ದೀಪಾವಳಿಗೆ 'ರಂಗೋಲಿ'ಯ ರಂಗು

ರಾಜೇಶ್ ಪಾಟೀಲ್
AvinashWD
ದೀಪಾವಳಿ ಹಬ್ಬ ದೇಶದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ದೀಪಾವಳಿ ಹಬ್ಬ ಮಾನವರನ್ನು ಆಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆ ಕೊಂಡೊಯ್ಯುವ ಹಬ್ಬ. ಆದುದರಿಂದ ದೀಪಾವಳಿ ಹಬ್ಬವನ್ನು ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ ರಂಗೋಲಿಯ ಪಾತ್ರ ಮಹತ್ವದ್ದು. ಮನೆಯ ಪ್ರಮುಖ ಪ್ರವೇಶ ದ್ವಾರಗಳಲ್ಲಿ ರಂಗೋಲಿಯನ್ನು ಹಾಕಿ ಸಿಂಗರಿಸಲಾಗುತ್ತದೆ.

ರಂಗೋಲಿಯ ಹುಟ್ಟು : ರಂಗೋಲಿ ಮೂಲತಃ ಹಿಂದೂ ಜಾನಪದ ಕಲೆ. ರಂಗೋಲಿ ಪುಡಿಗೆ ಅನೇಕ ಬಣ್ಣಗಳನ್ನು ಮಿಶ್ರಣ ಮಾಡಿ ಮನೆಯ ಮುಂಭಾಗದಲ್ಲಿ ಸುಂದರವಾಗಿ ಚಿತ್ತಾರ ಬಿಡಿಸಲಾಗುತ್ತದೆ. ದೀಪಾವಳಿಯ ವೇಳೆ ಬಿಡಿಸುವ ರಂಗೋಲಿಯ ಮಹತ್ವದ ಬಗ್ಗೆ ಪುರಾಣಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿ ಮೊಟ್ಟಮೊದಲು ಮಹಾರಾಷ್ಟ್ರದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ರಂಗೋಲಿಯನ್ನು ಹಾಕಲಾಗುತ್ತಿತ್ತು. ನಂತರ ನಿಧಾನವಾಗಿ ದೇಶದ ಇತರ ಭಾಗಗಳಿಗೂ ಹರಡಿ ರಂಗೋಲಿಯಿಲ್ಲದೇ ದೀಪಾವಳಿ ಇಲ್ಲ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು .

ರಂಗೋಲಿ ಸಂಪ್ರದಾಯ ಅಸ್ತಿತ್ವಕ್ಕೆ ಬಂದ ಕುರಿತಂತೆ ಪ್ರಸಿದ್ದ ಪುರಾಣ ಕಥೆಗಳ ಉಲ್ಲೇಖ ಹೀಗಿದೆ. ಸಾಮ್ರಾಜ್ಯ ಒಂದರ ಹಿರಿಯ ಅರ್ಚಕನ ಮಗನು ಸಾವನ್ನಪ್ಪಿದ್ದರಿಂದ ಇಡೀ ಸಾಮ್ರಾಜ್ಯವೆ ಶೋಕದಲ್ಲಿ ಮುಳಗಿತ್ತು. ರಾಜ್ಯದ ಪ್ರತಿಯೊಬ್ಬರು ಅರ್ಚಕನ ಮಗನನ್ನು ಬದುಕಿಸಿಕೊಡುವಂತೆ ಬ್ರಹ್ಮದೇವರಿಗೆ ಕಳಕಳಿಯಿಂದ ಪ್ರಾರ್ಥಿಸಿದರು. ಭಕ್ತರ ಕಳಕಳಿಯ ಮನವಿಗೆ ಓಗೊಟ್ಟ ಬ್ರಹ್ಮ, ರಾಜನಿಗೆ ಮೃತದೇಹವನ್ನಿಟ್ಟ ಸ್ಥಳದಲ್ಲಿ ಹುಡುಗನ ಭಾವಚಿತ್ರವನ್ನು ಬರೆಯುವಂತೆ ಸಲಹೆ ನೀಡಿದರು. ಅದರಂತೆ ರಾಜನು ಹುಡುಗನ ಭಾವಚಿತ್ರವನ್ನು ಬರೆದ ನಂತರ ಹುಡುಗನಿಗೆ ಜೀವ ಬಂದಿತು. ಅಂದಿನಿಂದ ಪ್ರತಿಯೊಂದು ಹಬ್ಬದಲ್ಲಿ ರಂಗೋಲಿಯನ್ನು ಹಾಕುವುದು ಸಂಪ್ರದಾಯವಾಯಿತು.

ದೀಪಾವಳಿಯ ಸಂದರ್ಭದಲ್ಲಿ ಲಕ್ಷ್ಮಿ ದೇವತೆ ಮನೆಮನೆಗೆ ಭೇಟಿ ನೀಡುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಆದ್ದರಿಂದ ಮನೆಯನ್ನು ಅಚ್ಚುಕಟ್ಟಾಗಿ ಅಲಂಕರಿಸಿ ಕುಟುಂಬದವರು ಹೊಸಬಟ್ಟೆಗಳನ್ನು ತೊಟ್ಟು ಸಂಭ್ರಮಿಸುತ್ತಾರೆ. ಮಕ್ಕಳು ತಮ್ಮ ಗೆಳೆಯ, ಗೆಳತಿ ಬಂಧುಗಳು, ನೆರೆಯವರಿಗೆ ಶುಭಾಶಯ ಪತ್ರಗಳನ್ನು ನೀಡಿ ಶುಭ ಹಾರೈಸುತ್ತಾರೆ.

