ಜಾಗತಿಕ ಶ್ರೀಮಂತಿಕೆಯಲ್ಲಿ ಅಂಬಾನಿಗೊಲಿದಿದ್ದ ಅಗ್ರಪಟ್ಟ

ಭಾರತ ದೇಶದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಒಂದು ಮಾತು ಪ್ರಚಲಿತದಲ್ಲಿದೆ. ಅದೇನೆಂದರೆ, "ಭಾರತ ಅಭಿವೃದ್ಧಿ ಹೊಂದಿದ ದೇಶ. ಆದರೆ, ಭಾರತೀಯರು ಮಾತ್ರ ಅಭಿವೃದ್ಧಿ ಹೊಂದಿಲ್ಲ". ಹೌದು, ಈ ಮಾತು ಅಕ್ಷರಶಃ ನಿಜ. ಆದರೆ, 2007ರ ಅಕ್ಟೋಬರ್ 30 ಸೋಮವಾರ ಭಾರತೀಯರು ತಮ್ಮೆಲ್ಲ ಕಹಿ ನೆನಪುಗಳನ್ನು ಮರೆತು, ತಮ್ಮ ಅಭಿವೃದ್ಧಿಯೆಡೆಗೆ ಚಿಂತಿಸದೆ, ನಮ್ಮ ಭಾರತೀಯನೋರ್ವ ವಿಶ್ವದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರಲ್ಲ ಅವರನ್ನು ಸಂಭ್ರಮದಿಂದ ಸ್ವಾಗತಿಸಿತ್ತು. ತನ್ಮೂಲಕ ನಮ್ಮ ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ತುಂಬು ಹೃದಯದಿಂದ ಹಾರೈಸಿದ್ದಾರೆ ನೂರೈದು ಕೋಟಿ ಭಾರತೀಯರು.

ರಿಲಯನ್ಸ್ ಮತ್ತು ಭಾರತೀಯ ಉದ್ಯಮಕ್ಕೀಗ ಸಂಭ್ರಮದ ಪರ್ವಕಾಲ. ಹೆಚ್ಚುತ್ತಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ವಿದೇಶಿ ನೇರ ಬಂಡವಾಳ, ಜೊತೆಗೆ ದೇಶದೆಲ್ಲೆಡೆ ಆಗುತ್ತಿರುವ ಆಭಿವೃದ್ಧಿ ಕಾರ್ಯಗಳಿಂದಾಗಿ ನಮ್ಮ ಬಾಂಬೆ ಷೇರು ಮಾರುಕಟ್ಟೆ ನಾಗಾಲೋಟದಿಂದ ಗೂಳಿ ಓಟ ಮುಂದುವರಿಸಿರುವುದೇ ಇದಕ್ಕೆ ಸಾಕ್ಷಿ. ಹೌದು, ಬಾಂಬೆ ಷೇರು ಮಾರುಕಟ್ಟೆ 20 ಸಾವಿರ ಸೂಚ್ಯಂಕ ದಾಟಿದ ಹಿನ್ನೆಲೆಯಲ್ಲಿ, ಅಂಬಾನಿ ಸಹೋದರರ ಕಂಪೆನಿಯ ಷೇರುಗಳು ಇನ್ನಿಲ್ಲದ ಮಹತ್ವ ಪಡೆದುಕೊಂಡು ಆಗಸದೆತ್ತರಕ್ಕೆ ಏರಿದವು, ಪರಿಣಾಮ, ಮುಖೇಶ್ ಅಂಬಾನಿ ವಿಶ್ವದ ನಂಬರ್ ಒನ್ ಶ್ರೀಮಂತ ಎನ್ನುವ ಅಗ್ರಪಟ್ಟ ಅಂದು.

ಕಳೆದ ಹತ್ತಾರು ವರ್ಷಗಳಿಂದ ಈ ಸ್ಥಾನವನ್ನು ಅನಭಿಷಿಕ್ತವಾಗಿ ಆಳಿದ್ದ ವಿಶ್ವದ ಅಗ್ರ ಶ್ರೀಮಂತ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿಯಾದ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್, ಸದ್ದಿಲ್ಲದೆ ಎರಡನೇ ಸ್ಥಾನಕ್ಕೆ ಸರಿದಿದ್ದನ್ನು ಎಂದಿಗೂ ಮರೆಯಲಾಗದು.

