2008ರಲ್ಲಿ ನಟಮಹಾಶಯರ ಸ್ಕೋರ್ ಕಾರ್ಡ್

ರಮ್ಯ ಶೆಟ್ಟಿ
ಈ ವರ್ಷ ಬಾಲಿವುಡ್ ಘಟಾನುಘಟಿ ನಾಯಕರ ಚಿತ್ರಗಳು ಮತ್ತು ಅವಕ್ಕೆ ದೊರೆತೆ ಪ್ರತಿಕ್ರಿಯೆಗಳು ಇಂತಿವೆ...
IFM
ಅಕ್ಷಯ್ ಕುಮಾರ್: 2007ರಲ್ಲಿ ನಾಲ್ಕು ಸಾಲು ಸಾಲು ಹಿಟ್ ಚಿತ್ರ ನೀಡಿದ್ದ ಅಕ್ಷಯ್ ಕುಮಾರ್‌ರ ತಶಾನ್ ಬಹುತಾರಾಗಣ ಚಿತ್ರವಾಗಿತ್ತು. ಇದು ಫ್ಲಾಫ್ ಎಂದು ಘೋಷಿತವಾಗಿದೆ. ಆದರೆ ವರ್ಷದ ಅತಿ ದೊಡ್ಡ ಹಿಟ್ ಚಿತ್ರ ಸಿಂಗ್ ಈಸ್ ಕಿಂಗ್ ಅಕ್ಷಯ್‌ಗೆ ಇನ್ನಿಲ್ಲದ ಖ್ಯಾತಿಯನ್ನು ತಂದುಕೊಟ್ಟಿದ್ದಲ್ಲದೆ, ಶಾರುಖ್ ಖಾನ್‌ರ ಬಾಲಿವುಡ್‌ ಕಿಂಗ್ ಪಟ್ಟವನ್ನು ಅಕ್ಷಯ್ ಅಕ್ರಮಿಸುತ್ತಿದ್ದಾರೆ ಎಂಬ ಮಾತುಗಳು, ಚರ್ಚೆಗಳು ಕೇಳಿಬಂದವು. 2008 ಬಾಲಿವುಡ್‌ ಬಾದ್‌ಶಾರ ದಶಕಗಳ ಕಿಂಗ್ ಪಟ್ಟಕ್ಕೆ ಕುತ್ತು ತರುವಷ್ಟು ಖ್ಯಾತಿಯನ್ನು ಅಕ್ಷಯ್ ಪಡೆದಿದ್ದಾರೆ. ಕತ್ರಿನಾರೊಂದಿಗಿನ ಅಕ್ಷಯ್‌ರ ಎಲ್ಲಾ ಚಿತ್ರಗಳು ಹಿಟ್ ಎನಿಸುವುದರೊಂದಿಗೆ ಪ್ರಸ್ತುತ ಅಕ್ಷಯ್-ಕತ್ರಿನಾ ಬಾಲಿವುಡ್‌ನ ಅತ್ಯಂತ ಯಶಸ್ವಿ ಜೋಡಿ.

