'ಅರ್ಥ' ಕಳೆದುಕೊಂಡ ದೀಪಾವಳಿ...

ನಾಗೇಂದ್ರ ತ್ರಾಸಿ
ND
ದೀಪಾವಳಿ ಬೆಳಕಿನ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬ, ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುವ ಹಬ್ಬ, ಅಂಧಕಾರ ಕಳೆಯುವ, ಪ್ರೀತಿ-ವಿಶ್ವಾಸದ ಹಬ್ಬ ದೀಪಾವಳಿ. ಆದರೆ ಈ ಬಾರಿಯಂತೂ ದೀಪಾವಳಿ ಜನಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೂ ಎಲ್ಲರನ್ನೂ ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದೆ.

ಧಾರಾಕಾರ ಮಳೆಯಿಂದಾಗಿ ಬಿಹಾರದಲ್ಲಿ ಪ್ರವಾಹದಿಂದ ಕೋಸಿ ನದಿ ಲಕ್ಷಾಂತರ ಜನರಲ್ಲಿ ಕಣ್ಣೀರ ಕೋಡಿ ಹರಿಸಿದೆ. ಕರ್ನಾಟಕದಲ್ಲಿಯೂ ಬರ-ನೆರೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಹಣದುಬ್ಬರ, ಜಾಗತಿಕ ಮಟ್ಟದಲ್ಲಿನ ಆರ್ಥಿಕ ಹೊಡೆತದಿಂದಾಗಿ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುವ ಮೂಲಕ ದೀಪಾವಳಿ ಸಂಭ್ರಮ ಮಂಕಾಗಿದೆ. ಈ ಬಾರಿಯ ದೀಪಾವಳಿ ಸಡಗರಕ್ಕಿಂತ ನೋವೇ ಹೆಚ್ಚಾಗಿದೆ. ಒಂದರ್ಥದಲ್ಲಿ ದೀಪಾವಳಿ 'ಅರ್ಥ' ಕಳೆದುಕೊಂಡಿದೆ.

ನೋವುಗಳೆಲ್ಲ ಕಳೆದು, ಸುಖ-ಸಂತೋಷಗಳು ಅಲ್ಲಾವುದ್ದೀನನ ದೀಪದಂತೆ ಬಯಸಿದಾಗಲೆಲ್ಲ ಕೊಡುವಂತಿದ್ದರೆ ಮನುಷ್ಯನ ಜೀವನ ಅದೆಷ್ಟು ಸುಂದರವಾಗಿರುತ್ತಿತ್ತು !. ಆದರೆ ಸುಖ, ದುಃಖ ಯಾವಾಗ ಬರುತ್ತೆ, ಎಷ್ಟು ದಿನ ಇರುತ್ತೆ, ಯಾವ ಸಂದರ್ಭದಲ್ಲಿ ಮಾಯವಾಗುತ್ತೆ ಯಾರು ತಾನೆ ಬಲ್ಲವರು? ಸುಖ-ದುಃಖದ ಸಮ್ಮಿಶ್ರಣವೇ ಜೀವನ. ಕೈಯಲ್ಲಿ ಕಾಸಿದ್ದಾಗ ದಿನವೂ ಹಬ್ಬವೇ....

