ನೀವು ಉಗುರುಗಳಿಗೆ ಹಚ್ಚಿದ ಬಣ್ಣಗಳು ತುಂಬಾದಿನ ಚೆನ್ನಾಗಿರಲು ಹೀಗೆ ಮಾಡಿ..
ಗುರುವಾರ, 12 ಜುಲೈ 2018 (14:46 IST)
ಈ ದಿನಗಳಲ್ಲಿ ಎಲ್ಲ ಮಹಿಳೆಯರೂ ಅಂದವಾಗಿ ಕಾಣಲು ಉಗುರುಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಅವರಿಗೆ ಹಚ್ಚಿಕೊಳ್ಳುವ ಮತ್ತು ಅದು ಬಹಳ ದಿನಗಳವರೆಗೆ ಅಂದಗೆಡದಂತೆ ಚೆನ್ನಾಗಿ ಇರಿಸಿಕೊಳ್ಳುವ ವಿಧಾನಗಳು ತಿಳಿದಿರುವುದಿಲ್ಲ.
ಇದರಿಂದ ಎಷ್ಟೇ ಬೆಲೆಬಾಳುವ ಮತ್ತು ಉತ್ತಮ ಗುಣಮಟ್ಟದ ಉಗುರಿನ ಬಣ್ಣವನ್ನು ಹಚ್ಚಿಕೊಂಡರೂ ಕೆಲವೇ ದಿನಗಳಲ್ಲಿ ಹಾಳಾಗಿ ಹೋಗುತ್ತದೆ. ಹಾಗಾಗಿ ನೀವು ಹಚ್ಚಿಕೊಂಡ ಉಗುರು ಬಣ್ಣವು ದೀರ್ಘಕಾಲ ಬಾಳಿಕೆ ಬರಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ ನೋಡಿ.
*ಚಿಕ್ಕ ಉಗುರುಗಳು - ನಿಮ್ಮ ಉಗುರುಗಳು ಉದ್ದವಾಗಿದ್ದಾಗ ನೀವು ಅವುಗಳನ್ನು ನಿಮ್ಮ ಕೆಲಸಗಳಿಗೆ ಹೆಚ್ಚು ಹೆಚ್ಚು ಬಳಸುವಂತಾಗುತ್ತದೆ ಮತ್ತು ಅಡ್ಡಬರುತ್ತದೆ. ಉದಾ: ಮೇಕಪ್ ಹಚ್ಚುವಾಗ, ಟೈಪ್ ಮಾಡುವಾಗ, ಪಾತ್ರೆ ತೊಳೆಯುವಾಗ, ಇತರೆ. ಹಾಗಾಗಿ ನಿಮ್ಮ ಉಗುರುಗಳಿಗೆ ಹಚ್ಚಿದ ಬಣ್ಣವು ಬಹಳ ಬೇಗನೆ ಹಾಳಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನೀವು ಚಿಕ್ಕ ಉಗುರುಗಳನ್ನು ಇರಿಸಿಕೊಂಡರೆ ಅವುಗಳು ಯಾವುದೇ ಕೆಲಸ ಮಾಡುವಾಗ ಅಡ್ಡಬರದ ಕಾರಣ ಉಗುರಿನ ಬಣ್ಣ ತುಂಬಾ ದಿನ ಚೆನ್ನಾಗಿರುತ್ತದೆ.
*ಗ್ಲೌಸ್‌ಗಳನ್ನು ಬಳಸಿ - ಪಾತ್ರೆಯನ್ನು ತೊಳೆಯುವಾಗ, ಬಟ್ಟೆ ತೊಳೆಯುವಾಗ ನಿಮ್ಮ ಕೈಗಳಿಗೆ ಗ್ಲೌಸ್ ಹಾಕಿಕೊಳ್ಳಿ. ಸೋಪು ಮತ್ತು ಡಿಶ್ ವಾಶ್‌ಗಳು ನಿಮ್ಮ ಚರ್ಮವನ್ನು ಒಣಗಿಸುತ್ತದೆ ಮತ್ತು ಉಗುರಿನ ಹೊಳಪನ್ನು ಕೆಡಿಸುತ್ತದೆ. ಇಂತಹ ಕೆಲಸಗಳನ್ನು ಮಾಡುವಾಗ ನಿಮ್ಮ ಉಗುರಿನ ಬಣ್ಣವೂ ಸಹ ಬೇಗನೆ ಹಾಳಾಗುತ್ತದೆ.
*ಆರಲು ಸಾಕಷ್ಟು ಸಮಯವನ್ನು ನೀಡಿ: ನೀವು ಉಗುರುಗಳಿಗೆ ಬಣ್ಣವನ್ನು ಹಚ್ಚಿಕೊಂಡಾಗ ಅದು ಒಣಗುವುದಕ್ಕೆ ಸಾಕಷ್ಟು ಸಮಯವನ್ನು ನೀಡಿ. ಒಣಗಿದೆಯೇ ಎಂದು ತಿಳಿದುಕೊಳ್ಳಲು ನಿಮ್ಮ ಬಣ್ಣ ಹಚ್ಚಿದ ಉಗುರುಗಳನ್ನು ಪರಸ್ಪರ ಮುಖ ಮಾಡಿ ಒಂದಕ್ಕೊಂದನ್ನು ನಯವಾಗಿ ತೀಡಬೇಕು. ಒಂದಕ್ಕೊಂದು ಅಂಟಿಕೊಂಡರೆ ಅದು ಇನ್ನೂ ಒಣಗಬೇಕು ಎಂದು ಮತ್ತು ಅಂಟದೇ ಇದ್ದರೆ ಒಣಗಿದೆ ಎಂದರ್ಥ.
