ಪಿಂಕಿಯ ಮುಖದಲ್ಲಿ 'ಸ್ಮೈಲ್' ಅರಳಿಸಿದ ಆಸ್ಕರ್

ಸೋಮವಾರ, 23 ಫೆಬ್ರವರಿ 2009 (15:27 IST)
PR
ಈ ಸೀಳ್ದುಟಿಯ ಹುಡುಗಿಯ ನಗುವಿಗೆ ಆಸ್ಕರ್! ಉತ್ತರ ಪ್ರದೇಶದ ಪುಟ್ಟ ಗ್ರಾಮ ರಾಂಪುರ ದಬೈ ಎಂಬಲ್ಲಿ ಪಟಾಕಿ, ಸಿಹಿ ಹಂಚುವ ಸಡಗರ. ಕಾರಣವಿಷ್ಟೆ, ಸೀಳ್ದುಟಿಯಿಂದಾಗಿ ಸಾಮಾಜಿಕವಾಗಿ ದೂರವಾಗಿದ್ದ ಹುಡುಗಿಯ ಕುರಿತಾದ 'ಸ್ಮೈಲ್ ಪಿಂಕಿ' ಎಂಬ ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಒಲಿದುಬಂದಿತ್ತು.

ಅಮೆರಿಕ ಚಿತ್ರ ನಿರ್ಮಾಪಕಿ ಮೇಗಾನ್ ಮೈಲಾನ್ ಅವರು ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಎಂಬ ಪ್ರಶಸ್ತಿಯನ್ನು ಅತ್ತ ಹಾಲಿವುಡ್‌ನಲ್ಲಿ ಪಡೆಯುತ್ತಿರುವಂತೆಯೇ, ಮಿರ್ಜಾಪುರ ಜಿಲ್ಲೆಯಲ್ಲಿರುವ ಈ ಪುಟ್ಟ ಗ್ರಾಮದ ಜನತೆಗೆ ಸಂತಸವೋ ಸಂತಸ. ಪಿಂಕಿ ಸೊಂಕರ್ ಎಂಬ ಈ ಪುಟ್ಟ ಬಾಲಕಿಯ ತಾಯಿ ನಿರ್ಮಲಾ ದೇವಿಗಂತೂ ಸಂಭ್ರಮ ಸಡಗರ. 81ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ತನ್ನ ಮಗಳ ಸೀಳ್ದುಟಿಯ ನಗುವನ್ನು ತೀರ್ಪುಗಾರರು ಗುರುತಿಸಿದರಲ್ಲ ಎಂಬ ಹೆಮ್ಮೆ.

ಸೋಮವಾರ ಪಿಂಕಿಯ ಕಟೌಟ್‌ಗಳನ್ನು ಹೊತ್ತ ನೂರಾರು ಹಳ್ಳಿಗರು ಈ ಪುಟ್ಟ ಬಾಲಕಿಯನ್ನು ಶ್ಲಾಘಿಸುತ್ತಾ ಘೋಷಣೆ ಕೂಗುತ್ತಿದ್ದರು.ಇದೇ ಸೀಳ್ದುಟಿಗಾಗಿ ಇದೇ ಬಾಲಕಿ ಒಂದೊಮ್ಮೆ ಸಮಾಜದ ಕೆಟ್ಟ ಮನಸ್ಥಿತಿಯಿಂದ ನೊಂದಿದ್ದಳು ಎಂಬುದು ವಿಪರ್ಯಾಸ. ಅವರೆಲ್ಲರೂ ಇದೀಗ ನಿರ್ಮಲಾ ದೇವಿಯ ಮನೆ ಬಾಗಿಲೆದುರು ನಿಂತು ಈ ಪುಟ್ಟ ಬಾಲಕಿಯನ್ನು ಅಭಿನಂದಿಸಲು ಸಾಲುಗಟ್ಟಿ ನಿಂತಿದ್ದರು!

ಬಡ ಬಾಲಕಿಯೊಬ್ಬಳು ಈ ಹಳ್ಳಿಯು ಅಂತಾರಾಷ್ಟ್ರೀಯ ಸ್ತರದಲ್ಲಿ ಗುರುತಿಸುವಂತೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಗ್ರಾಮದ ಮುಖ್ಯಸ್ಥ ಪ್ರದೀಪ್ ವಿಶ್ವಕರ್ಮ ಪ್ರತಿಕ್ರಿಯಿಸಿದ್ದಾರೆ.

