ಲಾಕ್ ಡೌನ್ ಅಡ್ಡಪರಿಣಾಮಕ್ಕೆ ಇದು ಮದ್ದು

ಬುಧವಾರ, 18 ಆಗಸ್ಟ್ 2021 (10:22 IST)
ಒಂದು ಕಡೆ ಕೊರೊನಾ ವೈರಸ್, ಇನ್ನೊಂದು ಕಡೆ ಆಗಾಗ ಹೇರಲಾಗ್ತಿರುವ ಲಾಕ್ ಡೌನ್ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಸವಾಲಾಗಿದೆ. ದೇಶದಾದ್ಯಂತ ಲಾಕ್ಡೌನ್ ತೆರವುಗೊಳಿಸಲಾಗಿದ್ದರೂ, ಜನರ ಆರೋಗ್ಯ ಮಾತ್ರ ಸುಧಾರಣೆ ಕಾಣ್ತಿಲ್ಲ.

ಆರೋಗ್ಯ ತಜ್ಞರ ಪ್ರಕಾರ, ಲಾಕ್ಡೌನ್ ಜನರ ದೈಹಿಕ ಆರೋಗ್ಯವನ್ನು ಹದಗೆಡಿಸಿದೆ. ಮನೆಯಲ್ಲಿ ಇರುವ ಜನರು ಯಾವುದೇ ದೈಹಿಕ ಕೆಲಸವನ್ನು ಮಾಡ್ತಿಲ್ಲ. ಇದಲ್ಲದೇ, ದೀರ್ಘಕಾಲ ಏಕಾಂಗಿಯಾಗಿ ಉಳಿದ ಅನೇಕರ ಮೇಲೆ ಮಾನಸಿಕ ಪರಿಣಾಮ ಬೀರಿದೆ. ಆರಂಭದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಆರೋಗ್ಯ ತಜ್ಞರು ಹೇಳುವಂತೆ ಲಾಕ್ಡೌನ್ನ ದೈಹಿಕ ಮತ್ತು ಮಾನಸಿಕ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ಯೋಗ ಅತ್ಯುತ್ತಮ ಆಯ್ಕೆ. ಮನಸ್ಸು ಮತ್ತು ದೇಹದ ಸಮತೋಲನವನ್ನು ಹೆಚ್ಚಿಸುವುದರ ಜೊತೆಗೆ, ಯೋಗವು ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಜನರು ಕೆಲ ಅಗತ್ಯ ವ್ಯಾಯಾಮ ಮಾಡಬೇಕಿದೆ.
ಪ್ರಾಣಾಯಾಮ : ಯೋಗ ತಜ್ಞರ ಪ್ರಕಾರ, ಲಾಕ್ಡೌನ್ನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಪ್ರಾಣಾಯಾಮದಂತಹ ಯೋಗಾಭ್ಯಾಸಗಳು ಪ್ರಯೋಜನಕಾರಿ. ಮನಸ್ಸು ಮತ್ತು ದೇಹದ ಸಮತೋಲನವನ್ನು ಹೆಚ್ಚಿಸುವುದರ ಜೊತೆಗೆ, ಪ್ರಾಣಾಯಾಮದ ಅಭ್ಯಾಸವು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಉಸಿರಾಟದ ನರಗಳನ್ನು ವಿಶ್ರಾಂತಿಗೊಳಿಸಲು ಇದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಈ ಆಸನವನ್ನು ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ. ಪ್ರಾಣಾಯಾಮ ಮಾಡಲು, ಶಾಂತವಾದ ಭಂಗಿಯಲ್ಲಿ ಕುಳಿತುಕೊಳ್ಳಿ. ದೇಹವನ್ನು ನೇರವಾಗಿ ಇರಿಸಿ. ಈಗ ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಂತರ ನಿಧಾನವಾಗಿ ಉಸಿರನ್ನು ಬಿಡಿ. ಈ ವ್ಯಾಯಾಮವನ್ನು ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಮಾಡಬೇಕು.
ಸೂರ್ಯ ನಮಸ್ಕಾರ : ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯ ಕಾಪಾಡಿಕೊಳ್ಳಲು ಸೂರ್ಯ ನಮಸ್ಕಾರ ಅತ್ಯಂತ ಪ್ರಯೋಜನಕಾರಿ. ಸೂರ್ಯ ನಮಸ್ಕಾರದಿಂದ ಸಂಪೂರ್ಣ ದೇಹದ ವ್ಯಾಯಾಮವಾಗುತ್ತದೆ. ಸೂರ್ಯ ನಮಸ್ಕಾರ, ದೇಹದ ವಿಷವನ್ನು ತೆಗೆದು ಹಾಕುವುದರ ಜೊತೆಗೆ ಎಲ್ಲಾ ಅಂಗಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಮನಸ್ಸನ್ನು ಉಲ್ಲಾಸಗೊಳಿಸಲು ಮತ್ತು ದೇಹವನ್ನು ದಿನವಿಡೀ ಶಕ್ತಿಯುತವಾಗಿಡಲು ಸೂರ್ಯ ನಮಸ್ಕಾರ ನೆರವಾಗಲಿದೆ.
ಭಜಂಗಾಸನ : ಹೊಟ್ಟೆ ಮತ್ತು ಬೆನ್ನಿನಂತಹ ದೇಹದ ಎಲ್ಲಾ ಭಾಗಗಳನ್ನು ಸಡಿಲಿಸುವುದರ ಜೊತೆಗೆ, ಈ ಯೋಗಾಭ್ಯಾಸವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಈ ಆಸನವನ್ನು ನಿಯಮಿತವಾಗಿ 10-15 ಬಾರಿ ಮಾಡಬಹುದು. ಈ ಯೋಗವು ನಿಮ್ಮನ್ನು ಕೊರೋನಾದಿಂದ ಸುರಕ್ಷಿತವಾಗಿರಿಸಲು ನೆರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