ಕೊರೊನಾಗೆ ಮೊದಲ ಸಾವು ಕಂಡ ಊರಲ್ಲಿ 144 ಸೆಕ್ಷನ್ ಮುಂದುವರಿಕೆ

ಭಾನುವಾರ, 22 ಮಾರ್ಚ್ 2020 (16:14 IST)
ಕೊರೊನಾ ವೈರಸ್ ನಿಂದ ದೇಶದಲ್ಲಿಯೇ ಮೊದಲ ವ್ಯಕ್ತಿ ಮೃತಪಟ್ಟ ನಗರದಲ್ಲಿ 144 ಸೆಕ್ಷನ್ ಮತ್ತೆ ಮುಂದುವರಿಸಲಾಗಿದೆ. 

ಕೊರೋನಾ ವೈರಸ್ ತಡೆಗಟ್ಟುವ ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಈಗಾಗಲೆ ಕಲಬುರಗಿ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144 ನಿಷೇಧಾಜ್ಞೆಯನ್ನು ಮಾರ್ಚ್ 25 ರ ರಾತ್ರಿ 8 ಗಂಟೆ ವರೆಗೆ ವಿಸ್ತರಿಸಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ.

ಕೊರೋನಾ ಸೊಂಕಿನಿಂದ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ  ಕಲಬುರಗಿ ಜಿಲ್ಲೆಯಾದ್ಯಂತ ಮಾರ್ಚ್ 22ರ  ರಾತ್ರಿ 8 ಗಂಟೆ ವರೆಗೆ‌ ಈ ಹಿಂದೆ ನಿಷೇಧಾಜ್ಞೆ ಜಾರಿಗೊಳಿಸಿ ಡಿ.ಸಿ. ಅದೇಶ ಹೊರಡಿಸಿದ್ದರು. ಇದೀಗ ಪರಿಸ್ಥಿತಿಯ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿಗಳು ಮತ್ತೆ ಮೂರು ದಿನ ನಿಷೇಧಾಜ್ಞೆ ವಿಸ್ತರಿಸಿದ್ದಾರೆ.

ನಿಷೇಧಾಜ್ಞೆಯ ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಧಾರ್ಮಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಗುಂಪು-ಗುಂಪಾಗಿ ಚಲಿಸುವುದು ಮತ್ತು ಅನಾವಶ್ಯಕವಾಗಿ ಸಂಚರಿಸುವಂತಿಲ್ಲ. ಈ ಆದೇಶದಿಂದ ಭಯಪಟ್ಟು ಅಗತ್ಯಕ್ಕಿಂತ ಹೆಚ್ಚು ಅವಶ್ಯ ದಾಸ್ತಾನುಗಳನ್ನು ಸಹ ಖರೀದಿಸುವ ಅಗತ್ಯವಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ. ಅಗತ್ಯ ಸೇವೆಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಡಿ.ಸಿ. ಶರತ್ ಬಿ. ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