ಹೊಸ ವರ್ಷದ ಸಂಕಲ್ಪ ಈಡೇರಿಕೆಗೆ ಪಂಚ ಸೂತ್ರ

WD
ಹೊಸ ವರ್ಷ ಬಂದಿದೆ, ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ತೂಕ ಇಳಿಸಿಕೊಳ್ಳುವುದು, ಸಿಗರೇಟು ಸೇವನೆ ಬಿಡುವುದು, ಹಣ ಕಡಿಮೆ ಖರ್ಚು ಮಾಡುವುದು, ಕುಡಿತ ಬಿಟ್ಟುಬಿಡುವುದು ಇತ್ಯಾದಿ... ಆದರೆ ಈ ರೀತಿಯ 'ಪ್ರತಿಜ್ಞೆ'ಗಳು ವಿಫಲವಾದ ಮತ್ತು ಅದು ನಗೆಪಾಟಲಿಗೀಡಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಇದೂ ಒಂದು ರೀತಿಯ ಆಟವೇ. ಈ ಆಟದಲ್ಲಿ ಯಶಸ್ಸು ಸಾಧಿಸಲು ತಜ್ಞರು ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಅವು "ನ್ಯೂ ಇಯರ್ ರೆಸೊಲ್ಯುಶನ್" ಬಗ್ಗೆ ಗಂಭೀರವಾಗಿ ಚಿಂತಿಸುವ ಓದುಗರಿಗಾಗಿ.

ಒಂದಷ್ಟು ಯೋಜನೆ ಹಾಕಿಕೊಂಡರೆ ನೀವು ನೀಡಿದ ವಾಗ್ದಾನಗಳನ್ನು, ತೊಟ್ಟ ಪ್ರತಿಜ್ಞೆಯನ್ನು ಪೂರೈಸಿಕೊಳ್ಳಬಹುದು.

1. ನಿರ್ದಿಷ್ಟವಾದ ಗುರಿಯೊಂದನ್ನು ಇರಿಸಿಕೊಳ್ಳಿ.
ನೀವು ಏನು ಸಾಧಿಸಬೇಕೆಂದಿದ್ದೀರಿ ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಉದಾಹರಣೆಗೆ, ವ್ಯಾಯಾಮ ಮಾಡುತ್ತೇನೆ ಎಂಬುದು ಗುರಿ ಅಲ್ಲ. ಆದರೆ, ವಾರದಲ್ಲಿ ಮೂರು ದಿನ ತಲಾ 20 ನಿಮಿಷಗಳ ಕಾಲ ವಾಕಿಂಗ್ ಮಾಡುತ್ತೇನೆ ಎಂದಿದ್ದರೆ ಅದು ನಿರ್ದಿಷ್ಟವಾದ ಗುರಿ ಆಗುತ್ತದೆ. ಜೀವನದಲ್ಲಿ ದೊಡ್ಡದನ್ನೇನಾದರೂ ಸಾಧಿಸುತ್ತೇನೆ ಎಂದುಕೊಳ್ಳುವವರಿಗೆ ಅದರ ಪ್ರಮಾಣಕ್ಕೆ ಅನುಗುಣವಾಗಿ ಅಲ್ಪಕಾಲಿಕ ಇಲ್ಲವೇ ದೀರ್ಘಕಾಲಿಕ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ.

2. ಮುಂದಿನ ಹೆಜ್ಜೆ ಏನೆಂಬುದನ್ನು ಗಮನಿಸುತ್ತಾ ಇರಿ.
ಬದಲಾವಣೆ ಬಯಸಿ ನೀವೇನು ಮಾಡುತ್ತಿದ್ದೀರೋ, ಅದು ಎಷ್ಟರವರೆಗೆ ತಲುಪಿದೆ, ಏನಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರಿ. ಹೊಸ ಬದಲಾವಣೆಯಲ್ಲಿ ಎಷ್ಟರ ಮಟ್ಟಿಗೆ ಮುಂದುವರಿದಿದ್ದೀರಿ ಎಂಬುದರ ಬಗ್ಗೆ ಡೈರಿಯಲ್ಲೋ, ಕ್ಯಾಲೆಂಡರಿನಲ್ಲಿಯೋ ಅಥವಾ ಪ್ರತ್ಯೇಕ ಚೆಕ್ ಲಿಸ್ಟ್ ತಯಾರಿಸಿ ಅದರಲ್ಲೋ ಮಾರ್ಕ್ ಮಾಡುತ್ತಾ ಬನ್ನಿ. ಗುರಿ ಸಾಧಿಸುವಲ್ಲಿ ಸ್ವಯಂ ಹೊಣೆಗಾರಿಕೆ ಎಂಬುದು ತುಂಬಾ ಮುಖ್ಯವಾದದ್ದು.

