ಧೋನಿ ಮತ್ತು ಮಾಧ್ಯಮಗಳ ನಡುವಿನ ಶೀತಲ ಸಮರವಿದು..

ಬುಧವಾರ, 10 ಜೂನ್ 2009 (13:21 IST)
ಟೀಮ್ ಇಂಡಿಯಾ ಉಪಕಪ್ತಾನ ವೀರೇಂದ್ರ ಸೆಹ್ವಾಗ್ ಗಾಯಾಳುವಾಗಿರುವ ಕಾರಣ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡುತ್ತಿಲ್ಲ ಎಂಬ ಮಾಹಿತಿ ಮೊದಲೇ ಸೋರಿಕೆಯಾಗಿದ್ದ ಹಿನ್ನಲೆಯಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಕರೆದಿದ್ದ ಪತ್ರಿಕಾಗೋಷ್ಠಿ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿ ನಡೆದದ್ದು ಮಾಧ್ಯಮ ಮತ್ತು ಧೋನಿ ನಡುವಿನ ಶೀತಲ ಸಮರದ ಮುಂದುವರಿದ ಭಾಗವೆಂದೇ ಹೇಳಬಹುದು. ಬಹುತೇಕ ಪ್ರಶ್ನೆಗಳಿಗೆ ಧೋನಿ 'ಹೌದು' 'ಅಲ್ಲ' ಎಂಬ ಪದಗಳನ್ನಷ್ಟೇ ಉಪಯೋಗಿಸಿ ಸುಮ್ಮನಾಗುತ್ತಿದ್ದುದ್ದು ಅವರ ಭ್ರಮನಿರಸನವನ್ನು ಪ್ರಚುರಪಡಿಸುತ್ತಿತ್ತು.

ಪ್ರಶ್ನೆಗಳ ಹೊತ್ತಿಗೆಯನ್ನೇ ತಂದಿದ್ದ ಪತ್ರಕರ್ತರು ಧೋನಿಯತ್ತ ಒಂದರ ಮೇಲೊಂದನ್ನು ಎಸೆಯಲಾರಂಭಿಸಿದ್ದರು. ಸೆಹ್ವಾಗ್ ಗಾಯಗೊಂಡಿದ್ದಾಗ್ಯೂ ತಂಡದಿಂದ ಆಗಿಂದಾಗ್ಗೆ ಯಾಕೆ ಮಾಹಿತಿಗಳನ್ನು ನೀಡಲಾಗಿಲ್ಲ ಎಂದಾಗ ಧೋನಿ, "ದೈಹಿಕ ಕ್ಷಮತೆಗೆ ಸಂಬಂಧಿಸಿದಂತೆ ನೀವು ಬಿಸಿಸಿಐಯಿಂದ ಮಾಹಿತಿಯನ್ನು ಪಡೆದುಕೊಳ್ಳಿ" ಎಂದು ನೇರಾನೇರ ಉತ್ತರ ನೀಡಿ ಸುಮ್ಮನಾದರು.

ಈ ಮಾಹಿತಿಯನ್ನು ನಾಯಕ ಯಾಕೆ ನೀಡಬಾರದು ಎಂದಾಗ ಕೆಂಗಣ್ಣು ಬೀರಿದ ಧೋನಿ, "ಈ ಬಗ್ಗೆ ನಾನು ಯಾವ ಪ್ರತಿಕ್ರಿಯೆಯನ್ನೂ ನೀಡಲಾರೆ" ಎಂದರು.

ಸೆಹ್ವಾಗ್‌ರವರು ಗಾಯಗೊಂಡದ್ದು ನಿಮಗೆ ತಿಳಿದಿತ್ತೇ ಎಂದು ತೂರಿಕೊಂಡು ಬಂದ ಪ್ರಶ್ನೆಯೊಂದಕ್ಕೆ ಅಷ್ಟೇ ವೇಗದಲ್ಲಿ ಅವರು ಹೇಳಿದ್ದು, "ಹೌದು, ನನಗೆ ಗೊತ್ತಿತ್ತು".

ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡಿದ್ದ ಧೋನಿ ಇತ್ತೀಚೆಗೆ ತಾಳ್ಮೆ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗುತ್ತಿದೆ. ಈ ಪತ್ರಿಕಾಗೋಷ್ಠಿಯಲ್ಲೂ ಇದೇ ನಡೆದು ಹೋಯಿತು. ಅವರ ಹಠಮಾರಿತ ಇಲ್ಲಿ ಎದ್ದು ಕಾಣುತ್ತಿತ್ತು.

ಸೆಹ್ವಾಗ್ ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿಯನ್ನು ತಾನು ಆಯ್ದ ಕೆಲವು ಮಾಧ್ಯಮಗಳಿಗೆ ಮಾತ್ರ ನೀಡಿದ್ದೇನೆ ಎಂಬ ಆರೋಪ ಕೆಲವು ಪತ್ರಕರ್ತರಿಂದ ಬಂದಾಗ ಅವರು ಕೆಂಡಾಮಂಡಲವಾದರು.

"ಮಾಹಿತಿ ಸೋರಿಕೆ ಮಾಡಿದ್ದೇನೆಂಬ ಆರೋಪವನ್ನು ನೀವು ನನ್ನ ಮೇಲೆ ಹೊರಿಸುತ್ತಿದ್ದೀರಿ... ನೀವೆಲ್ಲಾ ಇಲ್ಲೇ ಇದ್ದೀರಿ.. ಹಾಗಿದ್ದ ಮೇಲೆ ಯಾರಾದರೊಬ್ಬರೂ ಎದ್ದು ನಿಂತು ಆರೋಪವನ್ನು ಸಾಬೀತುಪಡಿಸಿ..." ಎನ್ನುತ್ತಿದ್ದಾಗಲೇ ಒಬ್ಬ ಪತ್ರಕರ್ತ ಧೋನಿಯವರ ಮಾತುಗಳನ್ನು ತುಂಡರಿಸಿ, "ನಾವು ನಿಮ್ಮ ಮೇಲೆ ಆರೋಪ ಹೊರಿಸುತ್ತಿಲ್ಲ" ಎಂದರು.

ಸೆಹ್ವಾಗ್ ಬಗ್ಗೆ ಯಾವುದೇ ಸ್ಪಷ್ಟ ಮಾತುಗಳನ್ನಾಡದ ಧೋನಿ ಪತ್ರಿಕಾಗೋಷ್ಠಿಯ ನಂತರ ಬಿಸಿಸಿಐ ಅಧಿಕೃತವಾಗಿ ಪ್ರಕಟಣೆ ನೀಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯಿತು. ಈ ನಡುವೆ ತರಬೇತುದಾರ ಗ್ಯಾರಿ ಕರ್ಸ್ಟನ್ ಕೂಡ ಮಾತನಾಡಿ, ಸೆಹ್ವಾಗ್ ನಮ್ಮ ತಂಡದ ಪ್ರಮುಖ ಆಟಗಾರ ಎಂದಿದ್ದರು.

ವೆಬ್ದುನಿಯಾವನ್ನು ಓದಿ