಮಹಿಳೆಯಲ್ಲೊಬ್ಬರು ಎಂದು ಗುರುತಿಸಿಕೊಂಡರು. ಫೋರ್ಬ್ಸ್ ಪತ್ರಿಕೆಯು ಸೋನಿಯಾಗೆ ಈ ವರ್ಷ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಆರನೇ ಸ್ಥಾನ ನೀಡಿತು.

ಕೈಗೂಡದ ಕನಸು: ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33 ಮೀಸಲಾತಿ ಕಲ್ಪಿಸುವ ವಿಧೇಯಕವು ಈ ವರ್ಷವೂ ಎಂದಿನಂತೆ ಸಂಸದರ ಪ್ರತಿರೋಧದಿಂದಾಗಿ ಮೂಲೆಗುಂಪಾಯಿತು. ಮಹಿಳೆಯರಿಗೆ ರಕ್ಷಣೆ ಕಲ್ಪಿಸುವ ವಿಧೇಯಕದ ಕುರಿತು ತಾನು ಸಹಮತದ ಪ್ರಯತ್ನ ನಡೆಸುತ್ತಿರುವುದಾಗಿ ಕೇಂದ್ರ ಸರಕಾರ ಹೇಳಿದರೆ, ಅಂಗ ಪಕ್ಷಗಳ ನಡುವಣ ಅಂತರ್ಕಲಹದಿಂದಾಗಿಯೇ ವಿಧೇಯಕವನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದವು.

ಮಹಿಳೆಯರಿಗೆ ಶೇ.33 ಸ್ಥಾನ ಮೀಸಲಾತಿಯಿಂದ ಪ್ರಯೋಜನವಿದೆ ಎಂದು ಗಾಂಧಿವಾದಿ ನಿರ್ಮಲಾ ದೇಶಪಾಂಡೆ ಹೇಳಿದರು. ಆದರೆ ಈ ವಿಧೇಯಕ ಎಂದು ಕಾರ್ಯರೂಪಕ್ಕೆ ಬರುತ್ತದೆಯೋ... ಆ ದೇವನೇ ಬಲ್ಲ. ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರಂತೂ, ಮೊದಲು ಸರಕಾರವು ವಿಧೇಯಕನ್ನು ಸಂಸತ್ತಿನಲ್ಲಿ ಮಂಡಿಸಲಿ, ನಾವು ಯಾವುದೇ ರೂಪದಲ್ಲಿ ಇದಕ್ಕೆ ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ಘೋಷಿಸಿದ್ದರು.

ಸಾನಿಯಾ ಏಳು-ಬೀಳು: ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಟೆನಿಸ್ ರಂಗದಲ್ಲಿ ಹೆಸರು ಮಾಡುತ್ತಿರುವ ಸಾನಿಯಾ ಮಿರ್ಜಾ, ದೇಶದ ಮಹಿಳೆಯರಲ್ಲಿ ಹೆಮ್ಮೆ ಮೂಡಿಸತೊಡಗಿದ್ದಾರೆ. ಯಾವುದೇ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯೊಂದರಲ್ಲಿ ಆದ್ಯತೆಯ ಪ್ರವೇಶ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಈ ಹೈದರಾಬಾದ್ ಬೆಡಗಿಯದು. ಅಮೆರಿಕ ಓಪನ್ ಟೆನಿಸ್ ಟೂರ್ನಮೆಂಟಿನಲ್ಲಿ ಆಕೆಗೆ ಈ ಗೌರವ ಲಭಿಸಿದ್ದು, ಆಕೆ ಅಮೆರಿಕದ ಲಾರಾ ಗ್ರೆನವಿಲೆ ಅವರನ್ನು ಸೋಲಿಸಿ ಮೂರನೇ ಸುತ್ತಿಗೂ ಪ್ರವೇಶಿಸಿದ್ದರು.

ಈಗ ಮನೆಮಾತಾಗಿಬಿಟ್ಟಿರುವ ಸಾನಿಯಾರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತನ್ನ "ಹೆಣ್ಣುಮಗು ರಕ್ಷಿಸಿ" ಅಭಿಯಾನದ ಬ್ರಾಂಡ್ ರಾಯಭಾರಿಯಾಗಿ ನೇಮಿಸಿತು.

