ಅಕ್ಷಯ್ ಕುಮಾರ್, ಶಾರೂಕ್‌ಗೆ ಯಶ ನೀಡಿದ 2007

ಸಮಯ್ ತಾಮ್ರಕರ್

ವರ್ಷ 2007 ಮುಗಿಯುತ್ತಾ ಬಂದಿದೆ. ಕೋಟ್ಯಂತರ ರೂಪಾಯಿ ಪಡೆದು ಕೆಲಸ ಮಾಡುವ ಪ್ರಮುಖ ನಾಯಕರ ಸ್ಥಿತಿ ಹೇಗಿತ್ತು ಅಂತ ಒಂದಿಷ್ಟು ಹಿನ್ನೋಟ.

ಅಕ್ಷಯ್ ಕುಮಾರ್ (ನಮಸ್ತೇ ಲಂಡನ್, ಹೇ ಬೇಬಿ, ಭೂಲ್ ಭುಲೈಯಾ)
IFM
ಅಕ್ಷಯ್ ಕುಮಾರ್ ಅವರ ಮೂರು ಚಿತ್ರಗಳು ಪ್ರದರ್ಶನಗೊಂಡವು ಮತ್ತು ಮೂರು ಕೂಡ ಹಿಟ್ ಆದವು. ತಾನು ಯಾವುದೇ ಖಾನ್‌ಗಿಂತ ಕಡಿಮೆ ಇಲ್ಲ ಎಂದು ಹೇಳಿಕೊಳ್ಳುವ ಅಕ್ಷಯ್ ಬಗ್ಗೆ ನಗೆಯಾಡಬೇಕಿಲ್ಲ. ಅಕ್ಷಯ್ ಮಾತಿನಲ್ಲೂ ತೂಕ ಇದೆ. ನಿರಂತರವಾಗಿ ಯಶಸ್ವೀ ಚಿತ್ರ ನೀಡುವುದು ಸುಲಭದ ಮಾತಲ್ಲ. ಅಕ್ಷಯ್ ಅಭಿಮಾನಿಗಳ ಸಂಖ್ಯೆ ಕೂಡ ಈ ವರ್ಷದಲ್ಲಿ ಸಾಕಷ್ಟು ಹೆಚ್ಚಾಗಿದೆ.

ಶಾರೂಖ್ ಖಾನ್ (ಚಕ್ ದೇ ಇಂಡಿಯಾ, ಓಂ ಶಾಂತಿ ಓಂ)
IFM
ಕಿಂಗ್ ಖಾನ್ ಅವರ ಚಿತ್ರಗಳೂ ಯಶಸ್ಸಿನ ಅಲೆಯಲ್ಲಿ ತೇಲಿದವು. ಚಕ್ ದೇ ಇಂಡಿಯಾದ ಬಳಿಕ ಜನ ಅವರನ್ನು ಕೋಚ್ ಕಬೀರ್ ಖಾನ್ ಎಂದೇ ಗುರುತಿಸತೊಡಗಿದರು. ಅವರ ಅಭಿನಯವು ಚಿತ್ರಕ್ಕೆ ಮತ್ತಷ್ಟು ಉತ್ತೇಜನವನ್ನು ತಂದುಕೊಟ್ಟಿತು. "ಓಂ ಶಾಂತಿ ಓಂ"ನಲ್ಲಂತೂ ಅವರು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು. ಈ ಚಿತ್ರವಂತೂ ಶಾರೂಖ್ ಅಭಿನಯದಿಂದಾಗಿಯೇ ಯಶಸ್ವಿಯಾಯಿತು ಎನ್ನುವವರಿದ್ದಾರೆ. ಮನೋಜ್ ಕುಮಾರ್ ಅವರಿಗೆ ಒಂದಷ್ಟು ಕೋಪ ಬಂದಾಗ, ಕಿಂಗ್ ಖಾನ್ ದೈನ್ಯತೆಯಿಂದ ಅದನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರು. ಈ ಎರಡು ಚಿತ್ರಗಳ ಅದ್ಭುತ ಗಳಿಕೆಯು ಶಾರೂಖ್ ಖಾನ್ ಹೆಸರು ಮತ್ತಷ್ಟು ಎತ್ತರಕ್ಕೇರುವಂತೆ ಮಾಡಿತು.

