ಸೂಪರ್ ಎಂಟು ತಲುಪದಿದ್ದರೂ ಪ್ರಮಾದವಲ್ಲ: ಯೂನಿಸ್

ಮಂಗಳವಾರ, 9 ಜೂನ್ 2009 (10:05 IST)
ಟ್ವೆಂಟಿ-20 ಆಡುತ್ತಿರುವುದು ಕೇವಲ ಮೋಜಿಗಾಗಿ ಮತ್ತು ಪ್ರಸಕ್ತ ನಡೆಯುತ್ತಿರುವ ವಿಶ್ವಕಪ್‌ನ ಸೂಪರ್ ಎಂಟಕ್ಕೆ ಪ್ರವೇಶಿಸಲು ತನ್ನ ತಂಡ ಸಾಧ್ಯವಾಗದಿದ್ದರೂ ಅದೊಂದು ಪ್ರಮಾದವೆನಿಸದು ಎಂದು ಪಾಕಿಸ್ತಾನದ ನಾಯಕ ಯೂನಿಸ್ ಖಾನ್ ಹೇಳಿಕೆ ನೀಡಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾನುವಾರ ರಾತ್ರಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಸೋಲುಂಡ ನಂತರ ಯೂನಿಸ್ ಖಾನ್ ಮಾತನಾಡುತ್ತಾ, ತನ್ನ ತಂಡ ಸೂಪರ್ ಎಂಟಕ್ಕೆ ಪ್ರವೇಶಿಸಲು ಅಸಾಧ್ಯವಾದರೂ ಅದೊಂದು ದುರಂತವೆನಿಸದು ಎಂಬರ್ಥದಲ್ಲಿ ಮಾತನಾಡಿದ್ದರು.

"ಸೂಪರ್ ಎಂಟಕ್ಕೆ ಪ್ರವೇಶಿಸಲು ಸಾಧ್ಯವಾಗದಿದ್ದರೆ ಅದೊಂದು ದುಃಖಕರ ವಿಚಾರ. ಆದರೆ ನಾನು ಟ್ವೆಂಟಿ-20 ಕ್ರಿಕೆಟ್‌ಗೆ ಹೆಚ್ಚಿನ ಮಹತ್ವವನ್ನು ನೀಡಿಲ್ಲ, ಅದೊಂದು ರೀತಿಯಲ್ಲಿ ಮೋಜಿನ ಆಟ" ಎಂದು ಯೂನಿಸ್ ತಿಳಿಸಿದ್ದಾರೆ.

ಯೂನಿಸ್‌ರ ಬಿಚ್ಚು ಮಾತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇದೀಗ ಅಸಮಾಧಾನ ತಂದಿದೆ. ಹೇಳಿಕೆ ಬಗ್ಗೆ ಖಚಿತತೆ ಮತ್ತು ವಿವರಣೆ ನೀಡುವಂತೆ ಆಡಳಿತ ಮಂಡಳಿ ಯೂನಿಸ್‌ಗೆ ಇದೀಗ ಸೂಚನೆ ನೀಡಿದೆ.

"ಅವರ ಹೇಳಿಕೆ ಮಾಜಿ ಟೆಸ್ಟ್ ಆಟಗಾರರು ಸೇರಿದಂತೆ ಯಾರೊಬ್ಬರಿಗೂ ಉಚಿತವೆನಿಸಿಲ್ಲ. ಜನರ ಭಾವನೆಗಳಿಗೆ ಈ ಹೇಳಿಕೆಯಿಂದ ಧಕ್ಕೆಯುಂಟಾಗಿದೆ. ವಿಶ್ವಕಪ್‌ನಲ್ಲಿ ತಂಡದ ಪ್ರದರ್ಶನವನ್ನು ಗಮನಿಸುವವರೂ ಇದರಿಂದ ಉದ್ವೇಗಕ್ಕೊಳಗಾಗಿದ್ದಾರೆ" ಎಂದು ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿದೆ.

ಹೆಸರು ಹೇಳಲಿಚ್ಛಿಸದ ಮಾಜಿ ಟೆಸ್ಟ್ ಆಟಗಾರರೊಬ್ಬರು ಯೂನಿಸ್‌ರ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾ, "ಟ್ವೆಂಟಿ-20 ಕ್ರಿಕೆಟ್ ಆಡಲು ಇಷ್ಟವಿಲ್ಲದಿದ್ದರೆ ಮತ್ಯಾಕೆ ಇಂಗ್ಲೆಂಡ್‌ಗೆ ಅವರು ಎಲ್ಲರಿಗಿಂತ ಮೊದಲು ತೆರಳಬೇಕಿತ್ತು?" ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