ನಿರ್ಣಯ ಇರೋದೆ ಪಾಲಿಸದಿರುವುದಕ್ಕೆ

ನಾಗೇಂದ್ರ ತ್ರಾಸಿ

ಸೋಮವಾರ, 31 ಡಿಸೆಂಬರ್ 2007 (18:26 IST)
ಕೆಲ ನಿರ್ಣಯಗಳು ಭವಿಷ್ಯದ ದೃಷ್ಟಿಯಿಂದ ತೆಗೆದುಕೊಳ್ಳಬೇಕು ಮತ್ತು ಅವುಗಳನ್ನು ಜಾರಿಗೊಳಿಸಬೇಕು ಎಂಬ ನಿರ್ಣಯವನ್ನು ಈಗಾಗಲೇ ತೆಗೆದುಕೊಂಡಾಗಿದೆ.

ಈ ನಿರ್ಣಯಗಳು ಹ್ಯಾಗೆ ಅಂದರೆ ಸರಕಾರ ಮಂಡಿಸುವ ಮಸೂದೆ ಇದ್ದ ಹಾಗೆ. ಮೊದಲು ವಿಚಾರ ನಂತರ ಜಾರಿ, ಅದರ ಮೇಲೂ ವಿರೋಧ ವ್ಯಕ್ತವಾಗಲು ಶುರುವಾದರೆ ಕಾನೂನೇ ರದ್ದು. ಆಗ ಆಗುವುದು ಅತಂತ್ರ. ಅತ್ತ ಸ್ನೇಹಿತರ ಮುಂದೆ ಬಡಾಯಿಕೊಚ್ಚಿ ಜನವರಿ 1ರಿಂದ ನೋ. ಇಲ್ಲವೇ ಇಲ್ಲ ಎಂದು ಹೇಳಿದವ, ಎಂಟು ದಿನಗಳ ನಂತರ ಪುನಃ ತನ್ನ ಚಾಳಿ ಪ್ರಾರಂಭಿಸಿದರೆ ಜನರ ಎದುರು ಮೊನ್ನೆ ಕರ್ನಾಟಕ ಸರಕಾರ ನಗೆ ಪಾಟಲು ಆಗಿತ್ತಲ್ಲ ಅಂತ ಪರಿಸ್ಥಿತಿ ಎದುರಾಗಬಾರದು ಎನ್ನುವ ಒಂದೇ ಉದ್ದೇಶದಿಂದ ಯಾವುದೇ ಹೊಸ ನಿರ್ಣಯಗಳಿಲ್ಲದೆ ಈ ವರ್ಷವನ್ನು ಎದುರುಗೊಳ್ಳಲಾಗುತ್ತಿದೆ. ಇದ್ದರೂ ಸಹಿತ ಗುಪ್ತವಾಗಿ ಅನುಷ್ಠಾನ ಮಾಡಲು ನಿರ್ಧರಿಸಿದ್ದೇವೆ. ಯಾಕೆ ಅಂದರೆ ಆಮೇಲೆ ವಿರೋಧ ಬಂದು ಮತ್ತಿನ್ನೇನೋ ಆಗಿ ನಗೆ ಪಾಟಲಿಗೆ ತುತ್ತಾಗಿ ಪರಿಪಾಟಲು ಪಡಬಾರದು.

2007ನ್ನು ಕೆಲಕಾಲ ನೆನೆಸಿಕೊಂಡು ಮುಂದಿನ ವರ್ಷದಲ್ಲಿ ತೆಗೆದುಕೊಳ್ಳುವ ಕೆಲವೇ ನಿರ್ಣಯಗಳ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಉದ್ದೇಶ. ಇದು ಒಂದು ರೀತಿಯಲ್ಲಿ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಇದ್ದ ಹಾಗೆ. ಇವುಗಳು ಜಾರಿಯಾದರೂ ಹಾನಿಯಿಲ್ಲ. ಜಾರಿಯಾದ ಮೇಲೆ ವಿರೋಧ ವ್ಯಕ್ತವಾಗಿ ಹಿಂದೆಗೆದುಕೊಂಡರೂ ಸರಕಾರದ ಮುಖಕ್ಕೆ ಅಂದರೆ ನನ್ನ ಮುಖಕ್ಕೆ ಮಸಿಯೂ ತಾಗುವುದಿಲ್ಲ.

ವೃತ್ತಿ ಜೀವನದ ದೃಷ್ಟಿಯಿಂದ ಈ ವರ್ಷ ಯಶಸ್ಸಿನ ಹಾದಿಯಲ್ಲಿ ಸಾಗಬೇಕು. ಕಳೆದ ವರ್ಷ ವೃತ್ತಿ ಜೀವನ ತೃಪ್ತಿ ತಂದಿದೆ. ಈ ಬಾರಿ ಸಂತೃಪ್ತಿ ಸಿಗಬೇಕು. ಸಿಗದೇ ಇದ್ದರೂ ಪರವಾಯಿಲ್ಲ. ಕನಿಷ್ಠ ವೃತ್ತಿ ಜೀವನದ ಹೊಸ ಸವಾಲುಗಳಿಗೆ ಬದುಕು ತೆರೆದುಕೊಳ್ಳಬೇಕು.

ಸುದ್ದಿ ಮತ್ತು ಲೇಖನಗಳಲ್ಲಿ ಇನ್ನೂ ಬಲವಾದ ಹಿಡಿತ ಬೇಕು. ಹಿಡಿತ ಬರಬೇಕು ಎಂದರೆ ಓದಬೇಕು. ಓದಬೇಕು ಎಂದರೆ ಕುಂಭಕರ್ಣನ ಅಪರಾವತಾರದಿಂದ ಮುಕ್ತಿ ಪಡೆಯಬೇಕು. ಇದು ಒಂದು ರೀತಿಯಲ್ಲಿ ಸನ್ಯಾಸಿ ಬೆಕ್ಕು ಸಾಕಿದ ಕಥೆಯ ಜಾಡಿನಲ್ಲಿ ಸಾಗುತ್ತಿದೆ.

ವೆಬ್ದುನಿಯಾವನ್ನು ಓದಿ