ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ

ನಾಗೇಂದ್ರ ತ್ರಾಸಿ
ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತವೆ. ಕೇಂದ್ರದಿಂದ ನ್ಯಾಯ ಸಿಗುವುದಿಲ್ಲ. ರಾಜ್ಯಕ್ಕೆ ತಕ್ಕ ಗೌರವ ಸಲ್ಲಬೇಕಾದರೆ ತಮಿಳುನಾಡನ್ನು ಮಾದರಿಯಾಗಿಟ್ಟುಕೊಂಡು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಬೇಕು ಎಂಬುದಾಗಿ ಹೇಳಿದ್ದರು.

ಆದರೆ ರಾಜಕೀಯವಾಗಿ ಕುಮಾರಸ್ವಾಮಿಯವರ ಹೇಳಿಕೆಯನ್ನು ತಿರಸ್ಕರಿಸಬಹುದು ಅಥವಾ ಅವರ ವಿಶ್ವಾಸದ್ರೋಹವನ್ನೇ ನೆಪವಾಗಿಟ್ಟುಕೊಂಡು ಹಂಗಿಸಬಹುದು. ನಾವು ಅವೆರಡನ್ನೂ ಬಿಟ್ಟು ರಾಜ್ಯದ ವಿಷಯವನ್ನು ಗಮದಲ್ಲಿಟ್ಟುಕೊಂಡರೆ, ಕುಮಾರಸ್ವಾಮಿಯವರು ಹೇಳಿದ ಮಾತಿನಲ್ಲಿ ಸತ್ಯಾಂಶ ಇದೆ. ಅಲ್ಲದೇ 1996ರ ಬಳಿಕ ಹಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಮನಗಾಣಬೇಕಾಗಿದೆ.

1960ರಲ್ಲಿ ಹಿಂದಿ ವಿರೋಧಿ ಚಳವಳಿಯೊಂದಿಗೆ ಜನ್ಮತಳೆದ ಡಿಎಂಕೆ ಜನಪ್ರಿಯವಾಗುವುದರೊಂದಿಗೆ ರಾಜಕೀಯವಾಗಿ ಬಹಳಷ್ಟು ಪ್ರಬಲವಾಯಿತು. 1967ರಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಬಲವನ್ನು ಕುಗ್ಗಿಸುವ ಮೂಲಕ ಡಿಎಂಕೆಯ ಸಿಎನ್ ಅಣ್ಣಾದೊರೈ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದರು. ಅಣ್ಣಾ ಮರಣಾನಂತರ 1969ರಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಗಾದಿಗೆ ಏರಿದ್ದರು. ಬಳಿಕ ಕಾಂಗ್ರೆಸ್ ತೊರೆದು ಡಿಎಂಕೆ ಸೇರಿದ್ದ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಎಂ.ಜಿ.ರಾಮಚಂದ್ರನ್ (ಎಂಜಿಆರ್) - ಕರುಣಾನಿಧಿ ನಡುವಿನ ವಿರಸದಿಂದಾಗಿ 1972ರಲ್ಲಿ ಎಡಿಎಂಕೆ(ನಂತರ ಎಐಎಡಿಎಂಕೆ ಆಗಿದ್ದು) ಅನ್ನು ಹುಟ್ಟು ಹಾಕುವ ಮೂಲಕ ಡಿಎಂಕೆಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದಿದೆ. ಇಂದು ತಮಿಳುನಾಡಿನ ಡಿಎಂಕೆ ಕೇಂದ್ರದಲ್ಲಿ ಬಲವಾಗಿ ಧ್ವನಿ ಎತ್ತುವಷ್ಟು ಶಕ್ತವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯಲ್ಲೂ ಗ್ಯಾಸ್ ಸಿಲಿಂಡರ್, ಪ್ರತಿಮನೆಯಲ್ಲಿ ಟಿವಿ ಇದೆ, ಇಲ್ಲಿನ ರೈಲು ವ್ಯವಸ್ಥೆ, ಫ್ಲೈ ಓವರ್, ಬಸ್ ಟಿಕೇಟ್ ದರ, ವಿದ್ಯುತ್ ದರ ಎಲ್ಲವೂ ಜನಪರವಾಗಿದೆ. ಇದು ಸಾಧ್ಯವಾಗಿದ್ದು ಪ್ರಾದೇಶಿಕ ಪಕ್ಷಗಳ ಹೋರಾಟದ ಫಲ.

