ಸಾಲಮನ್ನಾ ಐತಿಹಾಸಿಕ ನಿರ್ಧಾರ : ಮೊಯ್ಲಿ

ಜಾತ್ಯಾತೀತ ಪರಂಪರೆಯಿಂದ ಕೂಡಿರುವ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆಯನ್ನು ಏರಲಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಘೋಷಿಸಿದ್ದಾರೆ.

ಇಂದು ನಗರದಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಲಮನ್ನಾ ಯೋಜನೆ ಒಂದು ಐತಿಹಾಸಿಕ ನಿರ್ಧಾರವಾಗಿದ್ದು, ವಿದ್ಯುತ್ ಹಾಗೂ ನೀರಾವರಿ ಯೋಜನೆಗಳು ಸೇರಿದಂತೆ ಹಲವು ಯೋಜನೆಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾರ್ಯರೂಪಕ್ಕೆ ತಂದಿದೆ ಎಂದು ಕೇಂದ್ರ ಸರ್ಕಾರದ ಸಾಧನೆಯನ್ನು ಬಣ್ಣಿಸಿದರು.

ರೈತರ ಆತ್ಮಹತ್ಯೆ ತಡೆಗೆ ವಿದರ್ಭ ಯೋಜನೆಯನ್ನು ಜಾರಿಗೊಳಿಸಲಾಗಿದ್ದಲ್ಲದೆ, ದೇಶದಲ್ಲಿ ಹಸಿರು ಕ್ರಾಂತಿಗೆ ಚಾಲನೆ ನೀಡಿದ್ದೇ ಕಾಂಗ್ರೆಸ್ ಎಂದ ಅವರು, ಕಡು ಬಡವರಿಗೂ ಉನ್ನತ ಶಿಕ್ಷಣದಲ್ಲಿ ಸಿಇಟಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಯಶಸ್ವಿನಿ ಯೋಜನೆ ದೇಶಕ್ಕೆ ಮಾದರಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಆರ್ಥಿಕ ಸಬಲತೆಗೆ ಸಕಲ ರೀತಿಯಲ್ಲಿಯೂ ಪ್ರಯತ್ನಿಸುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ರಾಜ್ಯದಲ್ಲಿ ನೀರಾವರಿ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರವಹಿಸಿದ್ದು, ನಶಿಸುತ್ತಿರುವ ಕೆರೆ ಕಟ್ಟೆಗಳ ಅಭಿವೃದ್ದಿಗೆ ಕಾಂಗ್ರೆಸ್ ಹೆಚ್ಚಿನ ಒತ್ತು ನೀಡಿದೆ ಎಂದು ಕಾಂಗ್ರೆಸ್ ಸಾಧನೆಯನ್ನು ಜನತೆಗೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