ಚುನಾವಣಾ ಸಿದ್ಧತೆಗೆ ಕಾಂಗ್ರೆಸ್ ತಂತ್ರ

ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗುತ್ತಿರುವಂತೆ, ಕಾಂಗ್ರೆಸ್ ಮುಖಂಡರು ವಿಧಾನಸಭಾ ಚುನಾವಣೆ ಕಾರ್ಯತಂತ್ರ ರೂಪಿಸಲು ವೇದಿಕೆ ಸಜ್ಜುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯದ ಕಾಂಗ್ರೆಸ್ ನಾಯಕರು ಸಭೆ ಸೇರಿ, ಚುನಾವಣಾ ಪೂರ್ವ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದರು.

ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಅನ್ವಯದಲ್ಲಿ ನಡೆಯಬೇಕಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೈಗೊಳ್ಳಬೇಕಾದ ಪ್ರಮುಖ ಕಾರ್ಯಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಕಾಂಗ್ರೆಸ್ ರೂಪಿಸಿರುವ ನಾಲ್ಕು ಸಮಿತಿಗಳಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಎಂ. ಕೃಷ್ಣ, ಚುನಾವಣಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಇತರ ಸಮಿತಿ ಅಧ್ಯಕ್ಷರುಗಳು ಹಾಗೂ ಇತರ ಹಿರಿಯ ಮುಖಂಡರು ಭಾಗವಹಿಸಿದ್ದರು.

ರಾಜ್ಯಕ್ಕೆ ರಾಹುಲ್ ಭೇಟಿಯಿಂದ ಜನತೆಯಲ್ಲಿ ಆಗಿರುವ ಬದಲಾವಣೆ ಹಾಗೂ ರಾಹುಲ್ ಭೇಟಿಯಿಂದ ಪಕ್ಷಕ್ಕೆ ಆಗಿರುವ ಸಕಾರಾತ್ಮಕ ಬೆಳವಣಿಗೆಯ ಕುರಿತು ಚರ್ಚಿಸಲಾಯಿತು. ಪಕ್ಷದಲ್ಲಿನ ಆಂತರಿಕ ಭಿನ್ನಮತ ಬದಿಗಿಟ್ಟು ಪಕ್ಷದ ಗೆಲುವಿಗಾಗಿ ಶ್ರಮ ಪಡಬೇಕೆಂದು ರಾಹುಲ್ ರಾಜ್ಯ ಪ್ರವಾಸ ವೇಳೆ ಕಾಂಗ್ರೆಸ್ ನಾಯಕರಿಗೆ ತಿಳಿಸಿರುವುದು ಇದೀಗ ಸ್ವಲ್ಪ ಮಟ್ಟಿನ ಯಶಸ್ಸು ಕಂಡಿದೆ. ಇಂದು ರಾಜ್ಯದ ಎಲ್ಲಾ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ವೆಬ್ದುನಿಯಾವನ್ನು ಓದಿ