ಮಂಗಳೂರು: ಕೇರಳದ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಅತೀ ಹೆಚ್ಚು ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಕರ್ನಾಟಕದಿಂದ ಕೇರಳಕ್ಕೆ ಸಂಚಾರ ಬಂದ್ ಮಾಡಿ ದ.ಕ. ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕಾಸರಗೋಡಿನಲ್ಲಿ ಇದುವರೆಗೆ 6 ಕೊರೋನಾ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕಿಸುವ ಗಡಿ ಭಾಗದಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಇದೀಗ ಉಭಯ ರಾಜ್ಯಗಳ ನಡುವಿನ ಬಸ್ ಹಾಗೂ ಇತರ ಸಂಚಾರ ವ್ಯವಸ್ಥೆಯನ್ನೂ ಬಂದ್ ಮಾಡಲಾಗಿದೆ.
ಕಾಸರಗೋಡಿನಲ್ಲಿ ನಾಳೆಯಿಂದ ಒಂದು ವಾರ ಕಾಲ ಸಂಪೂರ್ಣ ಬಂದ್ ಮಾಡಲಾಗಿದ್ದು, ಸರಕಾರಿ, ಖಾಸಗಿ ಕಂಪನಿಗಳು, ಸಂಚಾರ, ಅಂಗಡಿ ಮುಂಗಟ್ಟುಗಳು, ಮದುವೆ, ಇನ್ನಿತರ ಸಮಾರಂಭಗಳು, ಕ್ರೀಡಾ ಕೂಟಗಳು ಎಲ್ಲವೂ ಸ್ತಬ್ಧವಾಗಲಿದೆ. ಅಗತ್ಯ ಸೇವೆಗಳನ್ನು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ತೆರೆಯಲು ಜಿಲ್ಲಾಧಿಕಾರಿಗಳು ಇಲ್ಲಿ ಆದೇಶ ನೀಡಿದ್ದಾರೆ.