ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಕೈ ತಪ್ಪಲು ಇವರೇ ಕಾರಣ ಎಂದ ಆಯ್ಕೆಗಾರ ಅಜಿತ್ ಅಗರ್ಕರ್

Krishnaveni K

ಸೋಮವಾರ, 22 ಜುಲೈ 2024 (11:12 IST)
ಮುಂಬೈ: ಶ್ರೀಲಂಕಾಗೆ ಪ್ರಯಾಣ ಬೆಳೆಸುವ ಮೊದಲು ಟೀಂ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅಗರ್ಕರ್ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಕೈತಪ್ಪಲು ಕಾರಣವೇನೆಂದು ವಿವರಿಸಿದ್ದಾರೆ.

ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾ ಟಿ20 ಮಾದರಿಗೆ ಹಾರ್ದಿಕ್ ಪಾಂಡ್ಯ ನಾಯಕರಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಚ್ಚರಿಯೆಂಬಂತೆ ಹಾರ್ದಿಕ್ ಬದಲು ಸೂರ್ಯಕುಮಾರ್ ಯಾದವ್ ರನ್ನು ನಾಯಕರಾಗಿ ಆಯ್ಕೆ ಮಾಡಲಾಗಿತ್ತು.

ಇದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಇಂದು ಗಂಭೀರ್ ಜೊತೆ ಸುದ್ದಿಗೋಷ್ಠಿಯಲ್ಲಿ ಅಗರ್ಕರ್  ‘ಹಾರ್ದಿಕ್ ಪಾಂಡ್ಯ ನಮ್ಮ ತಂಡದ ಅತ್ಯುತ್ತಮ, ಉಪಯುಕ್ತ ಆಟಗಾರ. ಆದರೆ ಅವರ ಫಿಟ್ನೆಸ್ ಸ್ಥಿರವಾಗಿರಲ್ಲ. ಪದೇ ಪದೇ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವುದರಿಂದಲೇ ನಾಯಕ ಸ್ಥಾನಕ್ಕೆ ಸೂಕ್ತವಲ್ಲ ಎನಿಸಿತು. ಇನ್ನು, ನಾಯಕನನ್ನು ಆಯ್ಕೆ ಮಾಡುವುದಕ್ಕೆ ಮೊದಲು ತಂಡದ ಆಟಗಾರರ ಅಭಿಪ್ರಾಯ ಕೇಳಿದ್ದೆವು. ಅವರು ಸೂರ್ಯಕುಮಾರ್ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೇಲೆ ಅವರಿಗೆ ನಾಯಕತ್ವ ನೀಡಿದೆವು’ ಎಂದು ಅಗರ್ಕರ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಕೈ ತಪ್ಪಲು ತಂಡದ ಆಟಗಾರರ ಅಭಿಪ್ರಾಯವೇ ಕಾರಣವಾಯ್ತು ಎಂಬ ಊಹಾಪೋಹಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿತ್ತು. ಅದನ್ನೀಗ ಅಗರ್ಕರ್ ಖಚಿತಪಡಿಸಿದ್ದಾರೆ. ಸೂರ್ಯ ಬಗ್ಗೆ ಆಟಗಾರರ ಒಲವಿದ್ದರಿಂದಲೇ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