ಉದ್ಯಮ ಜಗತ್ತಿನಲ್ಲೂ ಮಹಿಳಾ ಪಾರುಪತ್ಯ: ಮಹಿಳೆಯರು ಔದ್ಯಮಿಕ ಕ್ಷೇತ್ರದಲ್ಲೂ ತಮ್ಮ ಛಾಪು ಒತ್ತಿದ್ದಾರೆ. ಬಯೋಕಾನ್ ಕಂಪನಿಯನ್ನು ಜಾಗತಿಕ ಮಟ್ಟಕ್ಕೇರಿಸಿದ ಕೀರ್ತಿ ಕಿರಣ್ ಮುಜುಮ್ದಾರ್ ಅವರದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡಿದರೆ, ಪೆಪ್ಸಿ ಕಂಪನಿಯ ಸಿಇಒ, ಭಾರತ ಮೂಲದ ಇಂದಿರಾ ನೂಯಿ ಫೋರ್ಬ್ಸ್ ಮ್ಯಾಗಜಿನ್‌ನ 2007ರ ಐದನೇ ಸರ್ವಾಧಿಕ ಪ್ರಭಾವಶಾಲಿ ಮಹಿಳೆಯಾಗಿ ಕಾಣಿಸಿಕೊಂಡರು.

ಬಾಲಿವುಡ್‌ನಲ್ಲಿ ಮಹಿಳಾ ಮನ್ನಣೆ: ಹಿಂದಿ ಚಿತ್ರರಂಗದಲ್ಲೂ ಮಹಿಳೆಯರು ರಾರಾಜಿಸಿದರು. ಬಾಲಿವುಡ್ ನಿರ್ದೇಶಕಿ, ನಿರ್ಮಾಪಕಿ ಫರಾ ಖಾನ್ ಅವರು 70ರ ದಶಕದ ಬಾಲಿವುಡ್ ರಂಗದ ಮೇಲೆ "ಓಂ ಶಾಂತಿ ಓಂ" ಮೂಲಕ ಬೆಳಕು ಚೆಲ್ಲಿದರು. ಫರಾ ಅವರ ಈ ಪ್ರಯೋಗ ವೀಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.

ಅಭಿನೇತ್ರಿ ಐಶ್ವರ್ಯಾ ರೈ ಹಾಲಿವುಡ್‌ನಲ್ಲಿ ಭಾರತದ ಪ್ರತಿನಿಧಿಯ ಕಾರ್ಯವನ್ನು ಸಮರ್ಪಕವಾಗಿ ನಿಭಾಯಿಸಿದ್ದು, ಅಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆ ಕಂಡವು. "ದಿ ಲಾಸ್ಟ್ ಲೆಜನ್" ರಷ್ಯಾ ಮತ್ತು ನೆದರ್ಲೆಂಡಿನಲ್ಲಿ ಬಿಡುಗಡೆಯಾದರೆ, "ಸರ್ಕಲ್ ಆಫ್ ಲೈಟ್ ಲೈಟ್" ಆಧಾರಿತ "ಪ್ರೊವೋಕ್ಡ್" ಭಾರತ ಮತ್ತು ಬ್ರಿಟನಿನಲ್ಲಿ ತೆರೆ ಕಂಡಿತು.

ಲಿಂಗ ಸಮಾನತೆಯ ಕೂಗು ಇನ್ನೂ ಕೇಳಿಬರುತ್ತಿದೆ. ಮಹಿಳೆಯರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಪಾರುಪತ್ಯ ಸಾಧಿಸುತ್ತಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೇ ಹೆಚ್ಚು ಆದ್ಯತೆ ದೊರೆಯುತ್ತಿರುವುದು ಮಹಿಳೆಯರ ಪಾಲಿಗೆ ಶುಭ ಸಂಕೇತ.

ವೆಬ್ದುನಿಯಾವನ್ನು ಓದಿ