ಇತ್ತೀಚೆಗೆ ದೇಶಾದ್ಯಂತ ನಡೆದ ಸಾಲು, ಸಾಲು ಸರಣಿ ಬಾಂಬ್ ಸ್ಫೋಟದಲ್ಲಿ ಅದೆಷ್ಟು ಅಮಾಯಕರು ಬಲಿಯಾದರು, ಆ ನೋವಿಗೆ, ಮಕ್ಕಳನ್ನು, ಗಂಡನನ್ನು, ತಾಯಿ, ತಂಗಿ, ತಂದೆಯನ್ನು ಕಳೆದುಕೊಂಡವರಿಗೆ ಯಾವ ದೀಪಾವಳಿ ಸಂಭ್ರಮ ನೋವನ್ನು ಮರೆಸಬಲ್ಲದು? ರಾವಣನ ವಧೆಯ ನಂತರ ದೀರ್ಘಕಾಲದ 14 ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಶ್ರೀರಾಮ-ಸೀತೆಯೊಂದಿಗೆ ಅಯೋಧ್ಯೆಗೆ ವಾಪಸ್ಸಾದ ದಿನ, ನರಕಾಸುರನ ವಧೆಯ ನರಕಚತುರ್ದಶಿ, ಬಲಿ ಚಕ್ರವರ್ತಿಯನ್ನು ಬಲಿ ತೆಗೆದುಕೊಂಡ ಬಲಿಪಾಡ್ಯಮಿ, ಧನಲಕ್ಷ್ಮಿ ಪೂಜೆಯೊಂದಿಗೆ ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮ ಆಚರಿಸಲಾಗುತ್ತದೆ.
PTI


ಆದರೆ ಇಂದು ಅದೆಷ್ಟು ನರಕಾಸುರರು ಜನ್ಮತಳೆದಿದ್ದಾರೆ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜಿಹಾದ್ ಹೆಸರಲ್ಲಿ, ಮತಾಂಧತೆಯ ಅಂಧಕಾರದಲ್ಲಿ ದೊಂಬಿ, ಗಲಭೆ, ಬಾಂಬ್ ಸ್ಫೋಟಗಳೇ ಎಲ್ಲೆಲ್ಲೂ ಅಮಾಯಕರ ಪ್ರಾಣದೊಂದಿಗೆ ಚೆಲ್ಲಾಟವಾಡುವ ಮೂಲಕ ಮನುಷ್ಯ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ದುಸ್ಥಿತಿ ಎದುರಾಗಿದೆ.

ಮತ್ತೊಂದೆಡೆ ಆರ್ಥಿಕ ಡೋಲಾಯಮಾನ ಸ್ಥಿತಿಯ ಬಿಸಿ ಎಲ್ಲಾ ರಂಗಗಕ್ಕೂ ತಟ್ಟಿದೆ. ಈಗಾಗಲೇ ಖಾಸಗಿ ಕಂಪೆನಿಗಳ ನೌಕರರು ಅಭದ್ರತೆಯನ್ನು ಅನುಭವಿಸುವಂತಾಗಿದ್ದರೆ, ವಿದೇಶಿ ಕಂಪೆನಿಗಳಾದ ಪೆಪ್ಸಿಕೋ, ಪ್ರತಿಷ್ಠಿತ ಸುದ್ದಿಸಂಸ್ಥೆಯಾದ ಬಿಬಿಸಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಿಂಗ್ ಫಿಶರ್ ಸಂಸ್ಥೆ 50 ತರಬೇತು ಅವಧಿಯಲ್ಲಿರುವ ಪೈಲೆಟ್‌ಗಳ ಸ್ಟೈಪೆಂಡ್ ಅನ್ನು ಕಡಿತಗೊಳಿಸಿದೆ. ಅಲ್ಲದೇ ಮತ್ತಷ್ಟು ಉದ್ಯೋಗವನ್ನು ಕಡಿತಗೊಳಿಸುವ ಸಾಧ್ಯತೆ ಇರುವುದಾಗಿಯೂ ಮುನ್ಸೂಚನೆ ನೀಡಿದೆ.

ಶೇರು ಮಾರುಕಟ್ಟೆ ಭಾರೀ ಕುಸಿತದಿಂದಾಗಿ ಸಾವಿರಾರು ಕುಟುಂಬಗಳು ಲಕ್ಷಾಂತರ ರೂಪಾಯಿಯ ನಷ್ಟ ಅನುಭವಿಸಿವೆ. ಪ್ರವಾಸೋದ್ಯಮದ ಪ್ರಮುಖ ರಾಜ್ಯಗಳಾಗಿರುವ ಗೋವಾ, ಕೇರಳಗಳಲ್ಲಿ ಪ್ರವಾಸಿಗರಿಲ್ಲದೆ ವಸತಿಗೃಹ, ಬೋಟಿಂಗ್ ಮಾಲೀಕರು ಬಾಯಿ ಬಡಿದುಕೊಳ್ಳುವಂತಾಗಿದೆ.