ಅಲ್ಲದೇ ದೀಪಾವಳಿಯ ಸಂಭ್ರಮಕ್ಕಾಗಿ ಮನೆಯ ಮುಂಭಾಗದಲ್ಲಿ ಸುಂದರವಾದ ಬಣ್ಣ ಬಣ್ಣದ ರಂಗೋಲಿಯನ್ನು ಹಾಕುತ್ತಾರೆ. ದೀಪಾವಳಿ ಹಬ್ಬದಲ್ಲಿ ಮನೆಯ ಗೋಡೆಗಳಿಗೆ ಹೊಸದಾಗಿ 'ಸುಣ್ಣ' ಬಣ್ಣಗಳನ್ನು ಹೊಡೆಯಲಾಗುವುದು. ಹಾಗೂ ರಂಗೋಲಿಯನ್ನು ಹಾಕುವುದರಿಂದ ಲಕ್ಷ್ಮಿ ದೇವತೆ ಪ್ರಸನ್ನಳಾಗುತ್ತಾಳೆ ಎನ್ನುವುದು ಭಕ್ತರ ನಂಬಿಕೆ.

ಬಹುತೇಕ ರಂಗೋಲಿ ಚಿತ್ರಗಳು ವೃತ್ತಾಕಾರವಾಗಿರುತ್ತವೆ. ಸೂರ್ಯ, ಚಂದ್ರ, ಮತ್ತು ರಾಶಿ ಮಂಡಲ, ಕಮಲದಲ್ಲಿ ಕುಳಿತ ಲಕ್ಷ್ಮಿ ದೇವತೆ ಚಿತ್ರಗಳು ಸಾಮಾನ್ಯವಾಗಿರುತ್ತವೆ. ತ್ರಿಕೋನಗಳು ಪರಸ್ಪರ ವಿರೋಧ ದಿಕ್ಕಿನಲ್ಲಿರುವ ಚಿತ್ರ, ವಿದ್ಯಾದೇವತೆ ಸರಸ್ವತಿಯನ್ನು ಬಿಂಬಿಸುವ ಮೂಲಕ ರಂಗೋಲಿಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಕಮಲದ ಹೂವಿನ ಒಳ ಆವರಣದಲ್ಲಿ 24 ಎಲೆಗಳನ್ನು ಚಿತ್ರಿಸಿ, ಹೊರ ಆವರಣದ ನಾಲ್ಕು ಮೂಲೆಗಳಿಗೆ ಲಕ್ಷ್ಮಿ ದೇವತೆಯ ಪಾದಗಳು ಮನೆಯನ್ನು ಪ್ರವೇಶಿಸುವಂತೆ ಬಿಡಿಸಲಾಗುತ್ತದೆ.
WD

ಬಂಗಾಳದಲ್ಲಿ ಅಲ್ಪನಾ, ರಾಜಸ್ಥಾನದಲ್ಲಿ ಮದನಾ, ಬಿಹಾರ್‌ನಲ್ಲಿ ಅರಿಪಣಾ ಎಂದು ಕರೆಯಲಾಗುತ್ತದೆ. ರಂಗೋಲಿ ಒಂದು ಸಂಸ್ಕೃತ ಶಬ್ದ. ಬಣ್ಣದಿಂದ ಭಾವನೆಗಳನ್ನು ವ್ಯಕ್ತಪಡಿಸುವುದು ಎಂದರ್ಥ. ಆಂಧ್ರಪ್ರದೇಶದಲ್ಲಿ ' ಅಷ್ಟದಳ ಕಮಲ' ಸೇರಿದಂತೆ ರೇಖೆಗಳಿಂದ ಕಮಲ ಹೂವಿನ ಚಿತ್ರವನ್ನು ಬಿಡಿಸಲಾಗುತ್ತದೆ. ತಮಿಳುನಾಡಿನಲ್ಲಿ ಎಂಟು ಬಿಂದುಗಳ ನಕ್ಷತ್ರವನ್ನು ಬಿಂಬಿಸುವ 'ಹೃದಯ ಕಮಲಂ' ರಂಗೋಲಿಗೆ ಆದ್ಯತೆ ನೀಡುತ್ತಾರೆ. ಮಹಾರಾಷ್ಟ್ರದಲ್ಲಿ ಶಂಖದ ಕಮಲ ಚಿತ್ರದ ರಂಗೋಲಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ದೀಪಾವಳಿಯ ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಮಾತ್ರ 1001 ಕಮಲದ ಚಿತ್ರಗಳ ರಂಗೋಲಿ ಹಾಗೂ ಸ್ವಸ್ತಿಕ್ ಮತ್ತು ಶಂಖದ ಚಿತ್ರಗಳನ್ನು ಬಿಡಿಸಲಾಗುತ್ತದೆ.

ಭಾರತದಲ್ಲಿ ದವಸ ಧಾನ್ಯಗಳಿಂದ ರಂಗೋಲಿಯನ್ನು ಸಿದ್ದಪಡಿಸಲಾಗುತ್ತದೆ. ಬಿಳಿಯ ಬಣ್ಣ ಶಾಂತಿ ಮತ್ತು ಪವಿತ್ರತೆ ಮತ್ತು ಸ್ಥೈರ್ಯದ ಸಂಕೇತವಾಗಿರುವುದರಿಂದ ಗೋಡೆಗಳಿಗೆ ಬಳಿಯುವ ಬಣ್ಣ ಸಹಜವಾಗಿ ಬಿಳಿ ಬಣ್ಣದಾಗಿರುತ್ತದೆ. ಹೀಗೆ ದೀಪಾವಳಿ ಹಬ್ಬದಲ್ಲಿ ರಂಗೋಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.