ಸಲ್ಮಾನ್ ಖಾನ್ (ಸಲಾಂ ಎ ಇಶ್ಕ್, ಪಾರ್ಟ್‌ನರ್, ಮೆರಿಗೋಲ್ಡ್, ಸಾಂವರಿಯಾ)
IFM
ಸಲ್ಮಾನ್ ಅವರ ನಾಲ್ಕರಲ್ಲಿ ಮೂರು ಚಿತ್ರಗಳು ಫ್ಲಾಪ್ ಆದವು. ಸಲಾಂ ಎ ಇಶ್ಕ್ ಮತ್ತು ಮೆರಿಗೋಲ್ಡ್ ಈ ಚಿತ್ರಗಳಲ್ಲಿ ಸಲ್ಮಾನ್ ಉದ್ದೇಶವೇನಿತ್ತು ಎಂಬುದು ಅವರಿಗೇ ಗೊತ್ತು. ಸಾಂವರಿಯಾಕ್ಕಾಗಿ ಅವರನ್ನು ದೋಷಿ ಎನ್ನಲಾಗದು. ಪಾರ್ಟ್‌ನರ್ ಎಂಬುದು ಸಲ್ಮಾನ್ ಅವರ ಏಕಮಾತ್ರ ಹಿಟ್ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಅವರು ಮತ್ತಷ್ಟು ಹ್ಯಾಂಡ್‌ಸಮ್ ಆಗಿ ಕಂಡುಬಂದದ್ದಷ್ಟೇ ಅಲ್ಲ, ಗೋವಿಂದ ಜತೆಗಿನ ಅವರ ಜುಗಲ್‌ಬಂದಿ ಚೆನ್ನಾಗಿ ಮೂಡಿಬಂದಿತ್ತು. ಇನ್ನು ಮದುವೆ ವಿಚಾರದಲ್ಲಿ ಅವರು ಇನ್ನೂ ಯಾವುದೇ ನಿರ್ಣಯ ಕೈಗೊಳ್ಳುವುದು ಸಾಧ್ಯವಾಗಿಲ್ಲ.

ಅಭಿಷೇಕ್ ಬಚ್ಚನ್ (ಗುರು, ಶೂಟೌಟ್ ಎಟ್ ಲೋಖಂಡ್ವಾಲಾ, ಝೂಮ್ ಬರಾಬರ್, ಝೂಮ್, ಲಗಾ ಚುನರಿ ಮೇ ದಾಗ್)
IFM
ಚಿತ್ರಗಳಿಗಿಂತಲೂ ಹೆಚ್ಚಾಗಿ ಈ ವರ್ಷ ಜೂನಿಯರ್ ಬಚ್ಚನ್ ಹೆಚ್ಚು ಸುದ್ದಿಯಲ್ಲಿದ್ದದ್ದು ತಮ್ಮ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಜತೆಗಿನ ವಿವಾಹಕ್ಕಾಗಿ. ಗುರು ಚಿತ್ರ ಯಶಸ್ವಿಯಾಗಿತ್ತು. ಝೂಮ್ ಬರಾಬರ್‌ನಲ್ಲಿ ಮಗನಿಗೆ ಯಶಸ್ಸು ತಂದುಕೊಡುವುದಕ್ಕಾಗಿ ಬಿಗ್ ಬಿ ಕೂಡ ಚಿತ್ರದಲ್ಲಿ ಕಾಣಿಸಿಕೊಂಡರಾದರೂ, ಫಲ ಕಾಣಲಿಲ್ಲ. "ಶೂಟೌಟ್..." ಮತ್ತು "ಲಗಾ ಚುನರಿ"ಯಲ್ಲಿ ಅಭಿಷೇಕ್ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅಮಿತಾಭ್‌ರ ಪುತ್ರ ಎಂಬ ಹೆಸರಿನ ಲಾಭ ಅಭಿಷೇಕ್‌ಗೆ ಎಷ್ಟು ದಿನ ದೊರೆಯಬಹುದು? ಆದಷ್ಟು ಶೀಘ್ರ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಬಹುದು.

ಸೈಫ್ ಅಲಿ ಖಾನ್ (ತಾರಾರಂಪಂ, ಏಕಲವ್ಯ)
IFM
ಸೈಫ್ ಮಿಯಾ ಅವರ ಚಿತ್ತವು ಚಿತ್ರಕ್ಕಿಂತಲೂ ಹೆಚ್ಚಾಗಿ ಗರ್ಲ್ ಫ್ರೆಂಡ್ಸ್‌ರತ್ತಲೇ ಹೆಚ್ಚು ಓಲಾಡುತ್ತಿತ್ತು. ಚಿತ್ರಗಳಲ್ಲಿ ಎರಡು ಪ್ರದರ್ಶನ ಕಂಡವಾದರೂ, ಅವರ ಹೆಸರು ಮಾತ್ರ ಮೂವರು ಹುಡುಗಿಯರ ಜತೆಗೆ (ರೋಜಾ, ಬಿಪಾಷಾ ಮತ್ತು ಕರೀನಾ) ಜತೆಗೆ ಕೇಳಿ ಬರುತ್ತಿತ್ತು. ಬಾಲಿವುಡ್‌ನಲ್ಲಿ ನಾಲ್ಕನೇ ಖಾನ್ ರೂಪದಲ್ಲಿ ತಮ್ಮನ್ನು ಪ್ರತಿಷ್ಠಾಪಿಸತೊಡಗಿರುವ ಸೈಫ್ ಆಕಾಂಕ್ಷೆಗಳಿಗೆ ಈ ವರ್ಷ ತಣ್ಣೀರು ಬಿದ್ದದ್ದೇ ಹೆಚ್ಚು ಎನ್ನಬಹುದು.

