ಆಲ್‌ರೌಂಡರ್ ಯೂಸುಫ್ ಪಠಾಣ್ (100ರನ್, 37 ಎಸೆತ) ಬಾರಿಸಿದ ಐಪಿಎಲ್‌ನ ಅತೀ ವೇಗದ ಶತಕದ ಹೊರತಾಗಿಯೂ ರಾಜಸ್ತಾನ ರಾಯಲ್ಸ್ ತಂಡವು ಇಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ತನ್ನ ಮೊದಲ ಪಂದ್ಯವನ್ನು ನಾಲ್ಕು ರನ್ನುಗಳಿಂದ ರೋಚಕವಾಗಿ ಕಳೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ 212 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಈ ಬೃಹತ್ ಮೊತ್ತವನ್ನು ದಿಟ್ಟವಾಗಿ ಬೆನ್ನತ್ತಿದ್ದ ಶೇನ್ ವಾರ್ನ್ ಪಡೆ ಅಂತಿಮ ಹಂತದಲ್ಲಿ ಎಡವಟ್ಟು ನಡೆಸಿ ನಿಗದಿತ ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ಇಂಡಿಯನ್ಸ್ ರೋಚಕ ನಾಲ್ಕು ರನ್ನುಗಳ ಗೆಲುವು ದಾಖಲಿಸಿತು.
ಒಂದು ಹಂತದಲ್ಲಿ ಹತ್ತು ಓವರುಗಳಲ್ಲಿ 69 ರನ್ನುಗಳಿಗೆ ಪ್ರಮುಖ ನಾಲ್ಕು ವಿಕೆಟುಗಳನ್ನು ಕಳೆದುಕೊಂಡಿದ್ದ ರಾಜಸ್ತಾನ ತಂಡ ಸಂಕಷ್ಟದಲ್ಲಿತ್ತು. ಆರಂಭಿಕರಾದ ಗ್ರೇಮ್ ಸ್ಮಿತ್ (26), ಸ್ವಪ್ನಿಲ್ ಅಸ್ನೋದ್ಕರ್ (0), ನಮನ್ ಓಜಾ (12) ಮತ್ತು ಅಭಿಷೇಕ್ ಜುನ್‌ಜುನ್‌ವಾಲಾ (14) ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದರು.
ಆದರೆ ಈ ಹಂತದಲ್ಲಿ ತನ್ನ ಅಬ್ಬರದ ರೂಪವನ್ನು ಮತ್ತೊಮ್ಮೆ ಪ್ರದರ್ಶಿಸಿದ ಯೂಸುಫ್ ಪಠಾಣ್ ಬಿರುಸಿನ ಗತಿಯಲ್ಲಿ ರನ್ ಪೇರಿಸತೊಡಗಿದರು. ಮೈದಾನದ ಎಲ್ಲಾ ದಿಕ್ಕುಗಳಿಗೂ ಬೌಂಡರಿ ಸಿಕ್ಸರುಗಳ ಸುರಿಮಳೆಗೈದ ಪಠಾಣ್ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಕೇವಲ 37 ಎಸೆತದಲ್ಲಿ ಶತಕ ಪೂರ್ಣಗೊಳಿಸಿದ ಪಠಾಣ್ ಐಪಿಎಲ್ ಇತಿಹಾಸದಲ್ಲೇ ಅತೀ ವೇಗದ ಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು.
ಪಠಾಣ್ ಅಬ್ಬರದಲ್ಲಿ ಒಂಬತ್ತು ಬೌಂಡರಿ ಹಾಗೂ ಎಂಟು ಭರ್ಜರಿ ಸಿಕ್ಸರುಗಳು ಸೇರಿಕೊಂಡಿದ್ದವು. ಆದರೆ ದುರದೃಷ್ಟವಶಾತ್ ರನೌಟ್ ಬಲೆಗೆ ಸಿಲುಕಿದ ಪಠಾಣ್ ಪೆವಿಲಿಯನ್‌ಗೆ ಸೇರಿಕೊಳ್ಳುತ್ತಿದ್ದಂತೆಯೇ ಮುಂಬೈ ಪಂದ್ಯದಲ್ಲಿ ಹಿಡಿತ ಸಾಧಿಸಿತು.
ಪಠಾಣ್‌ಗೆ ಉತ್ತಮ ಬೆಂಬಲ ನೀಡಿದ ಪರಾಸ್ ಡೊಗ್ರಾ 41 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ದಾಟಿಸಲಾಗಲಿಲ್ಲ.