IFM
ಶಾರುಖ್ ಖಾನ್: ಬಾಲಿವುಡ್ ಬಾದ್ ಶಾ ಈ ವರ್ಷ ಕ್ರೇಜಿ 4 ಮತ್ತು ಬೂತನಾತ್ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅದು ಬಿಟ್ಟರೆ ಈ ವರ್ಷ ಬಿಡುಗಡೆಯಾದ ಏಕೈಕ ಚಿತ್ರ ರಬ್ನೆ ಬನಾ ದಿ ಜೋಡಿ ಬಾಕ್ಸ್ ಅಫೀಸ್‌ನಲ್ಲಿ ಉತ್ತಮ ಓಟ ಕಾಣುವುದರೊಂದಿಗೆ ತಮ್ಮ ಜಾಗವನ್ನು ಆಕ್ರಮಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ ಎನ್ನುವುದನ್ನು ಶಾರುಖ್ ಸಾಬೀತು ಪಡಿಸಿದ್ದಾರೆ. ಇದಲ್ಲದೆ ಶಾರುಖ್, ಕತ್ರಿನಾ ಕೈಫ್ ಹುಟ್ಟುಹಬ್ಬದಂದು ಸಲ್ಮಾನ್ ಖಾನ್‌ರೊಂದಿಗಿನ ಜಗಳದಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದರು ಮತ್ತು ಬಚ್ಚನ್ ಕುಟುಂಬ ವಲ್ಡ್ ಟೂರ್ ಕೈಗೊಂಡ ಹಿಂದಯೇ, ತಮ್ಮ ಟೆಂಪ್ಟೇಶನ್ ರಿಲೋಡೆಡ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಶಾರುಖ್ ಮಾಲೀಕತ್ವದ ಐಪಿಎಸ್ ಕ್ರಿಕೆಟ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಯಶಸ್ವಿಯಾಗಲಿಲ್ಲ.

IFM
ಅಮೀರ್ ಖಾನ್: ಕಳೆದ ವರ್ಷ ವಿಮರ್ಶಕರಿಂದ ಪ್ರಶಂಸಿತ ಅತಿದೊಡ್ಡ ಹಿಟ್ ಚಿತ್ರ ತಾರೇ ಜಮೀನ್ ಪರ್ ನೀಡಿದ ಅಮೀರ್ ಖಾನ್, 2008ರಲ್ಲಿ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯ ಮೂಲಕ ಸೋದರಳಿಯ ಇಮ್ರಾನ್ ಖಾನ್‌ರನ್ನು ಜಾನೆ ತೂ ಯಾ ಜಾನೆ ನಾ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯಿಸಿದರು. ಚಿತ್ರ ಸೂಪರ್ ಹಿಟ್ ಎನಿಸಿದೆ. ವರ್ಷದ ಕೊನೆಯಲ್ಲಿ ತೆರೆಕಂಡ ಅಮೀರ್ ನಾಯಕತ್ವದ ಗಜನಿ ಚಿತ್ರ ಈಗಾಗಲೇ ಹಿಟ್ ಎನಿಸಿಕೊಳ್ಳುವತ್ತ ಸಾಗಿದೆ. ಚಿತ್ರದಲ್ಲಿನ ಅಮೀರ್‌ರ ಎಯ್ಟ್ ಪ್ಯಾಕ್ ಲುಕ್ ಮತ್ತು ಹೇರ್ ಸ್ಟೈಲ್ ಸಾಕಷ್ಟು ಕ್ರೇಜ್ ಸೃಷ್ಟಿಸಿದೆ. ಆಕ್ಷನ್ ಚಿತ್ರಗಳಲ್ಲೂ ತಾವು ಸೈ ಎನಿಸಿದ್ದಾರೆ ಅಮೀರ್.

IFM
ಸಲ್ಮಾನ್ ಖಾನ್: 2008 ಬಾಲಿವುಡ್ ಬಾಡ್ ಬಾಯ್‌ಗೆ ಉತ್ತಮವಾಗಿರಲಿಲ್ಲ. ಈ ವರ್ಷದ ಅವರ ಬಿಡುಗಡೆಗಳಾದ ಗಾಡ್ ತೂಸಿ ಗ್ರೇಟ್ ಹೊ, ಹೆಲೊ, ಹಿರೋಸ್ ಮತ್ತು ಯುವರಾಜ್ ಚಿತ್ರಗಳು ಬಾಲಿವುಡ್‌ನಲ್ಲಿ ತೋಪಾಗಿವೆ. ಸಲ್ಮಾನ್ ಮೊದಲ ಬಾರಿಗೆ ಪ್ರೇಯಸಿ ಕತ್ರಿನಾರೊಂದಿಗೆ ರೊಮ್ಯಾಂಟಿಕ್ ಪಾತ್ರವೊಂದರಲ್ಲಿ ಜೋಡಿಯಾಗಿ ಸಾಕಷ್ಟು ಹೈಪ್ ಸೃಷ್ಟಿಸಿದ್ದ ಯುವರಾಜ್ ಚಿತ್ರ ಸಹ ಬಾಕ್ಸ್ ಆಫೀಸಿನಲ್ಲಿ ನೀರಿಕ್ಷಿತ ಯಶಸ್ಸು ಕಾಣಲಿಲ್ಲ. ಜೊತೆಗೆ ಶಾರುಖ್‌ರೊಂದಿಗಿನ ಕದನದ ಕುರಿತು ಸಲ್ಮಾನ್ ಕಣ್ಣೀರಿಟ್ಟಿದ್ದೂ ಸುದ್ದಿಯಾಗಿತ್ತು. ಸಲ್ಮಾನ್ ಕುಟುಂಬ ಸಹಿತರಾಗಿ ಗಣೇಶೊತ್ಸವವನ್ನು ಆಚರಿಸಿದ್ದಕ್ಕೆ, ಅವರ ಮೇಲೆ ಫತ್ವಾ ಜಾರಿ ಮಾಡಲಾಗಿತ್ತು.

