ಪಾಕಿಸ್ತಾನವನ್ನು ಭಾರತ ಯಾಕಾಗಿ ಭಯಪಡಬೇಕು?

ಮಂಗಳವಾರ, 29 ಮಾರ್ಚ್ 2011 (09:09 IST)
ಬುಧವಾರ ನಡೆಯಲಿರುವ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಸವಾಲನ್ನು ಭಾರತ ಎದುರಿಸಲಿದೆ. ಆದರೆ ಎದುರಾಳಿ ತಂಡದ ಬಗ್ಗೆ ಟೀಮ್ ಇಂಡಿಯಾ ಅತೀವ ಎಚ್ಚರಿಕೆ ವಹಿಸಬೇಕಾಗಿರುವುದು ಅತಿ ಪ್ರಾಮುಖ್ಯವೆನಿಸಿದೆ.

ಎಲ್ಲ ಆಟಗಾರರು ತಮ್ಮ ಜವಾಬ್ದಾರಿ ಅರಿತು ಆಡಬೇಕಾಗಿದೆ. ಅಲ್ಲದೆ ಎದುರಾಳಿ ತಂಡದ ಬಲಾಬಲ ಬಗ್ಗೆಯೂ ಸ್ಪಷ್ಟತೆ ಹೊಂದಿರಬೇಕು. ಈ ಬಗ್ಗೆ ಗಮನಿಸಿದಾಗ ನಾಯಕ ಶಾಹಿದ್ ಆಫ್ರಿದಿ ಅವರೇ ಭಾರತಕ್ಕೆ ಪ್ರಮುಖ ಸವಾಲಾಗಬಲ್ಲರು.

1. ಶಾಹಿದ್ ಆಫ್ರಿದಿ
ಇನ್ ಫಾರ್ಮ್ ಆಟಗಾರ ಶಾಹಿದ್ ಭಾರತದ ವಿರುದ್ಧ ಪ್ರತಿ ಬಾರಿಯೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಿರುತ್ತಾರೆ. ಅದು ಬ್ಯಾಟಿಂಗ್ ಆಗಿರಬಹುದು ಅಥವಾ ಬೌಲಿಂಗ್. ಟೂರ್ನಿಯಲ್ಲಿ ಇದೀಗಲೇ ವಿಕೆಟ್ ಬೇಟೆಯಲ್ಲಿ ಮುಂದಿರುವ ಆಫ್ರಿದಿ (21) ಉಪಖಂಡದ ಪಿಚ್‌ನಲ್ಲಿ ಅಪಾಯಕಾರಿಯಾಗಬಲ್ಲರು. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಈ ಪಾಕ್ ನಾಯಕ ಯಾವುದೇ ಹಂತದಲ್ಲಿಯೂ ಪಂದ್ಯಕ್ಕೆ ತಿರುವು ನೀಡಬಲ್ಲರು.

2. ಯೂನಿಸ್-ಮಿಸ್ಬಾ ಜುಗಲ್‌ಬಂಧಿ
ಅನುಭವಿ ಆಟಗಾರರಾಗಿರುವ ಯೂನಿಸ್ ಖಾನ್ ಮತ್ತು ಮಿಸ್ಬಾ ಉಲ್ ಹಕ್‌ರನ್ನು ಆದಷ್ಟು ಬೇಗ ಕಟ್ಟಿಹಾಕಬೇಕಾಗಿರುವುದು ಮಹಿ ಪಾಲಿಗೆ ಅಗತ್ಯವೆನಿಸಲಿದೆ. ಇವರಿಬ್ಬರು ನೆಲೆಯೂರಿ ನಿಂತರೆ ಎಂತಹುದೇ ಬೌಲಿಂಗ್ ಪಡೆಯನ್ನು ನಿರಾಂತಕವಾಗಿ ಎದುರಿಸಬಲ್ಲರು. 2007ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಮಿಸ್ಪಾ ಉಲ್ ಹಕ್ ಪ್ರದರ್ಶನವನ್ನು ಸದ್ಯ ಯಾರೂ ಮರೆತಿರಲಿಕ್ಕಿಲ್ಲ.