ಅದೇ ರೀತಿಯಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತಕ್ಕೆ ಸೆಡ್ಡು ಹೊಡೆದು 1982 ಮಾರ್ಚ್ 29ರಂದು ತೆಲುಗು ಸಿನಿಮಾರಂಗದ ಖ್ಯಾತ ಚಿತ್ರನಟ ಎನ್.ಟಿ.ರಾಮರಾವ್(ಎನ್‌ಟಿಆರ್) ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಿದರು. 1984ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಅದು 35 ಸೀಟುಗಳನ್ನು ಪಡೆದಿತ್ತು. 1999-2004ರಲ್ಲಿ ನಡೆದ 13ನೇ ಲೋಕಸಭಾ ಚುನಾವಣೆಯಲ್ಲೇ ಅದು ನಾಲ್ಕನೇ (29 ಸೀಟುಗಳನ್ನು ಗಳಿಸಿ) ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಎನ್‌ಟಿಆರ್ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ನಂತರ 1996ರಲ್ಲಿ ಚಂದ್ರಬಾಬು ನಾಯ್ಡು ಅವರು ಅಧಿಕಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶ, ಹೈದರಾಬಾದ್ ಹೆಸರು ಜಾಗತಿಕವಾಗಿ ಬೆಳೆಯಿತು.

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ 1969ರಲ್ಲಿ ಕಾಂಗ್ರೆಸ್‌‌ಗೆ ಸೇರ್ಪಡೆಗೊಂಡಿದ್ದ ರಾಮಕೃಷ್ಣ ಹೆಗಡೆಯವರು, ನಂತರದಲ್ಲಿ 1975ರ ತುರ್ತುಪರಿಸ್ಥಿತಿಯಿಂದ ರೋಸಿಹೋಗಿ, ಜನತಾ ಪಕ್ಷ ಸೇರಿದ್ದರು. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ರಾಮಕೃಷ್ಣ ಹೆಗಡೆ 1983ರಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿನ ಪಂಚಾಯತ್ ರಾಜ್ ವ್ಯವಸ್ಥೆ, ಸಾರ್ವಜನಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೀಗೆ ಪ್ರಮುಖ ನಿರ್ಧಾರಗಳು ಜನಪರವಾಗಿದ್ದವು. ಅಲ್ಲದೆ ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರು ಪಡೆದಿದ್ದರು. ಆದರೆ ಹಗರಣಗಳ ವಿವಾದಗಳಲ್ಲಿ ಸಿಲುಕಿದ್ದು ಕೂಡ ಅಷ್ಟೇ ವಿಪರ್ಯಾಸ. ನಂತರ ಆರೋಪ, ಅಧಿಕಾರ, ಒಳರಾಜಕೀಯ, ಹಗರಣಗಳಿಂದ 1986ರಲ್ಲಿ ರಾಜೀನಾಮೆ ನೀಡಿದ ಹೆಗಡೆ, ಮತ್ತೆ ಅಧಿಕಾರಕ್ಕೆ ಬಂದು 1988ರವರೆಗೆ ಮುಖ್ಯಮಂತ್ರಿಯಾಗಿದ್ದರು. ಬಳಿಕ ರಾಷ್ಟ್ರೀಯ ನವನಿರ್ಮಾಣ ವೇದಿಕೆ, ನಂತರ ಲೋಕಶಕ್ತಿಯನ್ನು ಹುಟ್ಟುಹಾಕಿದರು ಕೂಡಾ ಅದು ದುರ್ಬಲಗೊಂಡಿತ್ತು. ಆದರೆ ಇಂದು ಜನತಾಪಕ್ಷ ಒಡೆದು, ಒಡೆದು ಅವುಗಳೇ ತಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದುಕೊಂಡಿರುವುದು ಹಾಗೂ ಸಮಾಜವಾದಿಗಳಾಗಿ, ಕಾಂಗ್ರೆಸ್ ವಿರೋಧಿ ಧೋರಣೆ ಹೊಂದಿದ್ದ ನಾಯಕರುಗಳೇ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ದುರಂತವಲ್ಲದೆ ಇನ್ನೇನು?

