ಐರ್ಲೆಂಡ್ ಮಣಿಸಿದ ಲಂಕಾ ಸೆಮಿ ಹಾದಿ ಸುಗಮ

ಸೋಮವಾರ, 15 ಜೂನ್ 2009 (09:47 IST)
ಭಾನುವಾರ ನಡೆದ ಸೂಪರ್ ಎಂಟರ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾವು ಬಾಲಂಗೋಚಿ ಐರ್ಲೆಂಡ್ ವಿರುದ್ಧ ಒಂಬತ್ತು ರನ್ನುಗಳ ಪ್ರಯಾಸಕರ ಜಯಸಾಧಿಸಿದ್ದು ಸೆಮಿಫೈನಲ್‌ ಹಾದಿಗೆ ಮಲ್ಲಿಗೆ ಹಾಸಿದೆ.

ಸೂಪರ್ ಎಂಟರ ಮೊದಲ ಪಂದ್ಯದಲ್ಲಿ ಪಾಕಿಸ್ತಾವನ್ನು ಮಣಿಸಿದ್ದ ದ್ವೀಪರಾಷ್ಟ್ರವೀಗ 'ಎಫ್' ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಇದೀಗ ಲಂಕಾ ತನ್ನ ಮೂರನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಮಂಗಳವಾರ ಆಡಲಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಇದನ್ನು ಬೆಂಬತ್ತಲು ಹೊರಟ ಐರ್ಲೆಂಡ್ 135 ರನ್ ಮಾಡಲಷ್ಟೇ ಸಾಧ್ಯವಾಯಿತು.

ಮಹೇಲಾ ಜಯವರ್ಧನೆ ತನ್ನ ಅಮೋಘ ಇನ್ನಿಂಗ್ಸ್‌ನಲ್ಲಿ 53 ಎಸೆತಗಳಿಂದ 78 ರನ್ನುಗಳನ್ನು ಚಚ್ಚಿದ್ದರು. ಒಂಬತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡ ಅವರ ಹೊಡೆತದಲ್ಲಿತ್ತು.

ಉಳಿದಂತೆ ಎರಡಂಕಿ ತಲುಪಿದ್ದು ಸನತ್ ಜಯಸೂರ್ಯ (27) ಮತ್ತು ಅಂಜೆಲೆ ಮ್ಯಾಥ್ಯೂಸ್ (10) ಮಾತ್ರ. ತಿಲಕರತ್ನೆ ದಿಲ್‌ಶಾನ್ (0), ಕುಮಾರ ಸಂಗಕ್ಕರ (3), ಚಾಮರ ಸಿಲ್ವಾ (4), ಜೆಹಾನ್ ಮುಬಾರಕ್ (7), ನುವಾನ್ ಕುಲಶೇಖರ (1), ಮುತ್ತಯ್ಯ ಮುರಳೀಧರನ್ (0) ಅಲ್ಪಮೊತ್ತಕ್ಕೆ ಹೊರಟು ಹೋಗಿದ್ದರು. ಲಸಿತ್ ಮಾಲಿಂಗ (1) ಮತ್ತು ಅಜಂತಾ ಮೆಂಡಿಸ್ (4) ಅಜೇಯರಾಗುಳಿದಿದ್ದಾರೆ.

ಐರ್ಲೆಂಡ್ ಪರ ಅಲೆಕ್ಸ್ ಕುಸಾಕ್ 18ಕ್ಕೆ ನಾಲ್ಕು ಮತ್ತು ರಾಂಕಿನ್, ಮೆಕಾಲನ್ ತಲಾ ಎರಡೆರಡು ಹಾಗೂ ಜಾನ್ಸ್‌ಟನ್ ಒಂದು ವಿಕೆಟ್ ಕಬಳಿಸಿದ್ದರು.

145ರ ಗುರಿ ಪಡೆದುಕೊಂಡು ಹೊರಟ ಐರ್ಲೆಂಡ್ ಒಂದು ಹಂತದವರೆಗೆ ಲಂಕಾವನ್ನು ಮಣಿಸುವ ಪ್ರದರ್ಶನ ನೀಡುವಂತಿತ್ತು. ಆದರೆ 10 ಓವರುಗಳ ನಂತರ ದಿಢೀರ್ ಕುಸಿತ ಕಂಡು ಅವಕಾಶ ವಂಚಿತವಾಯಿತು.

ಆರಂಭಿಕ ಆಟಗಾರರಾದ ಪೋರ್ಟರ್‌ಫೀಲ್ಡ್ (31) ಮತ್ತು ನೇಲ್ ಓಬ್ರಿಯನ್ (31) ಅತ್ಯುತ್ತಮ ಭಾಗೀಧಾರಿಕೆ ನೀಡಿದ್ದರು. ಆಂಡ್ರ್ಯೂ ವೈಟ್ (22) ಕೂಡ ಕೈ ಬಿಡಲಿಲ್ಲ.

ಕೆವಿನ್ ಓಬ್ರಿಯಾನ್ (0), ಜಾನ್‌ಸ್ಟನ್ (9), ಬೋಥಾ (0), ಕುಸಾಕ್ (2) ಅಲ್ಪಮೊತ್ತಕ್ಕೆ ಹೊರಟು ಹೋದರೆ ಮೂನೀ (31) ಕೊನೆಯವರೆಗೆ ಹೋರಾಡಿ ಅಜೇಯರಾಗುಳಿದರು.

ಒಟ್ಟಾರೆ 20 ಓವರುಗಳಲ್ಲಿ ಐರ್ಲೆಂಡ್ ಏಳು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಶಕ್ತವಾಯಿತು. ಲಂಕಾ ಪರ ಅಜಂತಾ ಮೆಂಡಿಸ್ ಮತ್ತು ಲಸಿತ್ ಮಾಲಿಂಗ ತಲಾ ಎರಡೆರಡು ವಿಕೆಟ್ ಪಡೆದರೆ ನುವಾನ್ ಕುಲಶೇಖರ ಮತ್ತು ಮುತ್ತಯ್ಯ ಮುರಳೀಧರ್ ಒಂದೊಂದು ಕಿತ್ತರು.

ವೆಬ್ದುನಿಯಾವನ್ನು ಓದಿ