ಇಂತಹ ನೂರೆಂಟು ಕಷ್ಟ-ಕೋಟಲೆಗಳ ನಡುವೆ ದಿನಬೆಳಗಾದರೆ ಮಾಧ್ಯಮಗಳಲ್ಲೂ ತಲೆಮೇಲೆ ಕೈ ಹೊತ್ತ ಫೋಟೋಗಳೇ ಅಚ್ಚೊತ್ತಿರುತ್ತವೆ, ಆರ್ಥಿಕ ಹೊಡೆತಕ್ಕೆ ಸಿಲುಕಿದ ಕುಟುಂಬಗಳ ದಾರುಣ ಕಥೆ ಪ್ರಕಟವಾಗಿರುತ್ತದೆ. ಯಾವುದರ ಬೆಲೆಯೂ ಅಗ್ಗವಾಗಿಲ್ಲ, ಗಗನಕ್ಕೇರಿದ ಬೆಲೆಯಿಂದಾಗಿ ಜನಸಾಮಾನ್ಯರನ್ನು ದೀಪಾವಳಿ ನಿಜಕ್ಕೂ ತ್ರಿಶಂಕು ಸ್ಥಿತಿಗೆ ದೂಡಿದೆ. ಹೋಗಲಿ ಗಮ್ಮತ್ತಿಗೆ ಪಟಾಕಿಯನ್ನಾದರೂ ಸಿಡಿಸುವ ಅಂತ ಅಂಗಡಿಗೆ ಹೋಗಿ ಬೆಲೆ ಕೇಳಿದರೆ ಸಾಕು, ಆಟಂ ಬಾಂಬ್ ಸಿಡಿದ ಅನುಭವವಾಗುತ್ತೆ! ಆ ಮಟ್ಟಿಗೆ ನಿಜವಾದ ಬಾಂಬುಗಳೇ ಭಾರೀ ಅಗ್ಗದಲ್ಲಿ ದೊರೆಯುತ್ತದೆ, ಅದಕ್ಕೆ ಇತ್ತೀಚೆಗೆ ದೇಶಾದ್ಯಂತ ಎಲ್ಲೆಂದರಲ್ಲಿ ನಡೆಯುವ ಸರಣಿ ಬಾಂಬು ಸ್ಫೋಟಗಳೇ ಸಾಕ್ಷಿ !!(ಹಾಗಂತ ನಿಜವಾದ ಬಾಂಬ್ ಹುಡುಕುವ ದುಸ್ಸಾಹಸಕ್ಕೆ ಕೈಹಾಕಬೇಡಿ).

ಎಷ್ಟೇ ಕಷ್ಟ-ನಷ್ಟವಾದರೂ ದೀಪಾವಳಿ ಹಬ್ಬದ ಸಂಭ್ರವೇ ಹಾಗೇ ಅದನ್ನು ನಾವು ಭಾರೀ ಪ್ರಮಾಣದಲ್ಲಿ ಅಲ್ಲದಿದ್ದರೂ, ತಕ್ಕಮಟ್ಟಿಗೆ ಹಬ್ಬವನ್ನು ಆಚರಿಸುವುದು ಸಂಪ್ರದಾಯವಾಗಿದೆ. ಸುತ್ತ-ಮುತ್ತ ಕಿತ್ತು ತಿನ್ನುತ್ತಿರುವ ನೂರೆಂಟು ಸಮಸ್ಯೆಗಳ ನಡುವೆ, ಮನಃಕ್ಲೇಶವನ್ನು ನಿವಾರಿಸಿ, ದ್ವೇಷವನ್ನು ಅಳಿಸಿ, ಸೌಹಾರ್ದತೆಯೊಂದಿಗೆ ಈ ಬೆಳಕಿನ ಹಬ್ಬವನ್ನು ಆಚರಿಸೋಣ....