*ಐಸ್ ನೀರಿನಲ್ಲಿ ಉಗುರನ್ನು ಅದ್ದಿ: ಉಗುರುಗಳಿಗೆ ಬಣ್ಣವನ್ನು ಹಚ್ಚಿದ ತಕ್ಷಣ ಅದನ್ನು ಐಸ್ ನೀರಿನಲ್ಲಿ 2-3 ನಿಮಿಷ ಅದ್ದಿ. ಹೀಗೆ ಮಾಡುವುದರಿಂದ ನೀವು ಹಚ್ಚಿಕೊಂಡ ಬಣ್ಣ ಶೀಘ್ರವಾಗಿ ಒಣಗುತ್ತದೆ.
*ಉಗುರುಗಳ ಅಂಚನ್ನು ಮುಚ್ಚಿ: ನೀವು ಉಗುರುಗಳಿಗೆ ಬಣ್ಣವನ್ನು ಹಚ್ಚಿ ನಂತರ ಟಾಪ್ ಕೋಟ್ ಅನ್ನು ಹಚ್ಚುವಾಗ ಅವುಗಳ ಅಂಚುಗಳಿಗೂ ಸಹ ಸರಿಯಾಗಿ ಹಚ್ಚಬೇಕು. ಆಗ ಉಗುರಿನ ಬಣ್ಣವು ತುಂಬಾದಿನ ಬಾಳಿಕೆ ಬರುತ್ತದೆ.
*ಉಗುರಿನ ಬಣ್ಣವನ್ನು ತೆಳುವಾಗಿ ಹಚ್ಚಿಕೊಳ್ಳಿ: ಉಗುರಿನ ಬಣ್ಣವನ್ನು ದಪ್ಪವಾಗಿ ಹಚ್ಚಿದರೆ ಅದು ಸಿಪ್ಪೆ ಸುಲಿದಂತೆ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಬ್ರಶ್‌ನಲ್ಲಿ ಬಣ್ಣವನ್ನು ಹದವಾಗಿ ತೆಗೆದುಕೊಂಡು ಹಚ್ಚಿಕೊಳ್ಳಿ.
*ಬಣ್ಣವನ್ನು ಒಂದೇ ದಿಕ್ಕಿನಲ್ಲಿ ಹಚ್ಚಿಕೊಳ್ಳಿ: ವಿರುದ್ಧ ದಿಕ್ಕಿನಲ್ಲಿ ಬಣ್ಣ ಹಚ್ಚುವುದರಿಂದ ಅದು ಬೇಗನೆ ಸಿಪ್ಪೆ ಸುಲಿಯುವ ಹಾಗೂ ಒಡೆದುಹೋಗುವ ಸಾಧ್ಯತೆಗಳಿವೆ.
*ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಿ: ಉಗುರುಗಳ ಒಡೆಯುವಿಕೆ, ಸಿಪ್ಪೆಸುಲಿಯುವುದು ಮುಂತಾದ ಸಮಸ್ಯೆಗಳಿದ್ದರೆ ಸರಿಹೊಂದುವ ಉಗುರುಗಳ ಬಲವರ್ಧಕಗಳನ್ನು ಬಳಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಯಾವಾಗಲೂ ನಿಮ್ಮ ಉಗುರುಗಳಿಗೆ ಉತ್ತಮ ಆಕಾರವನ್ನು ನೀಡುತ್ತಾ ಅದು ಸರಿಯಾಗಿರುವಂತೆ ನೋಡಿಕೊಳ್ಳಿ.
*ಹ್ಯಾಂಡ್ ಸ್ಯಾನಿಟೈಸರ್‌ನಿಂದ ದೂರವಿರಿ: ನೀವು ಉಗುರುಗಳಿಗೆ ಬಣ್ಣವನ್ನು ಹಚ್ಚಿಕೊಂಡಿದ್ದು ಅದು ಚೆನ್ನಾಗಿ ಇರಬೇಕೆಂದರೆ ಸ್ಯಾನಿಟೈಸರ್‌ನಿಂದ ಆದಷ್ಟು ದೂರವಿರಿ. ಇದರಲ್ಲಿ ಆಲ್ಕೋಹಾಲ್ ಇರುವುದರಿಂದ ಅದು ಉಗುರಿನ ಬಣ್ಣದ ಹೊಳಪನ್ನು ಹಾಳುಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಸೌಮ್ಯವಾದ ಕೈ ಸೋಪು ಮತ್ತು ಬೆಚ್ಚಗಿನ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.
*ನಿಮ್ಮ ಉಗುರುಗಳನ್ನು ನೀರಿನಲ್ಲಿ ನೆನೆಸುವುದನ್ನು ಬಿಡಿ: ಉಗುರುಗಳಿಗೆ ಬಣ್ಣ ಹಚ್ಚುವ ಮೊದಲು ನೀರಿನಲ್ಲಿ ನೆನೆಸಿದರೆ ಉಗುರುಗಳು ನೀರನ್ನು ಹೀರಿಕೊಳ್ಳುತ್ತದೆ. ಬಣ್ಣ ಹಚ್ಚಿದ ನಂತರ ನೀರು ಆವಿಯಾಗಿ ಅದು ಉಗುರುಗಳಿಗೆ ಹಚ್ಚಿದ ಬಣ್ಣವು ಬಿರುಕು ಬಿಡಲು ಮತ್ತು ಕಿತ್ತು ಹೋಗಲು ಕಾರಣವಾಗುತ್ತದೆ.
ಈ ಸಲಹೆಗಳನ್ನು ಪಾಲಿಸಿ ನೀವು ಉಗುರುಗಳಿಗೆ ಹಚ್ಚಿದ ಬಣ್ಣವು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಿ.`