ಏಷ್ಯಾ ಕಪ್ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ ಅತೀ ದೊಡ್ಡ ಗೆಲುವು
ಮಂಗಳವಾರ, 12 ಸೆಪ್ಟಂಬರ್ 2023 (08:00 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ 228 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ.
ಇದು ಪಾಕ್ ವಿರುದ್ಧ ರನ್ ಅಂತರದಲ್ಲಿ ಭಾರತದ ಅತೀ ದೊಡ್ಡ ಅಂತರದ ಗೆಲುವಾಗಿದೆ. ಮಳೆಯಿಂದಾಗಿ ಈ ಪಂದ್ಯ ಎರಡು ದಿನಗಳವರೆಗೆ ನಡೆಯಿತು. ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ-ಕೆಎಲ್ ರಾಹುಲ್ ಶತಕದ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತ್ತು.
ಈ ಮೊತ್ತ ಬೆನ್ನತ್ತಿದ ಪಾಕ್ ಗೆ ಆರಂಭದಿಂದಲೇ ಭಾರತದ ವೇಗಿಗಳು ಕಡಿವಾಣ ಹಾಕಿದರು. ಅದರಲ್ಲೂ ಅದ್ಧುತ ಸ್ಪೆಲ್ ನಿರ್ವಹಿಸಿದ ಜಸ್ಪ್ರೀತ್ ಬುಮ್ರಾ ಇಮಾಮ್ ಉಲ್ ಹಕ್ ವಿಕೆಟ್ ಕಬಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಪಾಕ್ ನಾಯಕ ಬಾಬರ್ ಅಜಂ ಬೌಲ್ಡ್ ಆಗಿ ನಿರ್ಗಮಿಸಿದಾಗ ಭಾರತದ ಗೆಲುವಿನ ಹಾದಿ ಆರಂಭವಾಯಿತು.
ಮಧ‍್ಯಮ ಕ್ರಮಾಂಕದಲ್ಲಿ ಪಾಕ್ ಗೆ ಕಡಿವಾಣ ಹಾಕಿದ್ದು ಸ್ಪಿನ್ನರ್ ಕುಲದೀಪ್ ಯಾದವ್. 5 ವಿಕೆಟ್ ಗಳ ಗೊಂಚಲು ಪಡೆದ ಅವರು ಭಾರತದ ಗೆಲುವಿನ ಹಾದಿ ಸುಗಮವಾಗಿಸಿದರು. ಪಾಕ್ ಪರ ಫಕರ್ ಜಮಾನ್ 27, ಅಘಾ ಸಲ್ಮಾನ್, ಇಫ್ತಿಕಾರ್ ಅಹಮ್ಮದ್ ತಲಾ 23 ರನ್ ಗಳ ಕೊಡುಗೆ ನೀಡಿದರು. ಬುಮ್ರಾ, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು. ಪಾಕ್ ತಂಡದಲ್ಲಿ ಗಾಯಗೊಂಡಿದ್ದ ನಸೀಂ ಶಾ, ಹ್ಯಾರಿಸ್ ರೌಫ್ ಬ್ಯಾಟಿಂಗ್ ಗಿಳಿಯಲಿಲ್ಲ. ಹೀಗಾಗಿ 8 ವಿಕೆಟ್ ಪತನಗೊಂಡ ಬಳಿಕ ಪಂದ್ಯ ಸಮಾಪ್ತಿಯಾಯಿತು.