ಏಷ್ಯನ್ ಗೇಮ್ಸ್ ಕ್ರಿಕೆಟ್: ಬಂಗಾರ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡ

ಸೋಮವಾರ, 25 ಸೆಪ್ಟಂಬರ್ 2023 (14:55 IST)
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನ ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಭಾರತ ಮಹಿಳಾ ತಂಡ ಫೈನಲ್ ನಲ್ಲಿ ಶ್ರೀಲಂಕಾವನ್ನು 19 ರನ್ ಗಳಿಂದ ಸೋಲಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದೆ.

ಇಂದು ಟಾಸ್ ಗೆದ್ದ ಹರ್ಮನ್ ಪ್ರೀತ್ ಪಡೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ಆರಂಭದಿಂದಲೇ ಕಡಿವಾಣ ಹಾಕಿದರು.

ಈ ನಡುವೆ ಹಸಿನಿ ಪೆರೇರಾ 25 ನಿಸಾಕ್ಷಿ ಡಿಸಿಲ್ವ  23 ರನ್ ಗಳಿಸಿ ಪ್ರತಿರೋಧ ತೋರಿದರು.  ಆದರೆ ನಿಯಮಿತವಾಗಿ ವಿಕೆಟ್ ಕೀಳಲು ಯಶಸ್ವಿಯಾದ ಭಾರತೀಯ ಬೌಲರ್ ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಲಂಕಾ 20 ಓವರ್ ಗಳಲ್ಲಿ 8  ವಿಕೆಟ್ ನಷ್ಟಕ್ಕೆ 97 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ ಭಾರತ ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಐತಿಹಾಸಿಕ ಸಾಧನೆ ಮಾಡಿತು. ಕಳೆದ ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಫೈನಲ್ ನಲ್ಲಿ ಎಡವಿದ್ದ ಹರ್ಮನ್ ಪಡೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಆ ತಪ್ಪು ಪುನರಾವರ್ತಿಸಲಿಲ್ಲ. ಇದರೊಂದಿಗೆ ಇಂದು ಭಾರತ ಎರಡು ಚಿನ್ನದ ಪದಕ ಗೆದ್ದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