3. ಸಾಧಿಸುವುದಕ್ಕಾಗಿ ಪೂರ್ಣ ತಯಾರಿ ನಡೆಸುತ್ತಿರಿ.
ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗುವ ಯಾವುದೇ ಅಂಶಗಳನ್ನು ನಿವಾರಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಉದಾಹರಣೆಗೆ, ವಾಕಿಂಗ್ ಮಾಡುವ ಗುರಿ ನಿಮ್ಮದಾಗಿದ್ದರೆ, ಹಿಂದಿನ ರಾತ್ರಿಯೇ ವಾಕಿಂಗ್‌ಗೆ ತೊಡುವ ಉಡುಗೆಯನ್ನು ಹೊರಗಿರಿಸಿಬಿಡಿ. ಸಿಹಿ ತಿಂಡಿ ಕಡಿಮೆ ಮಾಡುತ್ತೇನೆ ಎಂದುಕೊಂಡಿದ್ದರೆ, ಮನೆಯೊಳಗಿರುವ ಸಿಹಿ ತಿಂಡಿಯನ್ನು ಹೊರಗೆ ಸಾಗಿಸಿಬಿಡಿ ಇಲ್ಲವೇ, ನಿಮ್ಮ ಕಣ್ಣಿಗೆ ಕಾಣಿಸದೆಡೆಗೆ ಸರಿಸಿಬಿಡಿ.

4. ಪ್ರೋತ್ಸಾಹಿಸುವವರ ತಂಡವೊಂದನ್ನು ಕಟ್ಟಿಕೊಳ್ಳಿ.
ನಿಮ್ಮ ವರ್ತನೆ ಬದಲಾವಣೆಯ ನಿಟ್ಟಿನಲ್ಲಿ ನಿಮ್ಮನ್ನು ಬೆಂಬಲಿಸುವ ನಿಮ್ಮದೇ ಗೆಳೆಯರ, ಮನೆಯವರ ತಂಡವೊಂದನ್ನು ನೀವು ಕಟ್ಟಿಕೊಳ್ಳಿ. ಒಂದೊಂದು ಹಂತ ಮೇಲೇರುತ್ತಿದ್ದಾಗಲೆಲ್ಲಾ ಅವರು ನಿಮ್ಮನ್ನು ಹುರಿದುಂಬಿಸುತ್ತಿರಲಿ.

5. ಕಠಿಣ ಪರಿಶ್ರಮಕ್ಕೆ ಸೂಕ್ತವಾದ ಉಡುಗೊರೆ ಪಡೆಯುವುದು ಮಾನವಸಹಜ ಗುಣ. ಇಂಥ ಬಹುಮಾನಗಳು ನಮ್ಮ ಗುರಿ ಸಾಧನೆಗೆ ಸಾಕಷ್ಟು ಕೊಡುಗೆ ನೀಡುತ್ತವೆ ಎಂಬುದು ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ. ಹೀಗಾಗಿ, ಹೊಸ ವರ್ಷಕ್ಕೆ ನೀವೇನು ನಿರ್ಣಯ ಕೈಗೊಳ್ಳುತ್ತೀರಿ, ಅದರಲ್ಲಿ ಯಶಸ್ವಿಯಾದಲ್ಲಿ, ಭರ್ಜರಿ ಪಾರ್ಟಿ ಏರ್ಪಡಿಸಿಕೊಳ್ಳಿ, ಅಥವಾ ಗೆಳೆಯರೊಂದಿಗೆ ಸೇರಿ ಅದನ್ನು ಸಂಭ್ರಮದಿಂದಲೇ ಆಚರಿಸಲು ನಿರ್ಧರಿಸಿ.

ಈ ಸಲಹೆಗಳನ್ನು ನೀಡಿರುವುದು ಬೇರಾರೂ ಅಲ್ಲ, ಬರ್ಮಿಂಗ್‌ಹ್ಯಾಂನ ಅಲಬಾಮಾ ವಿಶ್ವವಿದ್ಯಾನಿಲಯಗದ ಅಸೋಸಿಯೇಟ್ ಪ್ರೊಫೆಸರ್ ಜೋಷ್ ಕ್ಲಪೋ. ಅವರು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದಾರೆ ಅಷ್ಟೇ ಅಲ್ಲ, ಹಲವು ಪುಸ್ತಕಗಳನ್ನೂ ಬರೆದು ಖ್ಯಾತರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