ಇವತ್ತು ಕರ್ನಾಟಕದ ಪ್ರತಿಯೊಂದು ಸಮಸ್ಯೆಗೂ ನಮ್ಮ ರಾಜಕಾರಣಿಗಳು ಕೇಂದ್ರದಲ್ಲಿ ಹ್ಯಾಪು ಮೋರೆ ಹಾಕಿಕೊಳ್ಳುವಂತಾಗಿದೆ, ಅದೇ ತಮಿಳುನಾಡು ವಿಷಯಕ್ಕೆ ಬನ್ನಿ... ಕಾವೇರಿ ವಿವಾದ, ಹೊಗೇನಕಲ್ ವಿವಾದ, ವಿದ್ಯುತ್ ಸರಬರಾಜು... ಯಾವುದೇ ಇರಲಿ ತನ್ನ ರಾಜ್ಯದ ಹಿತಾಸಕ್ತಿಯನ್ನು ಬಲಿಗೊಡುವುದಿಲ್ಲ. ಇತ್ತೀಚೆಗೆ ಮಧುರೈಯಲ್ಲಿ ಸಾಂಪ್ರದಾಯಿಕ ಹೆಸರಲ್ಲಿ ನಡೆಯುವ ಜಲ್ಲಿಕಟ್ಟು (ಗೂಳಿಕಾಳಗ)ಗೆ ಸ್ವತಃ ಸರಕಾರವೇ ಸರ್ವೊಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ, ಅದರಿಂದ ಯಾರಿಗೂ ಜೀವಹಾನಿ ಇಲ್ಲ, ಜಲ್ಲಿಕಟ್ಟುಗೆ ಕೆಲವು ಶತಮಾನಗಳ ಇತಿಹಾಸ ಇದೆ ಎಂಬುದಾಗಿ ಸಮರ್ಥಿಸಿಕೊಂಡಿತ್ತು. ಆದರೂ ನ್ಯಾಯಾಲಯ ಷರತ್ತು ವಿಧಿಸಿ ಗೂಳಿಕಾಳಗಕ್ಕೆ ಅನುಮತಿ ನೀಡಿತ್ತಾದರೂ, ಇಬ್ಬರು ಪ್ರಾಣಕಳೆದುಕೊಂಡಿದ್ದರು.

