ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ ಆರೋಪಿ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಬಾಯ್ಬಿಟ್ಟಿದ್ದು ಸೈಫ್ ಮೇಲೆ ದಾಳಿ ಮಾಡಿದ್ದೇಕೆ ಎಂದು ಕಾರಣ ನೀಡಿದ್ದಾನೆ.
ಸೈಫ್ ಮನೆಗೆ ಮೊನ್ನೆ ತಡರಾತ್ರಿ ನುಗ್ಗಿದ್ದ ಬಾಂಗ್ಲಾದೇಶೀ ಪ್ರಜೆ ವಿಜಯ್ ದಾಸ್ ಅಲಿಯಾಸ್ ಶರೀಫುಲ್ ಇಸ್ಲಾಂ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ. ಆದರೆ ಸಿಗದೇ ಹೋದಾಗ ಸೈಫ್ ಗೆ ಇರಿದು ಪರಾರಿಯಾಗಿದ್ದ. ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿತ್ತು.
ಇದೀಗ ಬಾಂದ್ರಾ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದು ಸೈಫ್ ಮೇಲೆ ದಾಳಿ ಮಾಡಿದ್ದು ಯಾಕೆ ಎಂದು ಬಾಯ್ಬಿಟ್ಟಿದ್ದಾನೆ. ನಿಜವಾಗಿ ನನಗೆ ಅದು ಸೈಫ್ ಅಲಿ ಖಾನ್ ಮನೆ ಎಂದೇ ಗೊತ್ತಿರಲಿಲ್ಲ. ಯಾರೋ ಶ್ರೀಮಂತರ ಮನೆ ಎಂದು ಒಳಗೆ ನುಗ್ಗಿದ್ದೆ. ಅಪಾರ್ಟ್ ಮೆಂಟ್ ನ 8 ನೇ ಮಹಡಿ ಸರ್ವಿಸ್ ಮೆಟ್ಟಿಲು ಬಳಸಿ ಹತ್ತಿದ್ದೆ. ಬಳಿಕ ಎಸಿ ಡಕ್ ಮೂಲಕ 12 ನೇ ಮಹಡಿಗೆ ಏರಿ ಬಾತ್ ರೂಂ ಕಿಟಿಕಿಯಿಂದ ಸೈಫ್ ಮನೆಗೆ ನುಗ್ಗಿದ್ದೆ ಎಂದಿದ್ದಾನೆ.
ಅಲ್ಲಿ ಸೈಫ್ ಸಹಾಯಕರು ನೋಡಬಹುದು ಎಂದು ಭಯದಿಂದ ಸೈಫ್ ಪುತ್ರ ಜೇಹ್ ಕೋಣೆ ಸೇರಿಕೊಂಡಿದ್ದ. ಆಗ ಸೈಫ್ ಅಲ್ಲಿಗೆ ಬಂದು ಎದುರಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದರು.ಅವರ ಹಿಡಿತದಿಂದ ತಪ್ಪಿಸಿಕೊಳ್ಳಲು ಆರೋಪಿ ಬೆನ್ನಿಗೆ ಚೂರಿಯಿಂದ ಇರಿದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಇದೀಗ ಪೊಲೀಸರು ಮತ್ತೆ ಸೈಫ್ ಮನೆಗೆ ಕರೆತಂದು ಆರೋಪಿಯಿಂದ ಸ್ಥಳ ಮಹಜರು ನಡೆಸಿದ್ದಾರೆ. ಸದ್ಯಕ್ಕೆ ಸೈಫ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿದ್ದು ಅದಾದ ಬಳಿಕ ಅವರ ಹೇಳಿಕೆ ಪಡೆದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.