2007: ಘರ್ಜಿಸಿದ ಬಂಗಾಳದ ಹುಲಿ ಗಂಗೂಲಿ

ನಾಗೇಂದ್ರ ತ್ರಾಸಿ

ಮಂಗಳವಾರ, 25 ಡಿಸೆಂಬರ್ 2007 (17:53 IST)
PTI
2007 ಗಂಗೂಲಿಯ ಪಾಲಿಗೆ ಮರೆಯಲಾರದ ವರ್ಷ. ಒಂದೇ ಒಂದು ಕಾರಣಕ್ಕೆ ಅಲ್ಲ, ರಾಯಲ್ ಬೆಂಗಾಲ್ ಟೈಗರ್ ಎಂದು ಕರೆಸಿಕೊಂಡು ಹೆಸರಿಗೆ ತಕ್ಕಂತೆ ರಾಜನಾಗೇ ಇರುವ ಆ ಪ್ರಯತ್ನ ಇದೆಯಲ್ಲ ಅದು ಎಲ್ಲರಿಗೂ ಬರುವುದಿಲ್ಲ. ಅದು ಗಂಗೂಲಿಯಂತಹ ಹುಟ್ಟು ಹೋರಾಟಗಾರನಿಗೆ, ಛಲದಂಕಮಲ್ಲನಿಗೆ ಮಾತ್ರ ಸಾಧ್ಯ.

ಹಠಕ್ಕೆ, ಛಲಕ್ಕೆ ಇಂದು ಗಂಗೂಲಿ ಅನ್ವರ್ಥಕ ನಾಮ. ಗಂಗೂಲಿಯ ಕ್ರಿಕೆಟ್ ಭವಿಷ್ಯವೇ ಮುಗಿಯಿತು ಎಂದವರ ಎದುರು ಇಂದು ಅದೇ ದಾದಾ ಘರ್ಜಿಸುತ್ತ ನಿಂತಿದ್ದಾನೆ. 2006ರಲ್ಲಿ ಏನೆಲ್ಲಾ ಅವಮಾನ ಅನುಭವಿಸಿ. ಗಂಗೂಲಿ ಈಜ್ ಕ್ಲೋಸ್ಡ್ ಚಾಪ್ಟರ್ ಎಂದವರಿಗೆ ತಾನು ಏನು ಎನ್ನುವುದನ್ನು 2007ರಲ್ಲಿ ತೋರಿಸಿದ್ದಾನೆ.

ಗಂಗೂಲಿಯ 2007ರತ್ತ ಒಂದೇ ಒಂದು ನೋಟ ಬೀರಿದರೆ ಅಲ್ಲಿ ಯಶಸ್ಸಿನ ಸರಮಾಲೆಯೇ ಇದೆ. ಮೊದಲು ವನವಾಸದಿಂದ ಬಂದದ್ದು, ಎರಡನೆಯದು ದಾಖಲೆಗಳನ್ನು ಬರೆಯಲಿಕ್ಕೆ ಆಗದಿದ್ದರೂ ತಂಡದ ಆಧಾರ ಸ್ತಂಭವಾಗಿ ನಿಂತದ್ದು. 2007ರಲ್ಲಿ ಆಡಿರುವ 9 ಟೆಸ್ಟ್‌ಗಳಲ್ಲಿ ಸರಾಸರಿ 64ರ ಲೆಕ್ಕದಂತೆ 1023 ರನ್. 30 ಏಕದಿನ ಪಂದ್ಯಗಳಲ್ಲಿ 1120 ರನ್‌ಗಳನ್ನು ಸರಾಸರಿ 43ರ ಲೆಕ್ಕದಂತೆ ಮಾಡಿದ್ದಾರೆ. ಕ್ರಿಕೆಟ್ ಋತುವಿನಲ್ಲಿ ಅತಿ ಹೆಚ್ಚು ರನ್ ಮಾಡಿದ ಎರಡನೆ ಬ್ಯಾಟ್ಸ್‌ಮನ್. ಮೊದಲನೇ ಸ್ಥಾನ ದಕ್ಷಿಣ ಆಫ್ರಿಕದ ಜಾಕ್ ಕಾಲಿಸ್ ಅವರಿಗೆ ದಕ್ಕಿದೆ. ಸರಾಸರಿ ಲೆಕ್ಕ ಹಾಕಿದಲ್ಲಿ ದಾದಾನ ಸರಾಸರಿ ಕಾಲಿಸ್‌ಗಿಂತ (1125) ಒಂದು ತೂಕ ಹೆಚ್ಚಿಗೆ ಇದೆ.
PTI

ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಸರಣಿ ಸೌರವ್ ಪಾಲಿಗೆ ದಾಖಲೆಯ ಸಂತಸವನ್ನು ತಂದು ನೀಡಿತು. ಮೂರು ಟೆಸ್ಟ್‌ಗಳಲ್ಲಿ ಐನೂರಕ್ಕೂ ಹೆಚ್ಚು ರನ್ ಮಾಡಿದ್ದು, ಚಿನ್ನಸ್ವಾಮಿ ಕ್ರಿಕೆಟ್ ಅಂಗಳದಲ್ಲಿ ದ್ವಿಶತಕ (239) ರನ್ ಮಾಡಿದ್ದು ಅಲ್ಲದೇ ತವರು ಪಿಚ್ (ಈಡನ್ ಗಾರ್ಡನ್)ನಲ್ಲಿ ಮೊದಲ ಶತಕ ದಾಖಲಿಸಿದ್ದು ಅವಿಸ್ಮರಣೀಯ ಘಳಿಗೆಗಳು.

ತನಗೆ ತಾನೇ ಶ್ರೇಷ್ಠ ಎಂದು ತಿಳಿದುಕೊಂಡ ಗ್ರೆಗ್ ಚಾಪೆಲ್ ಮತ್ತು ಚಾಪೆಲ್ ಶ್ರೇಷ್ಠ ಎಂದು ತಿಳಿದುಕೊಂಡಿದ್ದ ಕಿರಣ್ ಮೋರೆಯಂತವರು, ಗಂಗೂಲಿಗೆ ಇನ್ನು ಅವಕಾಶವೇ ಇಲ್ಲ. ಹೊಸಬರಿಗೆ ಮಾತ್ರ ಅವಕಾಶ ಎಂದಿದ್ದರು. ಕರ್ನಲ್ ದಿಲೀಪ್ ವೆಂಗ್ಸರ್ಕಾರ್ ಮನಸ್ಸು ಮಾಡಿ ದ. ಆಫ್ರಿಕಕ್ಕೆ ಕಳಿಸದೇ ಇದ್ದಲ್ಲಿ ಗಂಗೂಲಿಯ ಪುನರಾಗಮನದ ಪುನರಾವತಾರ ನಮ್ಮ ಕಣ್ಣಿಗೆ ಕಾಣುತ್ತಿರಲಿಲ್ಲ ಏನೊ ? ದ. ಆಫ್ರಿಕದ ವಿರುದ್ಧ ನಡೆದ ಮೂರು ಟೆಸ್ಟ್‌ಗಳಲ್ಲಿ 214 ರನ್ ಮಾಡಿದ್ದು ಕೇವಲ ಒಂದು ಆರಂಭವಾಯಿತು ಅಷ್ಟೇ.

ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಒಂದರ ಹಿಂದೆ ಭಾರತಕ್ಕೆ ಬಂದಿಳಿದವು. ಕೆರಿಬಿಯನ್ ತಂಡದ ವಿರುದ್ಧ ಸರಾಸರಿ 60 ರಂತೆ ಮೂರು ಪಂದ್ಯಗಳಲ್ಲಿ 179 ರನ್ ಗಳಿಸಿದರು. ಸಿಂಹಳೀಯ ತಂಡದ ವಿರುದ್ಧ ರನ್ ಸರಾಸರಿ 84ಕ್ಕೆ ಏರಿತು. ನಂತರ ವಿಶ್ವ ಕಪ್ ಬಂತು, ಅಲ್ಲಿ ತಂಡ ಸೋಲಿನೊಂದಿಗೆ ಮರಳಬೇಕಾಯಿತು. ನಂತರ ಐರ್ಲೆಂಡ್, ಇಂಗ್ಲೆಂಡ್, ಮರಳಿ ಭಾರತ ಈಗ ಕಾಂಗರೂಗಳ ನಾಡಿನತ್ತ. ಆಸ್ಟ್ರೇಲಿಯ ಎಂದ ಕೂಡಲೆ ಯಾಕೋ ಗಂಗೂಲಿ ಮತ್ತು 2003ರ ವಿಶ್ವಕಪ್ ಮನಸ್ಸಿನಲ್ಲಿ ಸುಳಿಯುತ್ತದೆ.