ತುಳಸಿ ಹಬ್ಬ ಆಚರಣೆ ಹೇಗೆ? ಇದರ ಹಿನ್ನಲೆಯೇನು? ಇಲ್ಲಿದೆ ನೋಡಿ ವಿವರ

ಮಂಗಳವಾರ, 20 ನವೆಂಬರ್ 2018 (10:01 IST)
ಬೆಂಗಳೂರು: ಇಂದು ಎಲ್ಲೆಡೆ ತುಳಸಿ ಹಬ್ಬದ ಸಂಭ್ರಮ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿಯ ನಂತರ ಬರುವ ಹಬ್ಬ ತುಳಸಿ ಹಬ್ಬ. ಇದರ ವಿಶೇಷತೆ ಏನೆಂದು ನೋಡೋಣ.


ಉತ್ಥಾನ ದ್ವಾದಶಿ ಎಂದೂ ಈ ಹಬ್ಬವನ್ನು ಕರೆಯುತ್ತಾರೆ. ಇದು ಹೆಂಗಳೆಯರ ಹಬ್ಬ ಎಂದರೂ ತಪ್ಪಾಗಲಾರದು. ಉತ್ಥಾನ ಎಂದರೆ ಏಳು, ಎಚ್ಚರಗೊಳ್ಳು ಎಂದು ಅರ್ಥ. ಚಾತುರ್ಮಾಸದ ಕಡೆಯ ದಿನವಾದ ಇದು ವಿಷ್ಣುವನ್ನು ಜಾಗೃತಗೊಳಿಸುವ ದಿನ.

ಉತ್ಥಾನ ದ್ವಾದಶಿಯ ಅರ್ಥ ಶಂಖಾಸುರನೆಂಬ ರಾಕ್ಷಸನನ್ನು ಕೊಂದ ವಿಷ್ಣುವು ಆಯಾಸದ ಪರಿಹಾರಕ್ಕೋಸ್ಕರ ದೀರ್ಘ ನಿದ್ರೆಗೊಳಗಾದವನು ನಾಲ್ಕು ತಿಂಗಳ ನಂತರ ಕಾರ್ತಿಕ ಮಾಸ ಶುಕ್ಷ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆ. ಆದ್ದರಿಂದಲೇ ಈ ಹಬ್ಬಕ್ಕೆ ಉತ್ಥಾನ ದ್ವಾದಶಿ ಎಂಬ ಹೆಸರು ಬಂದಿರಬಹುದು.

ಕಿರು ದೀಪಾವಳಿ ಆಶ್ವಯುಜ ಮಾಸದ ನರಕ ಚತುರ್ದಶಿಯ ನಂತರ ಪಾಡ್ಯದಂದು ಶುರುವಾಗುವ ತುಳಸಿ ಅರ್ಚನೆಯು ನಿರಂತರವಾಗಿ 12 ದಿನಗಳವರೆಗೆ ಮುಂದುವರಿಯುತ್ತದೆ. ಎಲ್ಲರ ಮನೆಗಳಲ್ಲೂ ರಾತ್ರಿಯ ವೇಳೆ ತುಳಸೀ ಗಿಡದ ಬಳಿ ಕೃಷ್ಣನ ವಿಗ್ರಹವನ್ನಿಟ್ಟು ಅದಕ್ಕೆ ಅರ್ಚನೆ, ಆರತಿ ಮಾಡಿ, ತುಳಸೀ ಸಂಕೀರ್ತನೆಯೊಂದಿಗೆ ಭಜನೆ ಮಾಡುತ್ತಾರೆ. ದ್ವಾದಶಿಯಂದು ಬೆಳಿಗ್ಗೆ ತುಳಸೀಕಟ್ಟೆಯನ್ನು ವಿಶೇಷವಾಗಿ ಬಾಳೆಕಂದು, ಹೂವು, ರಂಗೋಲಿಗಳಿಂದ ಅಲಂಕರಿಸಿ ನೆಲ್ಲಿಗಿಡ, ಅಗಸೆಗಿಡವನ್ನು ಕಟ್ಟೆಯೊಳಗೆ ನೆಡುತ್ತಾರೆ. ನಂತರ ನೆಲ್ಲಿಕಾಯಿಗಳು, ಬಾಳೆದಿಂಡನ್ನು ಕೊರೆದು ಸೊಡರಿನಂತೆ ಮಾಡಿ ತುಪ್ಪ ಹಾಕಿ ದೀಪಗಳನ್ನು ಬೆಳಗಿಸಿ ದೋಸೆ, ಪಂಚಕಜ್ಜಾಯಗಳಸಮರ್ಪಣೆಯೊಂದಿಗೆ ದೇವಿಯನ್ನು ಆರಾಧಿಸುತ್ತಾರೆ.