ಇಂದು ತಮಿಳುನಾಡಿನಲ್ಲಿ ಡಿಎಂಕೆ (ದ್ರಾವಿಡ ಮುನ್ನೇತ್ರಾ ಕಜಗಂ), ಎಐಎಡಿಎಂಕೆ (ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಂ), ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ, ರಾಷ್ಟ್ರೀಯ ತೆಲಂಗಾಣ ಪಕ್ಷ, ಇಂಡಿಯಾ ಫಾರ್ವರ್ಡ್ ಬ್ಲಾಕ್ (ಪಶ್ಚಿಮಬಂಗಾಳ), ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಮೇಘಾಲಯ, ಪಶ್ಚಿಮಬಂಗಾಲ), ಅಸ್ಸೋಮ್ ಗಣ ಪರಿಷತ್ (ಅಸ್ಸಾಂ), ಬಿಜು ಜನತಾದಳ (ಒರಿಸ್ಸಾ), ಇಂಡಿಯನ್ ಫೆಡರಲ್ ಡೆಮೋಕ್ರೆಟಿಕ್ ಪಾರ್ಟಿ(ಕೇರಳ), ಇಂಡಿಯನ್ ನ್ಯಾಶನಲ್ ಲೋಕದಳ (ಹರಿಯಾಣ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಕೇರಳ), ಜನತಾದಳ (ಬಿಹಾರ, ಜಾರ್ಖಂಡ್, ನಾಗಾಲ್ಯಾಂಡ್, ಕರ್ನಾಟಕ) ರಾಷ್ಟ್ರೀಯ ಜನತಾದಳ (ಬಿಹಾರ್, ಜಾರ್ಖಂಡ್), ಸಮಾಜವಾದಿ ಪಕ್ಷ (ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಖಂಡ), ಶಿವಸೇನೆ (ಮಹಾರಾಷ್ಟ್ರ), ಯುನೈಟೆಡ್ ಗೋವನ್ಸ್ ಡೆಮೋಕ್ರೆಟಿಕ್ ಪಾರ್ಟಿ (ಗೋವಾ) ಇವು ಪ್ರಮುಖ ಪ್ರಾದೇಶಿಕ ಪಕ್ಷಗಳು. ತಮಿಳುನಾಡಿನಲ್ಲಂತೂ ಜನ ಒಮ್ಮೆ ಕರುಣಾನಿಧಿಯವರನ್ನು ಅಧಿಕಾರದ ಗದ್ದುಗೆ ಏರಿಸಿದರೆ, ಮತ್ತೊಮ್ಮೆ ಎಐಎಡಿಎಂಕೆ ಜಯಲಲಿತಾ ಅವರನ್ನು, ಹೀಗೆ ಕಳೆದ 40 ವರ್ಷಗಳಿಂದ ಪ್ರಾದೇಶಿಕ ಪಕ್ಷಗಳೇ ಇಲ್ಲಿ ಪ್ರಾಬಲ್ಯ ಪಡೆದಿವೆ. ಯಾವುದೇ ರಾಷ್ಟ್ರೀಯ ಪಕ್ಷಗಳು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ.

ಉತ್ತರಪ್ರದೇಶದಲ್ಲಿಯೂ ಬಹುಜನ ಸಮಾಜ ಪಕ್ಷ ಗಟ್ಟಿಯಾಗಿ ನೆಲೆಯೂರಿದೆ. ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ, ತೆಲಂಗಾಣ ರಾಷ್ಟ್ರ ಸಮಿತಿ ಬಲವರ್ಧಿಸಿಕೊಂಡಿವೆ. ಕರ್ನಾಟಕದ ಜನ ಹೆಸರಿಗಷ್ಟೇ ಬುದ್ಧಿವಂತರಾಗಿದ್ದೇವೆ. ರಾಷ್ಟ್ರೀಯ ಪಕ್ಷಗಳಲ್ಲಿನ ರಾಜಕೀಯ ನಾಯಕರಿಗೆ ಇಚ್ಛಾಶಕ್ತಿಯ ಕೊರತೆ ತುಂಬಿಕೊಂಡಿದ್ದರೆ, ಕೇವಲ ಭರವಸೆಗಳ ಮೂಟೆಯೊಂದಿಗೆ ಅಧಿಕಾರದ ಗದ್ದುಗೆ ಏರುವುದು ಮಾತ್ರ ಮುಖ್ಯವಾಗಿದೆ ವಿನಃ ಜನಪರ ಕಾಳಜಿ ಬೇಕಾಗಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಬಗೆಹರಿಯದೆ ಇರುವ ಸಮಸ್ಯೆಗಳೇ ಸಾಕ್ಷಿ. ಕರ್ನಾಟಕದ ಸಮಸ್ಯೆಯನ್ನು ಪಟ್ಟು ಹಿಡಿದು ಮಾಡಿಸಿಕೊಳ್ಳಲಿಕ್ಕಾದರೂ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ, ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಯಂತೆ, ಅಂತಹ ನಾಯಕರು ಯಾರು...!!!

ವೆಬ್ದುನಿಯಾವನ್ನು ಓದಿ