ಅಮಿತಾಭ್ ಬಚ್ಚನ್ (ನಿಃಶಬ್ದ್, ಏಕಲವ್ಯ, ಶೂಟೌಟ್ ಎಟ್ ಲೋಖಂಡ್ವಾಲಾ, ಚೀನೀ ಕಮ್, ಝೂಮ್ ಬರಾಬರ್ ಝೂಮ್, ರಾಮ್ ಗೋಪಾಲ್ ವರ್ಮಾ ಕೀ ಆಗ್)
IFM
ಬಿಗ್ ಬಿಗೆ ಈ ವರ್ಷ ನಿಃಶಬ್ದ್ ಮತ್ತು ರಾಮ್ ಗೋಪಾಲ್ ವರ್ಮಾ ಕೀ ಆಗ್‌ನಂತಹ ಚತ್ರಗಳ ಕಾರಣದಿಂದ ಕೆಟ್ಟ ಹೆಸರು ಬಂತು ಎಂದೂ ಹೇಳಬಹುದು. ಚೀನೀ ಕಮ್ ಮೂಲಕ ಅವರು ಯಶಸ್ಸು ಗಳಿಸಿದರು. ಅಭಿಷೇಕ್‌ಗಾಗಿಯೂ ಅವರು ಎರಡು ಚಿತ್ರಗಳಲ್ಲಿ ಶ್ರಮ ಪಡಬೇಕಾಯಿತು. 2008ರಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡಲಾರರು ಎಂಬ ಆಶಾವಾದ.

ಜಾನ್ ಅಬ್ರಹಾಂ (ಸಲಾಂ ಎ ಇಶ್ಕ್, ನೋ ಸ್ಮೋಕಿಂಗ್, ಗೋಲ್)
IFM
ಜಾನ್ ಅವರಿಗೆ ತಮ್ಮ ನಟನೆ ವೃತ್ತಿಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಅವರ ಕಟ್ಟಾ ಅಭಿಮಾನಿಗಳು ಕೂಡ ಅವರ ಚಿತ್ರಗಳಿಂದ ದೂರ ಹೋಗತೊಡಗಿದ್ದಾರೆ. ಗೋಲ್ ಚಿತ್ರವು ನಿರೀಕ್ಷಿತ ಯಶಸ್ಸು ಕಂಡಿಲ್ಲದ ಕಾರಣ ಅವರು ತಮ್ಮ ಸಮಕಾಲೀನ ನಟರಿಂದ ಸಾಕಷ್ಟು ಹಿಂದೆ ಉಳಿದಿದ್ದಾರೆ. ಜಾನ್ ಜಾಹೀರಾತುಗಳಿಗಿಂತ ತಮ್ಮ ಅಭಿನಯದಲ್ಲಿ ಮತ್ತಷ್ಟು ಪರಿಶ್ರಮ ಪಡಬೇಕಾಗಿದೆ.

