ಮೊಡವೆಗಳಿಂದ ಮುಖದ ಅಂದ ಕಳೆಗುಂದುತ್ತಿದೆಯೇ?

ಸೋಮವಾರ, 8 ಅಕ್ಟೋಬರ್ 2018 (15:37 IST)
ಹೆಂಗಳೆಯರ ಪರಮ ಶತ್ರು ಎಂದರೆ ಮೊಡವೆಗಳು ಎಂದು ಹೇಳಬಹುದು. ಅವುಗಳಿಂದ ಸೌಂದರ್ಯವು ಕಳೆಗುಂದುತ್ತವೆ. ಅವುಗಳಿಗೆ ರಾಸಾಯನಿಕವಾದ ಪೌಡರ್‌ಗಳು, ತೈಲಗಳನ್ನು ಹಚ್ಚಿ ಕಲೆಗಳು ಉಂಟಾಗುವಂತೆ ಮಾಡುವುದಕ್ಕಿಂತ ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳನ್ನು ಹಚ್ಚುವುದರಿಂದ ಮುಖದಲ್ಲಿ ಆಗುವ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳುವದಲ್ಲದೇ ಅದರಿಂದ ಉಂಟಾಗುವ ಕಲೆಗಳಿಂದಲೂ ಮುಕ್ತಿಯನ್ನು ಪಡೆದುಕೊಳ್ಳಬಹುದು. 
- ತುಳಸಿ : ತುಳಸಿಯ ಪೇಸ್ಟ್ ಅನ್ನು ಪ್ರತಿದಿನವೂ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳಿಂದಾಗಿ ಮುಖದ ಮೇಲಾಗಿರುವ ಕಲೆಗಳು ನಿವಾರಮೆಯಾಗುತ್ತವೆ.
 
- ಟೊಮೆಟೊ : ಒಂದು ಟೊಮೆಟೊವನ್ನು ತೆಗೆದುಕೊಂಡು ಅದರ ರಸಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಕಲೆಸಿ ಅದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯುವುದರಿಂದ ಮುಖದ ಮೇಲಾಗಿರುವ ಮೊಡವೆಗಳು ಕಡಿಮೆಯಾಗುತ್ತವೆ.
 
- ಶ್ರೀಗಂಧ : 2 ಚಮಚ ಶ್ರೀಗಂಧದ ಪುಡಿಗೆ ಸ್ವಲ್ಪ ರೋಸ್ ವಾಟರ್ ಅನ್ನು ಬೆರೆಸಿ ಮೊಡವೆಗಳಿಂದಾದ ಕಲೆಗಳಿರುವ ಜಾಗಕ್ಕೆ ಅಥವಾ ಇಡೀ ಮುಖಕ್ಕೆ ಹಚ್ಚಬೇಕು. ಅದು ಒಣಗಿದ ನಂತರ ನೀರಿನಿಂದ ತೊಳೆಯುವುದರಿಂದ ಮೊಡವಗಳ ಪ್ರಮಾಣ ಕಡಿಮೆಯಾಗುತ್ತದೆ.
 
- ಅರಿಶಿನ ಮತ್ತು ಶ್ರೀಗಂಧದ ಮಿಶ್ರಣ : ಮೊದಲು ಶ್ರೀಗಂಧವನ್ನು ತೇಯ್ದುಕೊಂಡು ಅದಕ್ಕೆ ಹಸಿ ಅರಿಶಿನ ಕೊಂಬನ್ನೂ ತೇಯ್ದು ಅದರ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಅದು ಒಣಗಿದ ಮೇಲೆ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೇ ಮುಖದ ಮೇಲಿನ ಮೊಡವೆಯೂ ಸಹ ಕಡಿಮೆ ಆಗುತ್ತದೆ.
 
- ಆಲೂಗಡ್ಡೆ : ಅಲೂಗಡ್ಡೆಯ ಹೋಳನ್ನು ಮೊಡೆವೆಯ ಕಲೆಗಳ ಮೇಲೆ ನೇರವಾಗಿ ಉಜ್ಜಿ ಹದಿನೈದು ನಿಮಿಷಗಳ ನಂತರ ತೊಳೆಯುವುದರಿಂದ ಮುಖವು ಕಾಂತಿಯುಕ್ತವಾಗುತ್ತದೆ.
 