IFM
ಅಭಿಷೇಕ್ ಬಚ್ಚನ್: ಅಭಿಷೇಕ್‍‌ಗೆ 2008ರಲ್ಲಿ ಮಿಶ್ರಫಲ. ಅವರು ವರ್ಷದ ತುದಿಯಲ್ಲಿ ತಂದೆ ಅಮಿತಾಬ್ ಬಚ್ಚನ್ ಮತ್ತು ಪತ್ನಿ ಐಶ್ವರ್ಯಾರೊಂದಿಗೆ ನಟಿಸಿದ್ದ ಸರ್ಕಾರ್ ರಾಜ್ ಯಶಸ್ವಿಯೆನಿಸಿತ್ತು. ನಂತರದ ಇಸ್ತಾಂಬುಲ್ ಮತ್ತು ಅವರು ಬಹು ನೀರಿಕ್ಷೆ ಇರಿಸಿಕೊಂಡಿದ್ದ ದ್ರೋಣ ಚಿತ್ರಗಳು ಗೆಲ್ಲಲಿಲ್ಲ. ಮತ್ತೆ ವರ್ಷದ ಕೊನೆಗೆ ದೋಸ್ತಾನ ಚಿತ್ರ ಹಿಟ್ ಎನಿಸುವುದರೊಂದಿಗೆ ಅಭಿ ಮೊಗದಲ್ಲಿ ಗೆಲುವಿನ ನಗು ಮೂಡಿಸಿದೆ. ಜೊತೆಗೆ ಅಭಿ, ಬಚ್ಚನ್ ಕುಟುಂಬದ ಅನ್‌ಫಾರ್ಗೆಟೆಬಲ್ ವರ್ಲ್ಡ್ ಟೂರ್‌ನಲ್ಲಿ ಭಾಗವಹಿಸಿದ್ದರು.



IFM
ಸೈಫ್ ಅಲಿ ಖಾನ್ : ಈ ವರ್ಷ ಚೋಟೆ ನವಾಬ್ ಸೈಫ್ ಅಲಿ ಖಾನ್‌ರ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು ಕೇವಲ ಒಂದು ಚಿತ್ರ ಯಶಸ್ವಿಯೆನಿಸಿದೆ. ವರ್ಷದ ಮೊದಲ ಬಿಡುಗಡೆ ರೇಸ್ ವರ್ಷದ ಅತಿ ದೊಡ್ಡ ಹಿಟ್‌ಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ತಶಾನ್, ತೋಡಾ ಪ್ಯಾರ್ ತೋಡಾ ಮ್ಯಾಜಿಕ್ ಮತ್ತು ಅವರು ಧ್ವನಿ ನೀಡಿದ್ದ ರೋಡ್‌ಸೈಡ್ ರೋಮಿಯೊ ಚಿತ್ರಗಳು ಸೋತಿವೆ. ಈ ವರ್ಷ ಚೋಟೆ ನವಾಬ್ ಕರೀನಾ ಕಪೂರ್‌ರೊಂದಿಗೆ ಡೇಟಿಂಗ್ ಆರಂಭಿಸಿದ್ದು ತಮ್ಮ ಚಿತ್ರಗಳಿಗಿಂತ ಕರೀನಾ ಹೋದೆಲ್ಲೆಲ್ಲಾ ವಿಶ್ವಪರ್ಯಟನೆ ಮಾಡಿ, ಕೈಯಲ್ಲಿ ಬೆಬೊ ಟ್ಯಾಟು ಅಂಟಿಸಿಕೊಂಡು ನಲವತ್ತರಂಚಿನ ಹುಚ್ಚು ಪ್ರೀತಿ ಮೆರೆದು ಸುದ್ದಿಯಲ್ಲಿದ್ದುದೇ ಹೆಚ್ಚು.

