ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಮಹಿಳೆಯ ಪಾತ್ರ

PTI
ಮಹಿಳಾ ದಿನಾಚರಣೆ ಬಂದೇ ಬಿಟ್ಟಿತು. ಹಿಂದಿನ ಮಹಿಳೆಗೂ ಇಂದಿನ ಮಹಿಳೆಗೂ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಸಮಾಜದಲ್ಲಿ ಸ್ತ್ರೀ ಮತ್ತು ಪುರುಷನಿಗಿದ್ದ ಅಂತರ ಸ್ವಲ್ಪ ಮಟ್ಟಿಗೆ ಇಳಿದಿದೆ. ಆದರೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರೆದಿರುವ ಮಹಿಳೆ ಎಲ್ಲೋ ಸ್ವಲ್ಪ ಎಡವಿದ್ದಾಳೆಯೇನೋ ಎಂದೆನಿಸುವುದು ಸಹಜ.

ಇದಕ್ಕೆ ಕಾರಣ ಇಲ್ಲದಿಲ್ಲ. ದಿನ ನಮ್ಮ ಮುಂದೆ ಕಾಣುವ ಲೈಂಗಿಕ ಕಿರುಕುಳ, ವರದಕ್ಷಿಣೆ ದೌರ್ಜನ್ಯ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಮಹಿಳೆ ಇನ್ನೂ ಹೊರ ಬಂದಿಲ್ಲ. ಆರ್ಥಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿಯೂ ಮಹಿಳೆ ಮುಂದುವರಿಯಬೇಕಿದೆ.

ದಿನವೀಡೀ ಹಲವಾರು ಜವಾಬ್ದಾರಿಗಳನ್ನು ಹೊತ್ತು ಮುನ್ನಡೆಯಬೇಕಾದ ಪರಿಸ್ಥಿತಿ ಈಕೆಗಿದೆ. ತನ್ನ ಉದ್ಯೋಗದ ನಡುವೆ ಮನೆಯ ಜವಾಬ್ದಾರಿಯನ್ನು ನಡೆಸಬೇಕಿದೆ. ಇದರಿಂದ ಮಾನಸಿಕವಾಗಿ ಮಹಿಳೆ ಜರ್ಜರಿತಳಾಗಿದ್ದಾಳೆ. ಈ ನಿಟ್ಟಿನಲ್ಲಿ ಆಕೆಗೆ ಮಾನಸಿಕವಾಗಿ ಧೈರ್ಯ ತುಂಬುವ ಶಕ್ತಿ ನೀಡಬೇಕಿದೆ.

ಅದಕ್ಕೆ ಗ್ರಾಮೀಣ ಮಹಿಳೆಯರು ಹೊರತಾಗಿಲ್ಲ. ಇಲ್ಲಿ ಹೌಸ್ ವೈಫ್ ಅನ್ನುವ ಪದವೇ ಇಲ್ಲ. ಗಂಡಸು-ಹೆಂಗಸರು ಎಲ್ಲರೂ ದುಡಿಯಬೇಕಾದ ಅನಿವಾರ್ಯತೆ. ಇಂತಹ ಸನ್ನಿವೇಶದಲ್ಲಿ ಸರಕಾರ ಘೋಷಿಸಿರುವ ಅನೇಕ ಕಾರ್ಯಕ್ರಮಗಳು ಹಾಗೂ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಗ್ರಾಮೀಣ ಮಹಿಳೆಯರಿಗೆ ತಲುಪಿದೆಯೇ ಅನ್ನುವುದು ಪ್ರಮುಖ ಪ್ರಶ್ನೆ.

ಇತ್ತೀಚೆಗೆ ಸರಕಾರ ಹಲವು ಗ್ರಾಮೀಣ ಯೋಜನೆಗಳನ್ನು ತಂದಿದೆ. ಆದರೆ ಕಾರಣಾಂತರಗಳಿಂದ ಗ್ರಾಮೀಣ ಮಹಿಳೆಗೆ ತಲುಪಿಲ್ಲವಾದರೂ, ಶೇಕಡ 10ರಷ್ಟು ಯಶಸ್ವಿ ಕಂಡಿದೆ ತೃಪ್ತಿ ಪಡಬಹುದಾಗಿದೆ. ಇತ್ತೀಚೆಗೆ ಕೈಗಾರಿಕೋದ್ಯಮ ಇಲಾಖೆ ಜಾರಿಗೆ ತಂದ ಯೋಜನೆಯಿಂದ ಹಲವು ಸ್ವಉದ್ಯೋಗಿಗಳಿಗೆ ಮನೆಯಲ್ಲಿಯೇ ಕುಳಿತು ಯಾರ ಹಂಗಿಲ್ಲದೆ ಬದುಕುವಂತಹ ರೀತಿಯನ್ನು ಕಲಿಸಿಕೊಟ್ಟಿದೆ.

ಅದಕ್ಕಿಂತಲೂ ಮುಖ್ಯವಾಗಿ ಸರಕಾರ ಘೋಷಿಸಿರುವ ಇ-ಮಹಿಳೆ ಗ್ರಾಮೀಣ ಮಹಿಳೆಯರಿಗೆ ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿಯಬಹುದಾಗಿದೆ. ಇದು ನಿಜಕ್ಕೂ ಯಶಸ್ಸು ಗಳಿಸುವುದರಲ್ಲಿ ಸಂಶಯವೇ ಇಲ್ಲ. ಅಲ್ಲದೆ, ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ಅನೇಕ ಯೋಜನೆಗಳನ್ನು ಕಲ್ಪಿಸಿಕೊಟ್ಟಿದೆ. ಸ್ತ್ರೀಶಕ್ತಿ, ಸ್ವ ಉದ್ಯೋಗಗಳಂತಹ ಯೋಜನೆಗಳು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಕೊನೆ ಹಾಡಲು ಪ್ರಯತ್ನಿಸಿದೆ. ಅಲ್ಲದೆ, ಇಂತಹ ಯೋಜನೆಗಳು ಮಹಿಳೆಯರಿಗೆ ಸಮಾಜದಲ್ಲಿ ಎದ್ದು ನಿಲ್ಲುವಂತಹ ಶಕ್ತಿ ನೀಡಿದೆ.

ವೆಬ್ದುನಿಯಾವನ್ನು ಓದಿ