ದಾವಣಗೆರೆಯಲ್ಲಿ ಲೋಕಜನಶಕ್ತಿ ಅಭ್ಯರ್ಥಿಗೆ ಬೆಂಬಲ:ಚೌಹಾಣ್

ಸೋಮವಾರ, 5 ಮೇ 2008 (19:41 IST)
ಬಹುಮತ ಸಿಗದಿದ್ದರೆ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧವಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಇತ್ತೀಚೆಗೆ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌಹಾಣ್ ಶುಭ ಕೋರಿದ್ದಾರೆ.

ಇಂದು (ಸೋಮವಾರ) ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ವಾಣಿ ಈಗಾಗಲೇ ಬಿಜೆಪಿಯನ್ನು ಪ್ರತಿಪಕ್ಷ ಸ್ಥಾನದಲ್ಲಿ ಕೂರಿಸಲು ಹೊರಟಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುವುದು ಖಚಿತವಾಗಿದ್ದು, ಯಾವುದೇ ರೀತಿಯ ಮೈತ್ರಿ ಅಗತ್ಯವಿಲ್ಲ ಎಂದು ತಿಳಿಸಿದರು.

ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಕೋಲಾರದಲ್ಲಿ ಬಂಡಾಯ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆಂಬ ವಿಷಯ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ ಅವರು, ಕಳೆದ 20 ತಿಂಗಳ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯದ ಖಜಾನೆಯನ್ನು ಲೂಟಿ ಮಾಡಿರುವ ಕುರಿತು ಜನತೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಅನೀರೀಕ್ಷಿತ ರಾಜಕೀಯ ಬೆಳವಣಿಗೆ ಹಾಗೂ ತಾಂತ್ರಿಕ ದೋಷದಿಂದ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಲು ಸಾಧ್ಯವಾಗದೆ ಇರುವುದರಿಂದ ಅಲ್ಲಿನ ಲೋಕಜನಶಕ್ತಿ ಅಭ್ಯರ್ಥಿ ಜೆ. ಮಹಮದ್ ಅವರಿಗೆ ಬೆಂಬಲ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇದೇ ತಿಂಗಳು 7ರಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಪರ ಪ್ರಚಾರ ನಡೆಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ಇದೇ ತಿಂಗಳ 8ರಂದು ರಾಜ್ಯಕ್ಕೆ ಪಕ್ಷದ ಪರ ಪ್ರಚಾರ ನಡೆಸಲು ಆಗಮಿಸಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