ಮತ್ತೊಮ್ಮೆ ಮುಸ್ಸಂಜೆಯಲ್ಲಿ ಪೂಜಿಸಿ ಪಟಾಕಿ, ದುರುಸುಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ಹಾಗಾಗಿ ತುಳಸಿಹಬ್ಬವನ್ನು ‘ಕಿರು ದೀಪಾವಳಿ’ ಎಂದೂ ಕರೆಯುತ್ತಾರೆ. ಸನಾತನ ಸಂಪ್ರದಾಯದ ಪ್ರಕಾರ ಎಲ್ಲರ ಮನೆಗಳಲ್ಲೂ ತುಳಸಿಕಟ್ಟೆಯು ಇದ್ದೇ ಇರುತ್ತದೆ. ಮನೆಯ ಗೃಹಿಣಿಯರು ದಿವಸವೂ ಬೆಳಿಗ್ಗೆ ಮತ್ತು ಸಾಯಂಕಾಲ ತುಳಸೀ ದೇವಿಗೆ ದೀಪವಿಟ್ಟು ಮುತ್ತೈದೆತನಕ್ಕಾಗಿ ಬೇಡಿಕೊಳ್ಳುತ್ತಾರೆ.

ಬೃಂದಾವನದ ಹಿನ್ನಲೆ ತುಳಸಿಯ ಹುಟ್ಟಿಗೆ ಅನೇಕ ಕತೆಗಳು ಪ್ರತೀತಿಯಲ್ಲಿವೆ. ತುಳಸಿಯನ್ನು ವೃಂದಾ, ಬೃಂದಾ, ಪ್ರಸೀದ ಹೀಗೆ ನಾನಾ ಹೆಸರಗಳಿಂದಲೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಮಂಜರಿ ಎನ್ನುತ್ತಾರೆ. ಸ್ವಲ್ಪ ಕೆಂಪಾಗಿರುವ ತುಳಸಿಯನ್ನು ಕೃಷ್ಣ ತುಳಸಿ ಎನ್ನುತ್ತಾರೆ. ಪಚ್ಚೆ ಬಣ್ಣದ ತುಳಸಿ ಶ್ರೀ ತುಳಸಿ ಎಂಬ ಹೆಸರು ಪಡೆದುಕೊಂಡಿದೆ.

ವೃಂದಾವನ ಎಂದು ಹೆಸರು ಬರಲು ಒಂದು ಪೌರಾಣಿಕ ಹಿನ್ನಲೆ ಇದೆ. ಹಿಂದೆ ವೃಂದಾ ಎಂಬ ಹೆಸರಿನ ಒಬ್ಬಳು ಸ್ತ್ರೀಯು ಜಲಂಧರ ಎಂಬ ರಾಕ್ಷಸನ ಪತ್ನಿಯಾಗಿದ್ದಳು. ಅವಳು ಮಹಾ ಪತಿವ್ರತೆ ಕೂಡಾ. ಅವಳ ಪಾತಿವ್ರತ್ಯವನ್ನು ಭಂಗಗೊಳಿಸದ ಹೊರತು ಆ ರಾಕ್ಷಸನ ಸಂಹಾರ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ದೇವತೆಗಳೆಲ್ಲ ವಿಷ್ಣುವಿನ ಮೊರೆ ಹೋಗುತ್ತಾರೆ.

ಯುದ್ಧ ನಡೆಯುತ್ತಿರುವ ಸಮಯದಲ್ಲಿ ವಿಷ್ಣುವು ಜಲಂಧರನ ವೇಷವನ್ನು ಹಾಕಿ ವೃಂದಾಳ ಬಳಿ ಬಂದು ಮೋಸದಿಂದ ಅವಳೊಂದಿಗೆ ಸಮಾಗಮ ಹೊಂದಿದ ತಕ್ಷಷಣ ಆ ಕಡೆ ಜಲಂಧರನ ವಧೆಯಾಗಿರುತ್ತದೆ. ವಿಷ್ಣುವಿನ ಮೋಸದಿಂದ ಕೋಪಗೊಂಡ ವೃಂದಾ ‘ನಿನಗೂ ಪತ್ನಿ ವಿಯೋಗವಾಗಲಿ’ ಎಂದು ವಿಷ್ಣುವಿಗೆ ಶಾ ಕೊಟ್ಟು ಚಿತೆಯೇರುತ್ತಾಳೆ. ಆ ಚಿತೆಯ ಸುತ್ತ ಪಾರ್ವತಿ ನೆಲ್ಲಿ ಮತ್ತು ತುಳಸಿಗಿಡಗಳಿಂದ ಬೃಂದಾವನವನ್ನು ನಿರ್ಮಿಸುತ್ತಾಳೆ. ಮುಂದೆ ತುಳಸಿಯೇ ರುಕ್ಮಿಣಿಯಾಗಿ ಕೃಷ್ಣನನ್ನು ವರಿಸುತ್ತಾಳೆಂದು ಪ್ರತೀತಿಯಿದೆ.