ಸಂಜಯ್ ದತ್ (ಏಕಲವ್ಯ, ಶೂಟೌಟ್ ಎಟ್ ಲೋಖಂಡ್ವಾಲಾ, ಧಮಾಲ್, ದಸ್ ಕಹಾನಿಯಾಂ, ನಹ್ಲೇ ಪೇ ದೆಹ್ಲಾ)
IFM
ಒಂದು ಕಾಲು ಜೈಲಿನಲ್ಲಿ, ಒಂದು ಕಾಲು ಸ್ಟುಡಿಯೋಗಳಲ್ಲಿ ಇರಬೇಕಾದ ಪರಿಸ್ಥಿತಿ ಸಂಜಯ್ ದತ್ ಅವರದು. ಐದರಲ್ಲಿ ಕೇವಲ ಒಂದು "ಧಮಾಲ್" ಮಾತ್ರ ಯಶಸ್ವಿ ಅನಿಸಿಕೊಂಡಿತು. ಸಂಜು ಬಾಬಾ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೋ ಎಂಬ ಶಂಕೆ ಮೂಡಿದೆ. ಜೈಲಿಗೆ ಹೋಗಿ-ಬರುವ ಕಾರಣಗಳಿಂದಾಗಿ ಹೆಚ್ಚಿನ ದೊಡ್ಡ ನಿರ್ಮಾಪಕರು ಅವರನ್ನು ಚಿತ್ರಕ್ಕೆ ಸೇರಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಸನ್ನಿ ಡಿಯೋಲ್ (ಕಾಫಿಲಾ, ಅಪ್ನೇ, ಫೂಲ್ ಎನ್ ಫೈನಲ್, ಬಿಗ್ ಬ್ರದರ್)
IFM
ಸನ್ನಿಯ ಸಫಲತೆಯ ಸೂರ್ಯನು ಮೋಡಗಳ ಮರೆಯಲ್ಲೇ ಇದ್ದ ಹಾಗಿತ್ತು 2007. "ಅಪ್ನೇ" ಚಿತ್ರ ಹೊರತುಪಡಿಸಿ, ಅವರ ಉಳಿದೆಲ್ಲಾ ಚಿತ್ರಗಳು ಯಾವಾಗ ಬಂದವು, ಯಾವಾಗ ಹೋದವು ಎಂಬುದು ಪ್ರೇಕ್ಷಕರಿಗೆ ಗೊತ್ತೇ ಆಗಲಿಲ್ಲ. ಸನ್ನಿಗೆ ಈಗಲೂ ಅಭಿಮಾನಿಗಳಿದ್ದಾರೆ, ಆದರೆ ಕೆಟ್ಟ ಚಿತ್ರಗಳನ್ನು ಅವರು ನೋಡುವುದಾದರೂ ಹೇಗೆ?

ಶಾಹಿದ್ ಕಪೂರ್ (ಫೂಲ್ ಎನ್ ಫೈನಲ್, ಜಬ್ ವಿ ಮೆಟ್)
IFM
ಶಾಹಿದ್‌ನನ್ನು ಬಚ್ಚಾ ಎಂದಷ್ಟೇ ತಿಳಿದಿದ್ದ ಮಂದಿ "ಜಬ್ ವಿ ಮೆಟ್" ಚಿತ್ರದ ಯಶಸ್ಸಿನ ನಂತರ, ಆತನನ್ನು ಗಂಭೀರವಾಗಿ ಪರಿಗಣಿಸಲಾರಂಭಿಸಿದ್ದಾರೆ. ಅವರಿಗೆ ಕೂಡ ಈಗ ಸೋಲೋ ಹೀರೋ ಪಾತ್ರಗಳು ದೊರೆಯಲಾರಂಭಿಸಿವೆ. ಈ ವರ್ಷದ ಸಾಧನೆಯ ಮಟ್ಟಿಗೆ ಶಾಹಿದ್ ಖಂಡಿತವಾಗಿಯೂ ಎರಡು ಕಾರಣಗಳಿಗೆ ನೆನಪಲ್ಲಿ ಉಳಿಯುತ್ತಾರೆ - ಜಬ್ ವೀ ಮೆಟ್ ಹಾಗೂ ಕರೀನಾ ಕಪೂರ್ ಕಾರಣಕ್ಕೆ!

ಅಜಯ್ ದೇವಗನ್ (ಕ್ಯಾಶ್, ರಾಮ್ ಗೋಪಾಲ್ ವರ್ಮಾ ಕೀ ಆಗ್)
IFM
ಒಳ್ಳೆಯ ನಟನಾಗಿದ್ದರೂ ಅಜಯ್ ಅವರು ಕೆಟ್ಟ ಚಿತ್ರಗಳಲ್ಲಿ ಕೆಲಸ ಮಾಡುವುದೇಕೆಂದು ಅರ್ಥವಾಗದ ಸಂಗತಿ. ಅಜಯ್ ತಮ್ಮನ್ನು ತಾವೇ ಕೆಲವು ನಿರ್ದಿಷ್ಟ ಬ್ಯಾನರ್‌ಗಳಿಗೆ ಸೀಮಿತವಾಗಿಸಿಕೊಂಡಿದ್ದಾರೆ. ಕ್ಯಾಶ್ ಮತ್ತು ರಾಮ್ ಗೋಪಾಲ್ ವರ್ಮಾ ಕೀ ಆಗ್ ರೂಪದಲ್ಲಿ ಅವರು ಮುಂದುವರಿಯುವ ಬದಲು ಎರಡು ಹೆಜ್ಜೆ ಹಿಂದೆ ಸರಿದಂತೆ ತೋರುತ್ತದೆ.

