ಮತ್ತೆ ಆರ್ ಸಿಬಿ ಅಭಿಮಾನಿಗಳ ಕೆಣಕಿದ ಅಂಬಟಿ ರಾಯುಡು, ಆರೆಂಜ್ ಕ್ಯಾಪ್ ಗೆದ್ದ ಕೊಹ್ಲಿಗೆ ವ್ಯಂಗ್ಯ

Krishnaveni K

ಸೋಮವಾರ, 27 ಮೇ 2024 (14:29 IST)
ಚೆನ್ನೈ: ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೈದರಾಬಾದ್ ವಿರುದ್ಧ ಸೋತು ಐಪಿಎಲ್ 2024 ರ ಪ್ಲೇ ಆಫ್ ನಿಂದ ನಿರ್ಗಮಿಸಿದ ಬಳಿಕ ಕೊಹ್ಲಿ ಮತ್ತು ಆರ್ ಸಿಬಿ ತಂಡವನ್ನು ಟೀಕಿಸಿ ಸುದ್ದಿಯಾಗಿದ್ದ ಅಂಬಟಿ ರಾಯುಡು ಮತ್ತೊಮ್ಮೆ ವ್ಯಂಗ್ಯ ಮಾಡಿದ್ದಾರೆ.
 

ಆರ್ ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ ಕೆ ವಿರುದ್ಧ ಗೆದ್ದಾಗ ಟ್ರೋಫಿ ಗೆದ್ದಂತೆ ಸಂಭ್ರಮಿಸಿತ್ತು. ಹೀಗಾಗಿ ಇದನ್ನಿಟ್ಟುಕೊಂಡು ಸಿಎಸ್ ಕೆ ಮಾಜಿ ಆಟಗಾರ ಅಂಬಟಿ ರಾಯುಡು ಪ್ಲೇ ಆಫ್ ನಲ್ಲಿ ಆರ್ ಸಿಬಿ ಸೋತಾಗ ಲೇವಡಿ ಮಾಡಿದ್ದರು. ಚೆನ್ನೈ ತಂಡವನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್ ಟೂರ್ನಿ ಗೆದ್ದಂತೆ ಲೆಕ್ಕವಲ್ಲ. ಮೈದಾನದಲ್ಲಿ ಅನಗತ್ಯ ಅಗ್ರೆಷನ್ ಅಗತ್ಯವಿಲ್ಲ ಎಂದು ಕೊಹ್ಲಿಗೂ ಟಾಂಗ್ ಕೊಟ್ಟಿದ್ದರು.

ಇದಾದ ಬಳಿಕ ಆರ್ ಸಿಬಿ ಅಭಿಮಾನಿಗಳು ಅಂಬಟಿ ರಾಯುಡು ಅವರನ್ನು ಎರಡು ದಿನಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದರು. ಆದರೆ ಅಷ್ಟಕ್ಕೇ ರಾಯುಡು ಸುಮ್ಮನೇ ಕೂತಿಲ್ಲ.

ಇದೀಗ ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದ ಬಗ್ಗೆ ಮತ್ತೊಮ್ಮೆ ವ್ಯಂಗ್ಯ ಮಾಡಿದ್ದಾರೆ. ಆರೆಂಜ್ ಕ್ಯಾಪ್ ಗೆದ್ದರೆ ಕಪ್ ಸಿಗದು ಎಂದು ಕೊಹ್ಲಿಯನ್ನು ಕೆಣಕಿದ್ದಾರೆ. ಸ್ಟಾರ್ ಸ್ಪೋರ್ಟ್ ಜೊತೆಗಿನ ಚಿಟ್ ಚ್ಯಾಟ್  ವೇಳೆ ಟ್ರೋಫಿ ಗೆದ್ದ ಕೆಕೆಆರ್ ತಂಡಕ್ಕೆ ಅಭಿನಂದಿಸಿದ ಅಂಬಟಿ ರಾಯುಡು, ‘ಸುನಿಲ್ ನರೈನ್, ಆಂಡ್ರೆ ರಸೆಲ್ ಮಿಚೆಲ್ ಸ್ಟಾರ್ಕ್ ಅವರಂತಹ ದಿಗ್ಗಜರ ಕೊಡುಗೆಯಿಂದ ಕೆಕೆಆರ್ ಈ ಸಾಧನೆ ಮಾಡಿದೆ. ಐಪಿಎಲ್ ಗೆಲ್ಲುವುದು ಎಂದರೆ ಹಾಗೆ. ಇದನ್ನು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಆರೆಂಜ್ ಕ್ಯಾಪ್ ನಿಂದ ಐಪಿಎಲ್ ಟ್ರೋಫಿ ಗೆಲ್ಲಲಾಗದು, ಬದಲಾಗಿ ಪ್ರತೀ ಆಟಗಾರನೂ 300 ರನ್ ಗಳ ಕೊಡುಗೆ ನೀಡಬೇಕು’ ಎಂದಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ಗೆದ್ದ ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ.

ಬಳಿಕ ಕೊಹ್ಲಿಯ ಬಗ್ಗೆ ನೇರವಾಗಿ ಮಾತನಾಡಿರುವ ರಾಯುಡು ‘ವಿರಾಟ್ ಕೊಹ್ಲಿ ತಂಡದಲ್ಲಿರುವ ದಿಗ್ಗಜ ಆಟಗಾರ. ಅವರು ಇತರೆ ಆಟಗಾರರಿಗೆ ತಮ್ಮಷ್ಟೇ ಉತ್ಕೃಷ್ಟ ಪ್ರದರ್ಶನ ನೀಡಲು ಒತ್ತಡ ನೀಡುತ್ತಾರೆ. ವಿರಾಟ್ ತಮ್ಮ ಗುಣಮಟ್ಟವನ್ನು ಕೊಂಚ ಇಳಿಸಿದರೆ ತಂಡದಲ್ಲಿರುವ ಇತರೆ ಆಟಗಾರರೂ ಅವರೊಂದಿಗೆ ಹೊಂದಿಕೊಳ್ಳಬಹುದು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