ಹರಿವಲ್ಲಭೆ ತುಳಸಿ ಹಿಂದೆ ಅಮೃತ ಮಥನ ಕಾಲದಲ್ಲಿ ಅಮೃತದ ಕಲಶವನ್ನು ವಿಷ್ಣು ಹಿಡಿದುಕೊಂಡಾಗ ಅವನ ಕಣ್ಣಿನಿಂದ ಉದುರಿದ ಆನಂದಭಾಷ್ಪದ ಒಂದೆರಡು ಹನಿಗಳು ಈ ಕಲಶದಲ್ಲಿ ಬಿದ್ದಾಗ ಅಲ್ಲಿ ತುಳಸಿ ಹುಟ್ಟಿತು ಎಂದೂ ಹೇಳುತ್ತಾರೆ. ಅಲ್ಲಿ ಉದ್ಭವಿಸಿದ ತುಳಸಿಯು ವಿಷ್ಣುವಿನಿಂದ ಮೋಹಿತಳಾಗಿ ತನ್ನನ್ನು ಮದುವೆಯಾಗುವಂತೆ ಆಗ್ರಹಪಡಿಸುತ್ತಾಳೆ. ಅವಳ ವರ್ತನೆಯಿಂದ ಕೋಪಗೊಂಡ ಶ್ರೀಲಕ್ಷ್ಮಿಯು ತುಳಸಿಗೆ ಗಿಡವಾಗುವಂತೆ ಶಾಪಕೊಡುತ್ತಾಳೆ. ಆದರೆ ಭಕ್ತಬಾಂಧವನಾದ ವಿಷ್ಣುವು ತುಳಸಿಗೆ ಸಮಾಧಾನ ಮಾಡುತ್ತ ತಾನು ಸಾಲಿಗ್ರಾಮದ ರೂಪದಲ್ಲಿರುವಾಗ ನಿನ್ನನ್ನು ಜೊತೆಯಲ್ಲಿಟ್ಟುಕೊಳ್ಳುತ್ತೇನೆ ಎಂದು ಹೇಳಿ ಒಪ್ಪಿಸುತ್ತಾನೆ.

ಆದ್ಧರಿಂದ ಎಲ್ಲರ ಮನೆಗಳಲ್ಲೂ ವಿಷ್ಣುರೂಪದ ಸಾಲಿಗ್ರಾಮದ ಮೇಲೆ ತುಳಸಿದಳವನ್ನಿಟ್ಟು ಪೂಜಿಸುತ್ತಾರೆ. ಹಾಗಾಗಿ ತುಳಸಿಯನ್ನು ಹರಿವಲ್ಲಭೆ ಎಂದೂ ಕರೆಯುತ್ತಾರೆ.

ಶ್ರೀಕೃಷ್ಣ ಪರಮಾತ್ಮನ ತುಲಾಭಾರದ ಸಮಯದಲ್ಲಿ ಸತ್ಯಭಾಮೆಯು ತನ್ನ ಮೈ ಮೇಲಿನ ವಜ್ರ ವೈಢೂರ್ಯ ಧನಕನಕಗಳನ್ನೆಲ್ಲ ಇಟ್ಟರೂ ಕೃಷ್ಣನನ್ನು ಹೊತ್ತ ತಕ್ಕಡಿಯು ಕೆಳಗೆ ಇಳಿಯದಿದ್ದಾಗ ರುಕ್ಮಿಣಿಯು ಭಕ್ತಿಭಾವದಿಂದ ಅದರ ಮೇಲೆ ಇರಿಸಿದ ಒಂದೇ ಒಂದು ದಳ ಶ್ರೀ ತುಳಸಿಯು ತಕ್ಕಡಿಯನ್ನು ಮೇಲಿರಿಸಿದುದು ಎಲ್ಲರಿಗೂ ತಿಳಿದ ಕತೆಯೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