ರಾಂಚಿ: ಟೀಂ ಇಂಡಿಯಾ ವಿರುದ್ಧ ಕಳೆದ ಎರಡು ಟೆಸ್ಟ್ ಪಂದ್ಯ ಸೋತು ಹತಾಶೆಯಲ್ಲಿರುವ ಇಂಗ್ಲೆಂಡ್ ಇದೀಗ ಎದುರಾಳಿಯನ್ನು ಹಣಿಯಲು ಹೊಸ ತಂತ್ರ ಹೂಡುತ್ತಿದೆ.
ಕಳೆದ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಗರು ಇಂಗ್ಲೆಂಡ್ ಬೌಲಿಂಗ್ ನ್ನು ಪುಡಿಗಟ್ಟಿದ್ದರು. ಅನುಭವಿಗಳ ಅನುಪಸ್ಥಿತಿಯಲ್ಲೂ ಯುವ ಬ್ಯಾಟಿಗರು ಬ್ಯಾಟಿಂಗ್ ಮಾಡಿದ ರೀತಿ ಇಂಗ್ಲೆಂಡ್ ನಿದ್ರೆಗೆಡಿಸಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಹೊಸ ತಂತ್ರ ಹೂಡುತ್ತಿದೆ.
ಕಳೆದ ಪಂದ್ಯಗಳಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡಿರಲಿಲ್ಲ. ಕಳೆದ ನವಂಬರ್ ನಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಬೆನ್ ಸ್ಟೋಕ್ಸ್ ಕೇವಲ ಬ್ಯಾಟಿಂಗ್ ಮಾತ್ರ ಮಾಡುತ್ತಿದ್ದಾರೆ. ಆದರೆ ಇದೀಗ ಭಾರತ ವಿರುದ್ಧ ಸತತ ಸೋಲಿನಿಂದ ಕಂಗೆಟ್ಟಿರುವ ಅವರು ಬೌಲಿಂಗ್ ಕಡೆಗೆ ಗಮನ ಹರಿಸುತ್ತಿದ್ದಾರೆ.
ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಸ್ಟೋಕ್ಸ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಭಾರತ ಸರಣಿಯಲ್ಲಿ ಬೌಲಿಂಗ್ ಮಾಡಲ್ಲ ಎಂದು ಫಿಸಿಯೋಗೆ ಪ್ರಾಮಿಸ್ ಮಾಡಿದ್ದರಂತೆ. ಆದರೆ ಈಗ ತಂಡ ಸಂಕಷ್ಟದಲ್ಲಿದ್ದು, ನಾಲ್ಕನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಪ್ರಾಮಿಸ್ ಮುರಿದು ಬೌಲಿಂಗ್ ಮಾಡಲು ಪಯತ್ನಿಸುವುದಾಗಿ ಹೇಳಿದ್ದಾರೆ.
ಇಂಗ್ಲೆಂಡ್ ಪರ ವೇಗಿಗಳು ಈ ಟೆಸ್ಟ್ ನಲ್ಲಿ ಇದುವರೆಗೆ ಹೇಳಿಕೊಳ್ಳುವ ಯಶಸ್ಸು ಪಡೆದಿಲ್ಲ. ಅನುಭವಿ ಜೇಮ್ಸ್ ಆಂಡರ್ಸನ್ ಗೂ ಹೆಚ್ಚಿನ ಯಶಸ್ಸು ದೊರೆತಿಲ್ಲ. ಅವರಿಗೆ ತಕ್ಕ ಸಾಥ್ ನೀಡುವ ಬೌಲರ್ ಗಳ ಕೊರತೆ ಇಂಗ್ಲೆಂಡ್ ತಂಡದಲ್ಲಿ ಎದ್ದು ಕಾಣುತ್ತಿದೆ.ಹೀಗಾಗಿ ಸ್ಟೋಕ್ಸ್ ಮತ್ತೆ ಬೌಲಿಂಗ್ ಮಾಡುವ ಮೂಲಕ ಆಂಡರ್ಸನ್ ಗೆ ಬಲ ತುಂಬಲಿದ್ದಾರೆ.