ದೇಶವ ಸೆಳೆಯಿತು ಗಮನ- ವೇಣುಗೋಪಾಲ್-ರಾಮದಾಸ್ ಕದನ

2007ರಲ್ಲಿ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೊಳಗಾಗಿದ್ದು ಕೇಂದ್ರದ ಆರೋಗ್ಯ ಸಚಿವರ ರಾಜಕೀಯ. ದೇಶದ ಪ್ರತಿಷ್ಠಿತ ಆರೋಗ್ಯ ಸಂಸ್ಥೆ ಎಐಐಎಂಎಸ್ ನಿರ್ದೇಶಕ ಪದವಿಯಿಂದ ಹೃದ್ರೋಗ ತಜ್ಞ ಪಿ.ವೇಣುಗೋಪಾಲ್ ಅವರನ್ನು ಉಚ್ಚಾಟಿಸಲು ಅವರು ಮಾಡಿದ ಪ್ರಯತ್ನಗಳಂತೂ ಎಲ್ಲರ ಕಣ್ಸೆಳೆಯಿತು.

ಎಂಬಿಬಿಎಸ್ ಅಧ್ಯಯನ ವೇಳೆ, ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯ ಇಂಟರ್ನ್‌ಶಿಪ್ ಮಾಡುವ ಪ್ರಸ್ತಾಪದ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ, ಭಾರೀ ಪ್ರಮಾಣದಲ್ಲಿ "ಗಾಂಧಿ ಗಿರಿ" ಪ್ರದರ್ಶನವೂ ವೈದ್ಯಕೀಯ ಕ್ಷೇತ್ರದಿಂದ ಗಮನ ಸೆಳೆಯಿತು.

ಕಳೆದ ಎರಡೂವರೆ ವರ್ಷಗಳಿಂದ ವೇಣುಗೋಪಾಲ್ ಅವರನ್ನು ಹುದ್ದೆಯಿಂದ ತೆಗೆಯುವ ಸಚಿವ ಅನ್ಬುಮಣಿ ರಾಮದಾಸ್ ಅವರ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ, ಕೇಂದ್ರ ಸರಕಾರವು ಎಐಐಎಂಎಸ್ ನಿರ್ದೇಶಕರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಇಲ್ಲವೇ, ಈ ಹುದ್ದೆಯಲ್ಲಿ ಗರಿಷ್ಠ ಐದು ವರ್ಷ ಸೇವೆ ಮಾತ್ರ ಸಾಧ್ಯ ಎಂದು ನಿಗದಿಪಡಿಸಿ ಸುಗ್ರೀವಾಜ್ಞೆ ಹೊರತಂದು, ಕಾಲಿಗಡ್ಡ ಬಂದ ವೇಣುಗೋಪಾಲ್‌ರನ್ನು ಕಿತ್ತು ಹಾಕುವಲ್ಲಿ ಯಶಸ್ವಿಯಾಯಿತು.

ಈ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಕೆಲವೇ ಕ್ಷಣಗಳಲ್ಲಿ ಆರೋಗ್ಯ ಸಚಿವಾಲಯವು ಎಐಐಎಂಎಸ್ ನಿರ್ದೇಶಕರಾಗಿ ಅದೇ ಸಂಸ್ಥೆಯಲ್ಲಿ ಫೋರೆನ್ಸಿಕ್ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದ ಟಿ.ಡಿ.ದೋಗ್ರಾರನ್ನು ನೇಮಕ ಮಾಡಿ ಆದೇಶ ಹೊರಡಿಸಿತು.

ವೇಣುಗೋಪಾಲ್ ಅವರು ನ್ಯಾಯ ಕೇಳಿ ಸುಪ್ರೀಂ ಕೋರ್ಟ್ ಮೊರೆ ಹೋದಾಗ, ಈ ವಿವಾದಾತ್ಮಕ ಕಾನೂನು ಅವಸರವಸರವಾಗಿ ತರುವ ಉದ್ದೇಶವೇನಿತ್ತು ಎಂದು ಅದು ಕೇಂದ್ರವನ್ನು ಪ್ರಶ್ನಿಸಿತು.

ಇನ್ನೊಂದೆಡೆಯಿಂದ, ಗ್ರಾಮೀಣ ಸೇವೆ ಕಡ್ಡಾಯ ಎಂಬ ಪ್ರಸ್ತಾಪದ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳು ಬೀದಿಗಿಳಿದರು. ಗಾಂಧಿಗಿರಿಯ ಉದಾಹರಣೆಯಾಗಿ, "ದಯವಿಟ್ಟು ನಮ್ಮನ್ನು ಮದುವೆಯಾಗಿ" ಎಂಬ ಸಂದೇಶ ಹೊತ್ತ ಫಲಕವೊಂದನ್ನು ವಿದ್ಯಾರ್ಥಿನಿಯೊಬ್ಬಳು ಪ್ರದರ್ಶಿಸಿದಾಗ ಎಲ್ಲರ ಗಮನ ಅತ್ತ ಹೋಯಿತು. ಇದಕ್ಕೆ ಅವರು ನೀಡುವ ಕಾರಣ, ತಾವು ತಮ್ಮ ಎಂಬಿಬಿಎಸ್ ಕೋರ್ಸ್ ಮುಗಿಸುವಾಗ ಮದುವೆಯಾಗುವ ವಯಸ್ಸು ಮೀರಿ ಹೋಗಿರುತ್ತದೆ ಎಂಬುದು.

ವೆಬ್ದುನಿಯಾವನ್ನು ಓದಿ