'ಸ್ಲಂ ಡಾಗ್' ಮಡಿಲಿಗೆ ಎಂಟು ಆಸ್ಕರ್ ಪ್ರಶಸ್ತಿ ಗರಿ

ಸೋಮವಾರ, 23 ಫೆಬ್ರವರಿ 2009 (13:26 IST)
IFM
ಭಾರತೀಯ ಚಿತ್ರವೊಂದು ಆಸ್ಕರ್‍‌ಗೆ ಸ್ಪರ್ಧಿಸುವುದೇ ದುಸ್ತರ ಎಂಬಂತಿದ್ದ ಕಾಲಘಟ್ಟದಲ್ಲಿಯೂ ಸುಮಾರು 27 ವರ್ಷಗಳ ಬಳಿಕ 'ಸ್ಲಮ್‌ಡಾಗ್ ಮಿಲಿಯನೇರ್' ಅತ್ಯುತ್ತಮ ಸಂಗೀತ ಹಾಗೂ ಅತ್ಯುತ್ತಮ ಹಿನ್ನಲೆ ಸಂಗೀತಕ್ಕಾಗಿ ಎ.ಆರ್. ರೆಹಮಾನ್ ಸಹಿತ ಒಟ್ಟು ಎಂಟು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಕೋಟ್ಯಂತರ ಭಾರತೀಯರ ಮನಸ್ಸನ್ನು ಪುಳಕಿತಗೊಳಿಸಿದೆ.

ಸೋಮವಾರ ಲಾಸ್‌‌ಏಂಜಲೀಸ್‌‌ನಲ್ಲಿ ನಡೆದ 81ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಸ್ಲಮ್‌ಡಾಗ್ ಮಿಲಿಯನೇರ್ ನಾಮಕರಣಗೊಂಡಿದ್ದ ಹತ್ತು ವಿಭಾಗಗಳಲ್ಲಿ ಎಂಟು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವುದಾಗಿ ಘೋಷಿಸುತ್ತಿದ್ದಂತೆಯೇ ನೆರೆದಿದ್ದ ಜನಸ್ತೋಮ ಹರ್ಷೋದ್ಘಾರದೊಂದಿಗೆ ಹುಚ್ಚೆದ್ದು ಕುಣಿಯಿತು. ಈ ಚಿತ್ರಕ್ಕಾಗಿ ಭಾರತೀಯನೊಬ್ಬ ಪಡೆದ ಮೊದಲ ಪ್ರಶಸ್ತಿ ರೆಸೂಲ್ ಪೂಕುಟ್ಟಿಯವರಿಗೊಲಿಯಿತು. ಎರಡನೇ ಭಾರತೀಯ ಎ.ಆರ್. ರೆಹಮಾನ್.

'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಅತ್ಯುತ್ತಮ ಸಂಗೀತಕ್ಕಾಗಿ (ಒರಿಜಿನಲ್ ಸ್ಕೋರ್) ಎ.ಆರ್. ರೆಹಮಾನ್, "ಜೈ ಹೋ"ದ ಅತ್ಯುತ್ತಮ ಮ್ಯೂಸಿಕ್ ಸಾಂಗ್‌ಗಾಗಿ ಎ.ಆರ್. ರೆಹಮಾನ್ ಮತ್ತು ಸಾಹಿತ್ಯ ರಚನೆಕಾರ ಗುಲ್ಜಾರ್, ಅತ್ಯುತ್ತಮ ಚಿತ್ರಕಥೆಗಾಗಿ ಸೈಮನ್ ಬ್ಯೂಫಾಯ್, ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಅಂತೋಣಿ ಡಾಡ್ ಮಾಂಟಲ್, ಅತ್ಯುತ್ತಮ ಸೌಂಡ್ ಮಿಕ್ಸಿಂಗ್‌ಗಾಗಿ ರೆಸೂಲ್ ಪೂಕುಟ್ಟಿ, ಅತ್ಯುತ್ತಮ ನಿರ್ದೇಶನಕ್ಕಾಗಿ ಡಾನಿ ಬೋಯ್ಲೆ ಹಾಗೂ ಅತ್ಯುತ್ತಮ ಸಂಕಲನಕ್ಕಾಗಿ ಕ್ರಿಸ್ ಡಿಕೆನ್ಸ್ ಪಡೆದಿದ್ದಾರೆ.

ಸ್ಲಮ್‌ಡಾಗ್ ಮಿಲಿಯನೇರ್ ಪಡೆದುಕೊಂಡ ಪ್ರಶಸ್ತಿಗಳು:

- ಅತ್ಯುತ್ತಮ ಚಿತ್ರ: ಸ್ಲಮ್‌ಡಾಗ್ ಮಿಲಿಯನೇರ್

- ಅತ್ಯುತ್ತಮ ಸಂಗೀತ: ಎ.ಆರ್. ರೆಹಮಾನ್

- ಅತ್ಯುತ್ತಮ ಮ್ಯೂಸಿಕ್ ಸಾಂಗ್: ಎ.ಆರ್. ರೆಹಮಾನ್ ಮತ್ತು ಗುಲ್ಜಾರ್

- ಅತ್ಯುತ್ತಮ ನಿರ್ದೇಶನ: ಡಾನಿ ಬೋಯ್ಲೆ

- ಅತ್ಯುತ್ತಮ ಸಂಕಲನಕಾರ: ಕ್ರಿಸ್ ಡೆಕೆನ್ಸ್

- ಅತ್ಯುತ್ತಮ ಸೌಂಡ್ ಮಿಕ್ಸಿಂಗ್: ರೆಸೂಲ್ ಪೂಕುಟ್ಟಿ

- ಅತ್ಯುತ್ತಮ ಛಾಯಾಗ್ರಹಣ: ಅಂತೋಣಿ ಡಾಡ್ ಮಾಂಟಲ್

- ಅತ್ಯುತ್ತಮ ಚಿತ್ರಕಥೆ ಹೊಂದಾಣಿಕೆ: ಸೈಮನ್ ಬ್ಯೂಫಾಯ್

ವೆಬ್ದುನಿಯಾವನ್ನು ಓದಿ