- ಹಸಿ ಹಾಲು : ಹಸಿ ಹಾಲನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.
 
- ಅರಿಶಿನ : ಒಂದು ಚಿಟಿಕೆ ಅರಿಶಿನಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಈ ಮಿಶ್ರಣವನ್ನು ಕಲೆಗಳಿರುವ ಕಡೆಗೆ ಪ್ರತಿದಿನವೂ ಹಚ್ಚುವುದರಿಂದ ಒಂದು ವಾರದಲ್ಲಿಯೇ ಮೊಡವೆಗಳು ಕಡಿಮೆಯಾಗುತ್ತವೆ.
 
- ಮೊಸರು : ಮುಖದಲ್ಲಿ ಬ್ಲ್ಯಾಕ್‌ಹೆಡ್‌ಗಳಿದ್ದಲ್ಲಿ ಅದನ್ನು ನಿವಾರಣೆ ಮಾಡಲು ಮುಖಕ್ಕೆ ಮೊಸರಿನ ಜೊತೆಗೆ ಅಕ್ಕಿಪುಡಿಯನ್ನು ಸೇರಿಸಿ ಮೃದುವಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
 
- ಮುಲ್ತಾನಿ ಮಿಟ್ಟಿ : ಮುಖವು ತುಂಬಾ ತೈಲಯುಕ್ತವಾಗಿ ಅಥವಾ ಜಿಡ್ಡಿನಿಂದ ತುಂಬಿದ್ದರೆ ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್‌ನೊಂದಿಗೆ ಕಲೆಸಿ ಮುಖಕ್ಕೆ ಹಚ್ಚಬೇಕು. ಸ್ವಲ್ಪ ಹೊತ್ತು ಬಿಟ್ಟು ತೊಳೆಯುವುದರಿಂದ ಮುಖದ ತ್ವಚೆಯು ಮೃದುವಾಗುವುದಲ್ಲದೇ ಮೊಡವೆಗಳ ಸಂಖ್ಯೆಯು ಕಡಿಮೆಯಾಗುತ್ತದೆ. 
    
ಇಂದಿನ ವಿದ್ಯಮಾನದಲ್ಲಿ ಹೆಂಗಳೆಯರಿಗೆ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕಷ್ಟದ ಮಾತೇ ಸರಿ. ವಾತಾವರಣದ ಧೂಳು, ವಾಹನದ ಹೊಗೆ, ಕಲುಷಿತ ಗಾಳಿ, ಹೆಚ್ಚು ತೈಲಯುಕ್ತವಾದ ಆಹಾರದ ಬಳಕೆಯಿಂದಾಗಿ ಮುಖದ ಮೇಲೆ ಮೊಡವೆಗಳಾಗುವುದು ಸಹಜ. ಅವು ಮೊದಲು ಸಣ್ಣ ವಿಷಯದಂತೆ ತೋರಿದರೂ ಅವುಗಳಿಂದಾಗುವ ಕಲೆಗಳು ಮುಖದ ಅಂದವನ್ನು ಕಡಿಮೆಗೊಳಿಸುತ್ತದೆ. ಆಗ ರಾಸಾಯನಿಕಯುಕ್ತವಾದ ಕ್ರೀಮ್‌ಗಳನ್ನು ಬಳಸುವುದಕ್ಕಿಂತ ನೈಸರ್ಗಿಕವಾದ ಉತ್ಪನ್ನಗಳನ್ನು ಬಳಸುವುದು ಉತ್ತಮ. ಅದರೆ ಅದಕ್ಕೂ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅವರು ಸೂಚನೆಗಳನ್ನು ಪಾಲಿಸುವುದು ಉತ್ತಮ. ಏಕೆಂದರೆ ನೈಸರ್ಗಿಕವಾಗಿದ್ದರೂ ಕೆಲವೊಂದು ಪದಾರ್ಥಗಳು ಅಲರ್ಜಿಯನ್ನು ಉಂಟುಮಾಡುತ್ತವೆ. ಅದರಲ್ಲಿಯೂ ಮುಖದ ತ್ವಚೆಯು ಸೂಕ್ಷ್ಮವಾಗಿರುವುದರಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಮುಂದುವರೆಯುವುದು ಉತ್ತಮ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