ಬೆಂಗಳೂರು: ರೋಸ್ ಕೊಟ್ಟು ಸಂಗಾತಿಯನ್ನು ಇಂಪ್ರೆಸ್ ಮಾಡಿದ ಬಳಿಕ ಪ್ರಪೋಸ್ ಮಾಡಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲೇಬೇಕಲ್ಲವೇ? ಅದಕ್ಕಾಗಿ ಇಂದು ಪ್ರಪೋಸಲ್ ಡೇ ಆಚರಿಸಲಾಗುತ್ತಿದೆ.
ಮನಸ್ಸಿನಲ್ಲಿ ಪ್ರೀತಿ ಇಟ್ಟುಕೊಂಡಿರುವ ಎಷ್ಟೋ ಜೀವಗಳು ಇಂದು ಪರಸ್ಪರ ಪ್ರೀತಿ ಹಂಚಿಕೊಂಡು ಪ್ರಪೋಸಲ್ ಡೇ ಆಚರಿಸಿಕೊಳ್ಳುತ್ತಾರೆ. ಇಂತಹದ್ದೊಂದು ಸುಮಧುರ ಕ್ಷಣಕ್ಕಾಗಿ ಎಷ್ಟೋ ದಿನದಿಂದ ಕಾದಿರುತ್ತಾರೆ. ಹೀಗಾಗಿ ಈ ದಿನವನ್ನು ವಿಶೇಷ ಸ್ಥಳ, ಗಳಿಗೆಯಲ್ಲಿ ಆಚರಿಸಿಕೊಳ್ಳಲು ಇಷ್ಟಪಡುತ್ತಾರೆ. ಹಾಗಿದ್ದರೆ ಪ್ರಪೋಸಲ್ ಡೇ ಹಿಂದಿನ ಇಂಟರೆಸ್ಟಿಂಗ್ ಕತೆ ಏನು ಎಂಬುದನ್ನು ಇಲ್ಲಿ ನೋಡಿ.
ಪ್ರಪೋಸಲ್ ಡೇ ಹಿಂದಿದೆ ನೂರಾರು ವರ್ಷಗಳ ಹಿಂದಿನ ಕತೆ
ಶತಮಾನಗಳ ಹಿಂದಿನಿಂದ ತಮ್ಮ ಪ್ರೀತಿಪಾತ್ರರ ಮುಂದೆ ಪ್ರೀತಿ ಹಂಚಿಕೊಳ್ಳುವ ವಿಶೇಷ ದಿನವಿದು. ವಿಶಿಷ್ಟವಾಗಿ ತಮ್ಮ ಸಂಗಾತಿಗೆ ಪ್ರಪೋಸ್ ಮಾಡಿದ ಇತಿಹಾಸಗಳೇ ಇವೆ. ಹಾಗಿದ್ದರೆ ಈ ಸಂಪ್ರದಾಯ ಹುಟ್ಟಿದ್ದು ಯಾವಾಗ ಗೊತ್ತಾ? 1477 ರಲ್ಲಿ ಆಸ್ಟ್ರಿಯನ್ ಆರ್ಚ್ ಡ್ಯೂಕ್ ಮ್ಯಾಕ್ಸಿಮಿಲಿಯನ್ ತನ್ನ ಪ್ರೀತಿಯ ಸಂಗಾತಿಯ ಮುಂದೆ ಮದುವೆಗೆ ವಜ್ರದ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ್ದನಂತೆ.
ಈ ಘಟನೆ ಪ್ರಪೋಸ್ ಡೇಗೆ ನೇರ ಸಂಬಂಧಪಡದೇ ಇದ್ದರೂ ಇಂತಹ ಸಂಪ್ರದಾಯಗಳಿಂದಾಗಿಯೇ ಮುಂದೆ ಪ್ರಪೋಸಲ್ ಡೇ ಎಂಬ ದಿನದ ಹುಟ್ಟಿಗೆ ಕಾರಣವಾಯಿತು ಎನ್ನಲಾಗುತ್ತದೆ. ವಾಲಂಟೈನ್ ವೀಕ್ ನ ಒಂದು ಭಾಗ ಪ್ರಪೋಸಲ್ ಡೇ. ಇತ್ತೀಚೆಗಿನ ಆಧುನಿಕ ದಿನಗಳಲ್ಲಿ ಈ ದಿನಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿದೆ.
ಆಧುನಿಕ ಜಗತ್ತಿನಲ್ಲಿ ಪ್ರಪೋಸ್ ಎನ್ನುವುದು ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಮಹಿಳೆಯರೂ ತಾವೇ ಮುಂದೆ ನಿಂತು ತಮ್ಮ ಪ್ರೀತಿ ಪಾತ್ರರಿಗೆ ತಮ್ಮ ಮನದಾಳದ ಮಾತು ಹಂಚಿಕೊಳ್ಳುತ್ತಾರೆ. ಹೀಗಾಗಿಯೇ ಇಂದಿನ ದಿನಗಳಲ್ಲಿ ಪ್ರಪೋಸಲ್ ಡೇಗೆ ಹೆಚ್ಚಿನ ಪ್ರಾಶಸ್ತ್ಯ ಬಂದಿದೆ.