3. ಅಕ್ಮಲ್ ಬ್ರದರ್ಸ
ಪಾಕ್ ಪಾಲಿಗೆ ಅಮೋಘ ಫಾರ್ಮ್ ಕಂಡುಕೊಂಡಿರುವ ಅಕ್ಮಲ್ ಬ್ರದರ್ಸ್ ಬಗ್ಗೆಯೂ ಜಾಗರೂಕರಾಗಬೇಕಾಗಿದೆ. ಭಾರತದಲ್ಲಿನ ಅನುಭವವೂ ಕಮ್ರಾನ್‌ಗೆ ಹೆಚ್ಚಿನ ನೆರವನ್ನು ನೀಡಲಿದೆ. ಹಾಗೆಯೇ ಮ್ಯಾಚ್ ವಿನ್ನರ್ ಆಗಿರುವ ಉಮರ್ ಅಕ್ಮಲ್ ಪ್ರಸ್ತುತ ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ.

5. ಸ್ಪಿನ್ ಆತಂ
ಇವೆಲ್ಲರ ಹೊರತಾಗಿಯೂ ಪಾಕ್ ಅತ್ಯುತ್ತಮ ಸ್ಪಿನ್ ದಾಳಿಯನ್ನು ಹೊಂದಿದೆ. ನಾಯಕ ಆಫ್ರಿದಿ ಅವರಂತೆ ಮೊಹಮ್ಮದ್ ಹಫೀಜ್ ಮತ್ತು ಸಯೀದ್ ಅಜ್ಮಲ್ ಸರಣಿಯುದ್ಧಕ್ಕೂ ಅಮೋಘ ಲಯ ಕಾಪಾಡಿಕೊಂಡು ಬಂದಿರುವುದೇ ತಂಡದ ಯಶಸ್ಸಿನ ಹಿಂದಿರುವ ಮತ್ತೊಂದು ಗುಟ್ಟು.

5. ಅಖ್ತರ್-ಗುಲ್ ವೇಗಿ ಪಡ
ಕೊನೆಯ ವಿಶ್ವಕಪ್ ಆಡುತ್ತಿರುವ 'ರಾವಿಲ್ಪಿಂಡಿ ಎಕ್ಸ್‌ಪ್ರೆಸ್' ಖ್ಯಾತಿಯ ಶೋಯಿಬ್ ಅಖ್ತರ್ ಈ ಪ್ರತಿಷ್ಠಿತ ಕೂಟವನ್ನು ಅತ್ಯುನ್ನತ ಮಟ್ಟದಲ್ಲಿಯೇ ಮುಗಿಸುವ ಇರಾದೆಯಲ್ಲಿದ್ದಾರೆ. ಇದೀಗಲೂ ಗಂಟೆಗೆ 140ಕ್ಕೊ ಹೆಚ್ಚು ಗತಿಯಲ್ಲಿ ಚೆಂಡು ಎಸೆಯುವ ಸಾಮರ್ಥ್ಯ ಹೊಂದಿರುವ ಅಖ್ತರ್ ವಿಕೆಟ್ ಟೇಕಿಂಗ್ ಬೌಲರ್ ಎನಿಸಿಕೊಂಡಿದ್ದಾರೆ. ಅದೇ ರೀತಿ ಹಳೆ ಚೆಂಡನ್ನು ರಿಸರ್ವ್ ಸ್ವಿಂಗ್ ಮಾಡಬಲ್ಲ ಉಮರ್ ಗುಲ್ ಇದೀಗಲೇ 14.50ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ.

6. ಅಬ್ದುಲ್ ರಜಾಕ
ಪಾಕಿಸ್ತಾನಕ್ಕೆ ಆಲ್‌ರೌಂಡರ್ ಕೊರತೆಯನ್ನು ಸಮರ್ಥವಾಗಿ ನೀಗಿಸಿರುವ ಅಬ್ದುಲ್ ರಜಾಕ್ ಯಾವುದೇ ಒತ್ತಡದ ಪರಿಸ್ಥಿತಿಯಲ್ಲಿಯೂ ತಂಡವನ್ನು ಮೇಲೆತ್ತುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಸೆಮಿ ಕದನ ಗೆಲ್ಲುವ ನಿಟ್ಟಿನಲ್ಲಿ ಪ್ರತಿಯೊಬ್ಬ ಆಟಗಾರ ಬಲಾಬಲದ ಬಗ್ಗೆಯೂ ಅತೀವ ಎಚ್ಚರಿಕೆ ವಹಿಸುವ ಮೂಲಕ ತಂತ್ರ ರೂಪಿಸುವುದು ಅಗತ್ಯವಾಗಿದೆ.

ವೆಬ್ದುನಿಯಾವನ್ನು ಓದಿ