IFM
ಅಮಿತಾಬ್ ಬಚ್ಚನ್: ಈ ವರ್ಷ ಬಿಡುಗಡೆ ಕಂಡ ಅಮಿತಾಬ್ ಬಚ್ಚನ್ ಚಿತ್ರಗಳು ಭೂತನಾಥ್, ಗಾಡ್ ತೂಸಿ ಗ್ರೇಟ್ ಹೊ, ದ ಲಾಸ್ಟ್ ಲಿಯರ್, ಸರಕಾರ್ ರಾಜ್. ಈ ವರ್ಷ ಅವರು ಭೂತವೂ ಆದರು ಮತ್ತು ದೇವರೂ ಆದರು ಆದರೆ ಎರಡೂ ಯಶಸ್ಸು ತರಲಿಲ್ಲ. ದ ಲಾಸ್ಟ್ ಲೀಯರ್ ಚಿತ್ರದಲ್ಲಿ ಅವರ ಅಭಿನಯದ ಬಗ್ಗೆ ಉತ್ತಮ ಮಾತುಗಳು ಎಲ್ಲೆಡೆಯಿಂದ ಕೇಳಿಬಂದವು. ಈ ವರ್ಷದ ಅವರ ಏಕೈಕ ಸಫಲ ಚಿತ್ರ ಸರಕಾರ್ ರಾಜ್. ಈ ನಡುವೆ ಬಿಗ್ ಬಿ ತಮ್ಮ ಹುಟ್ಟುಹಬ್ಬದ ದಿನವೇ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದರು.

IFM
ಜಾನ್ ಅಬ್ರಹಾಂ: ಈ ವರ್ಷ ಬಿಡುಗಡೆಯಾದ ಜಾನ್‌ರ ಏಕೈಕ ಚಿತ್ರ ದೋಸ್ತಾನ. ಕೆಲವು ಚಿತ್ರಗಳಲ್ಲಿ ನಾಯಕಿಯರನ್ನು ದೇಹಪ್ರದರ್ಶನಕ್ಕೆಂದೇ ಬಳಸಿಕೊಳ್ಳುವುದುಂಟು ಆದರೆ ಈ ಚಿತ್ರದಲ್ಲಿ ನಾಯಕಿ ಪ್ರಿಯಾಂಕ ಜೊತೆ ಅಂಗಪ್ರದರ್ಶನದ ಸ್ಪರ್ಧೆಗೆ ನಿಂತ ಜಾನ್, ಗೆದ್ದಿದ್ದಾರೆ ಎಂದೇ ಹೇಳಬಹುದು. ಚಿತ್ರ ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಹಿಟ್ ಎನಿಸಿದೆ.