ಪಿಂಕಿ ಕುರಿತಾದ ಸಾಕ್ಷ್ಯಚಿತ್ರವೊಂದು ಅದೇನೊ ದೊಡ್ಡ ಪ್ರಶಸ್ತಿ ಗಿಟ್ಟಿಸಿದೆ ಎಂಬುದನ್ನು ಟಿವಿಯಲ್ಲಿ ನೋಡಿ ನಮ್ಮ ಸಂತಸಕ್ಕೆ ಪಾರವೇ ಇಲ್ಲ ಎಂದೂ ಸೇರಿಸಿದ್ದಾರವರು.

ಪಿಂಕಿಯು ರಾಂಪುರ ದಬೈ ಗ್ರಾಮವನ್ನಷ್ಟೇ ಅಲ್ಲ, ಇಡೀ ದೇಶಕ್ಕೇ ಹೆಮ್ಮೆ ತಂದಿದ್ದಾಳೆ. ನಾವೆಲ್ಲ ಕಲ್ಪಿಸಲೂ ಸಾಧ್ಯವಾಗದ ಸಾಧನೆಯನ್ನು ಅವಳು ಮಾಡಿದ್ದಾಳೆ ಎಂದು ಶ್ಲಾಘಿಸಿದ್ದಾರೆ ಸ್ಥಳೀಯ ಶಾಸಕ ಅನಿಲ್ ಕುಮಾರ್ ಮೌರ್ಯ.

39 ನಿಮಿಷಗಳ ಈ ಕಿರು ಸಾಕ್ಷ್ಯಚಿತ್ರದಲ್ಲಿರುವುದು ಪಿಂಕಿಯ ಕಥಾನಕ. ಸೀಳ್ದುಟಿಯ ಕಾರಣದಿಂದಾಗಿ ಸಾಮಾಜಿಕ ನಿಂದನೆಗೆ ಈಡಾಗುವ ಆರರ ಹರೆಯದ ಪಿಂಕಿ, ನಂತರ ಸಮಾಜ ಸೇವಕರೊಬ್ಬರ ದೆಸೆಯಿಂದ ಸೀಳ್ದುಟಿ ಶಸ್ತ್ರಚಿಕಿತ್ಸೆ ಮಾಡಿಸಿದ ಬಳಿಕ ಸಾಮಾನ್ಯ ಹುಡುಗಿಯರಂತೆಯೇ ಬದುಕಲು ಮತ್ತು ತನ್ನ ಓರಗೆಯ ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗುವ ಕಥೆಯಿದು.

ಸಾಮಾಜಿಕ ಸಂಗತಿಗಳನ್ನು ಸಾಕ್ಷ್ಯಚಿತ್ರಗಳಲ್ಲಿ ತೋರಿಸಬಯಸುವ ಚಿತ್ರ ನಿರ್ಮಾಪಕರಿಗೆ, ಇಂಥ ಸುಖಾಂತ್ಯ ಕಾಣುವ ನೈಜ ಜೀವನದ ಕಥಾಂಶಗಳು ದೊರೆಯುವುದು ದುರ್ಲಭ. ಹೀಗಾಗಿ ಈ ಹುಡುಗಿ, ಆಕೆಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು, ಸುಂದರ ಆಸ್ಪತ್ರೆ ಮತ್ತು ಕೆಲವು ಸಮಾಜಸೇವಕರನ್ನೊಳಗೊಂಡ ಈ ಚಿತ್ರ ನಿರ್ಮಿಸಲು ನನಗೆ ಅತೀವ ಉತ್ಸಾಹವಿತ್ತು. ವೈದ್ಯರ ಶುಶ್ರೂಷೆಯ ವಿಧಾನ, ರೋಗಿಗಳನ್ನು ಅವರು ತಮ್ಮವರಂತೆಯೇ ಭಾವಿಸುವ ರೀತಿ ಎಲ್ಲವೂ ಆಕರ್ಷಣೀಯವೇ ಆಗಿತ್ತು. ಇದೇ ನನಗೆ ಚಿತ್ರ ನಿರ್ಮಾಣಕ್ಕೆ ಪ್ರೇರಣೆಯೂ ಆಯಿತು ಎನ್ನುತ್ತಾರೆ ನಿರ್ಮಾಪಕಿ ಮೈಲಾನ್.

ವೆಬ್ದುನಿಯಾವನ್ನು ಓದಿ