ಬಾಬ್ಬಿ ಡಿಯೋಲ್ (ಶಕಲಕ ಬೂಮ್ ಬೂಮ್, ಝೂಮ್ ಬರಾಬರ್ ಝೂಮ್, ಅಪ್ನೇ, ನಕಾಬ್, ನನ್ಹೇ ಜೈಸಲ್ಮೇರ್)
IFM
ಅಬ್ಬಾಸ್ ಮಸ್ತಾನ್ ಮತ್ತು ಯಶ್‌ರಾಜ್ ಫಿಲಂಸ್ ಜತೆಗಿದ್ದರೂ ಬಾಬಿ ಅವರು ಫ್ಲಾಪ್ ಆಗಿಬಿಟ್ಟರು. ಅಪ್ಪ ಮತ್ತು ಅಣ್ಣನ ಜತೆ ನಿಂತದ್ದು "ಅಪ್ನೇ"ಯಲ್ಲಿ ಲಾಭವಾಯಿತು. ಆದರೆ ಅವರದ್ದೇ ಆದ ಸಾಮರ್ಥ್ಯದಲ್ಲಿ ಬಾಬ್ಬಿ ಅವರು ಯಾವಾಗ ಹಿಟ್ ಚಿತ್ರ ನೀಡುತ್ತಾರೆ, ಕಾದು ನೋಡಬೇಕು.

ಅಕ್ಷಯ್ ಖನ್ನಾ (ಸಲಾಂ ಎ ಇಶ್ಕ್, ನಕಾಬ್, ಗಾಂಧಿ ಮೈ ಫಾದರ್, ಆಜಾ ನಚ್ ಲೇ)
IFM
ಎಷ್ಟೇ ಹೆಣಗಾಡಿದರೂ ಅಕ್ಷಯ್ ಅವರಿಗೆ ಸೋಲಿನ ಚಕ್ರವ್ಯೂಹದಿಂದ ಹೊರಬರಲಾಗಲೇ ಇಲ್ಲ. "ಗಾಂಧೀ ಮೈ ಫಾದರ್"ನಲ್ಲಿ ಅದ್ಭುತ ನಟನೆಗಾಗಿ ಅವರಿಗೆ ಉತ್ತಮ ಪ್ರಶಂಸೆ ದೊರೆಯಿತು. ಆದರೆ ತಮ್ಮದೇ ಸಾಮರ್ಥ್ಯದಲ್ಲಿ ಹಿಟ್ ಚಿತ್ರ ನೀಡುವುದು ಅವರಿಗೆ ಸಾಧ್ಯವಾಗಿಲ್ಲ. ಬಹುತಾರಾ ಚಿತ್ರಗಳಲ್ಲೇ ಅಕ್ಷಯ್ ಮಿಂಚುತ್ತಾರೆ.

ರಿತೇಶ್ ದೇಶ್‌ಮುಖ್ (ಹೇ ಬೇಬಿ, ಕ್ಯಾಶ್, ಧಮಾಲ್)
IFM
ಹಾಸ್ಯ ಚಿತ್ರಗಳಲ್ಲಿ ರಿತೇಶ್ ತಮ್ಮ ವಿಶೇಷ ಛಾಪು ಮೂಡಿಸುತ್ತಾರೆ. ಈ ವರ್ಷ ಎರಡು ಹಿಟ್ ಚಿತ್ರಗಳು ಅವರ ಹೆಸರಿನ ಮುಂದಿವೆ. ರಿತೇಶ್ ತಮ್ಮ ಇಮೇಜ್ ಬದಲಿಸಿಕೊಳ್ಳಲು ಬಯಸಿದರೂ ಪ್ರೇಕ್ಷಕರು ಮತ್ತು ನಿರ್ಮಾಪಕರು ಅವರನ್ನು ಕಾಮಿಡಿ ಪಾತ್ರಗಳಲ್ಲೇ ನೋಡಲು ಬಯಸುತ್ತಾರೆ.

ಈ ವರ್ಷ ಹೃತಿಕ್ ರೋಷನ್ ಅವರ ಯಾವುದೇ ಚಿತ್ರಗಳಹೊರಬರಲಿಲ್ಲ. ಆದರೆ ಅಮೀರ್ ಖಾನ್ ಅವರ "ತಾರೇ ಜಮೀನ್ ಪರ್" ಉತ್ತಮ ಛಾಪು ಮತ್ತು ನಿರೀಕ್ಷೆ ಮೂಡಿಸಿದೆ.