ಬಿಲ್ ಗೇಟ್ಸ್ ಒಟ್ಟು 62.29 ಶತಕೋಟಿ ಅಮೆರಿಕನ್ ಡಾಲರ್ ಹೊಂದುವ ಮೂಲಕ ಕಳೆದೊಂದು ದಶಕದಿಂದ ಅಗ್ರಪಟ್ಟ ಉಳಿಸಿಕೊಂಡು ಬಂದಿದ್ದರು. ಆದರೆ, ಭಾರತೀಯ ಷೇರು ಮಾರುಕಟ್ಟೆಯಲ್ಲಾದ ಭಾರಿ ಏರಿಕೆಯಿಂದಾಗಿ ಮುಖೇಶ್ ಅಂಬಾನಿ ಒಂದೇ ದಿನಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಲಾಭ ಗಳಿಸಿ, ಗೇಟ್ಸ್ ಅವರನ್ನು ಹಿಂದಿಕ್ಕಿ 63.2 ಶತಕೋಟಿ ಅಮೆರಿಕನ್ ಡಾಲರ್ ಹಣ ಗಳಿಸುವ ಮೂಲಕ ವಿಶ್ವದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇವರ ಈ ಕೀರ್ತಿಯ ಹಿಂದೆ ಅವರ ತಂದೆ ಧೀರೂಭಾಯಿ ಅಂಬಾನಿಯವರ ಬೆವರ ಹನಿ, ಸತತ ಪರಿಶ್ರಮ, ದೂರದೃಷ್ಟಿ, ಜೊತೆಗೆ ಅಂಬಾನಿ ಸಹೋದರರ ಉದ್ಯಮ ಕೌಶಲ್ಯ, ವಹಿವಾಟಿನ ಚಾಕಚಕ್ಯತೆ, ಕಂಪೆನಿ ಮತ್ತು ಷೇರುಪೇಟೆಯ ಮೇಲೆ ಬೀಗಿ ಹಿಡಿತ ಇವೆಲ್ಲಾ ಅಂಶಗಳು ಒಟ್ಟುಗೊಂಡಿವೆ.

ಮುಖೇಶ್ ಅಂಬಾನಿ ಅವರ ಸಂಪತ್ತು ಅಂದು ಒಟ್ಟು 2,49,000 ಕೋಟಿ ರೂಪಾಯಿ. ಆರ್‌ಐಎಲ್‌ನಿಂದ 2,10,000 ಕೋಟಿ, ಆರ್‌ಪಿಎಲ್‌ನಿಂದ 37,500 ಕೋಟಿ ಮತ್ತು ಆರ್‌ಐಐಎಲ್‌ನಿಂದ 2,100 ಕೋಟಿ ರೂಪಾಯಿ ಅವರ ಸಂಪತ್ತಿಗೆ ಸೇರ್ಪಡೆಯಾಗಿದ್ದೇ ಅಂಬಾನಿ ಅವರಿಗೆ ಅಂದು ಅಗ್ರಪಟ್ಟ ದೊರೆಯಲು ಕಾರಣ ಎನ್ನುತ್ತಾರೆ ಆರ್ಥಿಕ ತಜ್ಞರು.

ಬಿಲ್ ಗೇಟ್ಸ್ ನಂತರದ ಸ್ಥಾನದಲ್ಲಿದ್ದ ಮೆಕ್ಸಿಕನ್ ವ್ಯಾಪಾರೋದ್ಯಮಿ ಕಾರ್ಲೋಸ್ ಸ್ಲಿಮ್ ಮತ್ತು ಇನ್ವೆಸ್ಟ್‌ಮೆಂಟ್ ಗುರು ವಾರನ್ ಬಫೆಟ್ ನಂತರ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಕಸಗುಡಿಸುವುದರಿಂದ ಹಿಡಿದು ಖಗೋಳಶಾಸ್ತ್ರದವರೆಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತೀಯರು, ಇತರರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಂದೊಮ್ಮೆ ವಿಶ್ವ ಶ್ರೀಮಂತನೆಂಬ ಅಗ್ರಪಟ್ಟವೂ ನಮ್ಮ ಭಾರತೀಯರ ಪಾಲಿಗೆ ಒಲಿದಿದ್ದು ಭಾರತೀಯರೆಲ್ಲರು ಹೆಮ್ಮೆ ಪಡುವಂತಹ ಸಂಗತಿಯೇ. ಇದು ಧೀರ್ಘ ಕಾಲದವರೆಗೆ ಮುಂದುವರಿಯಲಿ ಎಂದು ಹಾರೈಸೋಣ ಕೂಡಾ. ನಮ್ಮ ರೊಟ್ಟಿಯ ಜೊತೆ ತಿನ್ನಲು ಪಲ್ಯ ಇಲ್ಲದಿದ್ದರೂ ನಾವು ಅಂಬಾನಿಯವರ ಆಯ್ಕೆಯನ್ನು ಸ್ವಾಗತಿಸಲೇಬೇಕು. ಏಕೆಂದರೆ, ಇದು ಅಭಿವೃದ್ಧಿ ಹೊಂದಿದ ಭಾರತ. ಆದರೆ, ಭಾರತೀಯ ಮಾತ್ರ ಬಡವ...!.

ವೆಬ್ದುನಿಯಾವನ್ನು ಓದಿ