ಅಂತಿಮ ಓವರ್‌ನಲ್ಲಿ ರಾಜಸ್ತಾನ ಗೆಲುವಿಗೆ 12 ರನ್ನುಗಳ ಅಗತ್ಯವಿತ್ತು. ಆದರೆ ಪ್ರಭಾವಿ ದಾಳಿ ಸಂಘಟಿಸಿದ ಲಸಿತ್ ಮಾಲಿಂಗ ಕೇವಲ ಎಂಟು ರನ್ನುಗಳನಷ್ಟೇ ನೀಡುವ ಮೂಲಕ ಮುಂಬೈ ಗೆಲುವನ್ನು ಖಚಿತಪಡಿಸಿದರು. ವೇಗಿ ಜಹೀರ್ ಖಾನ್ ಮತ್ತು ಮಾಲಿಂಗ ಸಂಘಟಿಸಿದ ಉತ್ತಮ ದಾಳಿಯಿಂದಾಗಿ ಮುಂಬೈ ಮುನ್ನಡೆ ಅನುಭವಿಸಿತು.
ಮುಂಬೈ ಇನ್ನಿಂಗ್ಸ್... ಇದಕ್ಕೂ ಮೊದಲು ಅಂಬಾಟಿ ರಾಯುಡು ಹಾಗೂ ಸೌರಬ್ ತಿವಾರಿ ಬಾರಿಸಿದ ಬಿರುಸಿನ ಅರ್ಧಶತಕದ ನೆರವನಿಂದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 212 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು.
ಟಾಸ್ ಗೆದ್ದ ಮುಂಬೈನಾಯಕ ಸಚಿನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ನಾಯಕನ ನಿರೀಕ್ಷೆಯನ್ನು ಹುಸಿ ಮಾಡದ ಸನತ್ ಜಯಸೂರ್ಯ ತಂಡಕ್ಕೆ ಉತ್ತಮ ಆರಂಭವನ್ನೇ ಒದಗಿಸಿದ್ದರು. ಜಯಸೂರ್ಯ-ಸಚಿನ್ ಜೋಡಿ ಮೊದಲ ವಿಕೆಟ್‌ಗೆ ಕೇವಲ 3.3 ಓವರುಗಳಲ್ಲಿ 38 ರನ್ ಒಟ್ಟು ಸೇರಿಸಿದ್ದರು.
14 ಎಸೆತಗಳನ್ನು ಎದುರಿಸಿದ ಸನತ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 23 ರನ್ ಗಳಿಸಿದರು. ಅದೇ ರೀತಿ ಲಿಟ್ಲ್ ಮಾಸ್ಟರ್ 11 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 17 ರನ್ ಗಳಿಸಿದರು. ನಂತರ ಬಂದ ಆದಿತ್ಯ ತಾರೆ (23) ರನ್ ಗತಿ ಏರಿಸುವಲ್ಲಿ ನೆರವಾದರು.
ಆದರೆ ಸಚಿನ್ ಬೇಗನೇ ಔಟ್ ಆಗುವ ಮೂಲಕ ಲೆಗ್ ಸ್ಪಿನ್ ದಿಗ್ಗಜ ರಾಜಸ್ತಾನ ನಾಯಕ ಶೇನ್ ವಾರ್ನ್ ದಾಳಿಯನ್ನು ಎದುರಿಸುವ ಅವಕಾಶದಿಂದ ವಂಚಿತರಾದರು.
ಈ ಹಂತದಲ್ಲಿ ಜೊತೆಗೂಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಹಾಗೂ ಸೌರಭ್ ತಿವಾರಿ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.
ತಲಾ 33 ಎಸೆತಗಳನ್ನು ಎದುರಿಸಿದ ತಿವಾರಿ ಹಾಗೂ ರಾಯುಡು ಕ್ರಮವಾಗಿ 53 ಹಾಗೂ 55 ರನ್ ಗಳಿಸಿದರು. ತಿವಾರಿ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರುಗಳು ಸೇರಿದ್ದರೆ ರಾಯುಡುರವರು ಆರು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರುಗಳನ್ನು ಸಿಡಿಸಿದ್ದರು.
ಒಟ್ಟಾರೆಯಾಗಿ ರಾಜಸ್ತಾನ ಬೌಲರುಗಳನ್ನು ಚಚ್ಚಿದ ಮುಂಬೈ ಬ್ಯಾಟ್ಸ್‌ಮನ್‌ಗಳು ನಿಗದಿತ 20 ಓವರುಗಳಲ್ಲಿ 212 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ದಾಖಲಾದ ಸರ್ವಾಧಿಕ ಮೊತ್ತವಾಗಿದೆ.
ರಾಜಸ್ತಾನ ಪರ ಮಸ್ಕರೇನಾಸ್ ಮತ್ತು ಎ. ಉನಿಯಾಲ್ ತಲಾ ಎರಡು ವಿಕೆಟ್ ಪಡೆದರು. ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾದ ಶಾನ್ ಟೇಟ್ ನಾಲ್ಕು ಓವರುಗಳಲ್ಲಿ 46 ರನ್ ನೀಡುವ ಮೂಲಕ ದುಬಾರಿಯಾದರು.