IFM
ಅಜಯ್ ದೇವಗನ್: ಈ ವರ್ಷ ಅಜಯ್ ದೇವಗನ್‌ ನಟಿಸಿದ ಆರು ಚಿತ್ರಗಳು ಬಿಡುಗಡೆಯಾಗಿದ್ದರೂ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಗೋಲ್‍‌ಮಾಲ್ ರಿಟರ್ನ್ಸ ಚಿತ್ರ ಮಾತ್ರವೇ ಯಶಸ್ವಿಯಾಗಿದೆ. ಉಳಿದಂತೆ ಹಲ್ಲಾ ಬೋಲ್, ಸಂಡೇ, ಮೆಹಬೂಬಾ ಮತ್ತು ನಾಮ್ ಚಿತ್ರಗಳು ಸೋತಿವೆ. ಪತ್ನಿ ಕಾಜೋಲ್‌ರೊಂದಿಗಿನ ಅಜಯ್‌ರ ಪ್ರಥಮ ನಿರ್ದೇಶನದ ಚಿತ್ರ ಯು ಮಿ ಔರ್ ಹಮ್ ಬಾಕ್ಸ್ ಅಫೀಸನಲ್ಲಿ ತಕ್ಕಮಟ್ಟಿನ ವ್ಯವಹಾರ ನಡೆಸಿದೆ.

IFM
ರಣ್‌ಬೀರ್ ಕಪೂರ್: ಕಳೆದ ವರ್ಷ ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ರಣ್‌ಬೀರ್ ಕಪೂರ್‌ರೆಡೆಗೆ ಚೊಚ್ಚಲ ಚಿತ್ರ ಬಾಕ್ಸ್ ಅಫೀಸನಲ್ಲಿ ಸೋತರು, ಅವರ ಅಭಿನಯಕ್ಕೆ 2008ರಲ್ಲಿ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂತು. ಈ ವರ್ಷ ರಣ್‌ಬೀರ್‌ರ ಎರಡನೇ ಚಿತ್ರ ಬಚನಾ ಎ ಹಸೀನೊ ಚಿತ್ರ ಬಾಕ್ಸ್ ಅಫೀಸಿನಲ್ಲಿ ಗೆದ್ದಿದೆ. ಜೊತೆಗೆ ಕ್ರಿಕೆಟಿಗರನ್ನೆಲ್ಲಾ 'ಡ್ರಾಪ್' ಮಾಡಿರುವ ದೀಪಿಕಾ ಪಡುಕೋಣೆ ರಣ್‌ಬೀರ್ ತೆಕ್ಕೆ ಸೇರಿದ್ದಾರೆ.

IFM
ಇಮ್ರಾನ್ ಖಾನ್: ಸೂಪರ್ ಸ್ಟಾರ್ ಅಮೀರ್ ಖಾನ್ ಸೋದರಳಿಯ ಇಮ್ರಾನ್ ಖಾನ್ ಜಾನೆ ತೂ ಯಾ ಜಾನೆ ನಾ ಎಂಬ ಅತ್ಯಂತ ಯಶಸ್ವಿ ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಜೆನಿಲಿಯಾ ಡಿಸೋಜಾ ನಾಯಕಿಯಾಗಿದ್ದ ಈ ಚಿತ್ರ ದೇಶವಿದೇಶಗಳಲ್ಲಿ ಯಶಸ್ವಿಯಾಗಿತ್ತು. ನಂತರ ಚಿತ್ರ ಕಿಡ್ನಾಪ್‌ನಲ್ಲಿ ಇಮ್ರಾನ್ ವಿಲನ್ ಪಾತ್ರದಲ್ಲಿ ನಟಿಸಿದರು. ಕಿಡ್ನಾಪ್ ಬಾಕ್ಸ್ ಅಫೀಸ್‌‌ನಲ್ಲಿ ಸೋಲೊಪ್ಪಿತು. ಚಿತ್ರ ವಿಮರ್ಶಕ ತರಾನ್ ಆದರ್ಶ್ ಕಿಡ್ನಾಪ್ 2008ರ ಅತಿ ಕೆಟ್ಟ ಚಿತ್ರಗಳೊಂದು ಎಂದು ವಿಮರ್ಶಿಸಿದರು ಆದರೆ ಇಮ್ರಾನ್ ನಟನೆಯನ್ನು ಪ್ರಶಂಸಿದರು.