ಮುಂಬೈ:ಗರ್ಭಿಣಿಯಾದಾಗ ಹಾಗೂ ಹೆರಿಗೆಯ ಬಳಿಕ ಮಹಿಳೆಯರ ದೇಹದಲ್ಲಿ ಹಲವಾರು ಬದಲಾವಣೆಗಳಾಗುವುದು ಸಹಜ. ಹಾಗಂತ ಬಾಣಂತಿಯರು ಇನ್ನೇನು ಮಗುವಾಯಿತು ಎಂದು ನಮ್ಮ ದೇಹ ಸೌಂದರ್ಯದ ಕಡೆಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಹೀಗೆಂದು ಬಾಲಿವುಡ್ ತಾರೆ ಕರೀನಾ ಕಪೂರ್ ಬಾಣಂತಿಯರಿಗೆ ಕೆಲ ಕಿವಿಮಾತು ಹೇಳಿದ್ದಾರೆ. ಮಗುವನ್ನು ನೋಡಿಕೊಳ್ಳುವುದರ ಜತೆಗೆ ತಾಯಂದಿರು ಹೇಗೆ ನಮ್ಮ ಆರೋಗ್ಯದ ಕುರಿತೂ ಗಮನ ಹರಿಸಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ.
ಹೆರಿಗೆಯಾದ ಬಳಿಕ ದೇಹದಲ್ಲಿ ಬದಲಾವಣೆಗಳಾದಾಗ ಮಹಿಳೆಯರು ನಾನು ಮೊದಲಿನ ಶೇಪ್ ಗೆ ಮರಳಲು ಸಾಧ್ಯವೇ ಇಲ್ಲ ಎಂದು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಹೀಗೆ ಬೇಸರಿಸುವ ಅಗತ್ಯವಿಲ್ಲ. ಗರ್ಭಿಣಿಯಾಗುವ ಮೊದಲೇ ಸದೃಢ ಮೈಕಟ್ಟು ಪಡೆದುಕೊಳ್ಳಿ. ಆಹಾರ ಕ್ರಮ ಹಾಗೂ ವ್ಯಾಯಾಮಕ್ಕೆ ಹೆಚ್ಚು ಗಮನ ಹರಿಸಿ. ಉತ್ತಮ ನ್ಯೂಟ್ರಿಷೀಯನ್ ಸಲಹೆ ಪಡೆದು ಅವರು ಹೇಳುವ ಸಲಹೆಗಳನ್ನು ಪಾಲಿಸಿ. ಇದರಿಂದ ಗರ್ಭಿಣಿಯಾದಾಗ ಯಾವುದೇ ತೊಂದರೆಯಾಗದು ಎಂದು ಹೇಳಿದ್ದಾರೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಾನಸಿಕವಾಗಿ ನಿಮ್ಮಲ್ಲಿ ಕೆಲವು ಬದಲಾವಣೆಗಳಾಗುತ್ತದೆ. ನಮ್ಮ ಸುತ್ತಮುತ್ತಲಿನವರು ಅದು ತಿನ್ನಬೇಡ,ಹೀಗೆ ಮಾಡಬೇಡ, ಈ ಬಟ್ಟೆ ಹಾಕಬೇಡ ಎಂದು ಹೇಳುತ್ತಲೇ ಇರುತ್ತಾರೆ. ಹಾಗಂತ ಅದನ್ನೆಲ್ಲ ತಲೆತುಂಬಿಕೊಳ್ಳಬೇಡಿ. ನಿಮಗೆ ಹೇಗೆ ಬೇಕೋ ಹಾಗೆ ಬದುಕಿ ಎಂದು ತಿಳಿಸಿದ್ದಾರೆ.
ಗರ್ಭಿಣಿಯಾದಾಗ ನಮ್ಮ ದೇಹದಲ್ಲಿ ಹೇಗೆ ಬದಲಾವಣೆಗಳಾಗುವವವೋ ಹಾಗೇ ಹೆರಿಗೆ ಬಳಿಕವೂ ಬದಲಾವಣೆಗಳಾಗುತ್ತದೆ. ಹಾಗಂತ ತೂಕ ಕಡಿಮೆ ಮಾಡಿಕೊಳ್ಳಲು ಅವಸರ ಬೇಡ. ಸ್ವಲ್ಪ ಪ್ರಮಾಣದ ಕೊಬ್ಬು ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಿಂದ ಅಗತ್ಯ. ಮಗು ಬೆಳೆಯುತ್ತಿದ್ದಂತೆ ದೇಹದ ಗಾತ್ರ ಸ್ವಲ್ಪ ಕಡಿಮೆಯಾಗುತ್ತಾ ಹೋಗುತ್ತದೆ. ಬಾಣಂತಿಯರು ಪೌಷ್ಠಿಕ ಆಹಾರವನ್ನು ಸೇವಿಸಿ. ಕ್ರಾಶ್ ಡಯಟ್ ಮಾಡಲೇ ಬೇಡಿ.